ಮಡಿಕೇರಿ ಸುತ್ತಮುತ್ತ ಗುಡುಗು ಸಹಿತ ಭಾರೀ ಮಳೆ
ಮೈಸೂರು

ಮಡಿಕೇರಿ ಸುತ್ತಮುತ್ತ ಗುಡುಗು ಸಹಿತ ಭಾರೀ ಮಳೆ

August 29, 2018

ಮಡಿಕೇರಿ: ಈಗಾಗಲೇ ಪ್ರಕೃತಿ ವಿಕೋಪದ ಅನಾಹುತಗಳಿಗೆ ಸಾಕ್ಷಿಯಾಗಿ ದುಗುಡದಲ್ಲಿ ಮುಳುಗಿ ರುವ ಮಡಿಕೇರಿ ಮತ್ತು ಸುತ್ತಮುತ್ತ ಇದೀಗ ಗುಡುಗು ಸಹಿತ ಭಾರೀ ಮಳೆ ಸುರಿಯಲಾರಂಭಿಸಿದೆ.

ಈಗಾಗಲೇ ಭೂ ಕುಸಿತದಿಂದ ಕಂಗಾಲಾಗಿರುವ ಮಡಿಕೇರಿ ನಗರದ ಬೆಟ್ಟ ಪ್ರದೇಶಗಳ ನಿವಾಸಿಗಳಲ್ಲಿ ಆತಂಕ ಮಡುಗಟ್ಟಿದೆ. ನಗರ ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂದಿಗೂ ಭೂಮಿ ಬಿರುಕು ಬಿಟ್ಟಿರುವ ಪ್ರದೇಶಗಳಿದ್ದು, ಮತ್ತಷ್ಟು ವಿಕೋಪಗಳು ಸಂಭವಿಸುವ ಲಕ್ಷಣಗಳು ಗೋಚರಿಸುತ್ತಿವೆ. ಬೆಟ್ಟಗುಡ್ಡ ಪ್ರದೇಶಗಳ ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಈ ಹಿಂದೆಯೇ ಬೇರೆಡೆಗೆ ಸ್ಥಳಾಂತರ ಮಾಡಲಾಗಿದ್ದು, ಅಳಿದುಳಿದ ಮನೆಗಳು ಕೂಡ ಮಳೆಯಿಂದಾಗಿ ಕುಸಿದು ಬೀಳುವ ಹಂತಕ್ಕೆ ತಲುಪಿವೆ.

ಮತ್ತೆ ಬಿರುಕು: ಮೊಣ್ಣಂಗೇರಿ ವ್ಯಾಪ್ತಿ ಯಲ್ಲಿ 700 ಮೀ. ಉದ್ದಕ್ಕೂ 1 ಅಡಿ ಅಗಲದ ಭಾರೀ ಬಿರುಕು ಮೂಡಿದ್ದು, ನಿಶಾನಿ ಬೆಟ್ಟ ಸಂಪೂರ್ಣವಾಗಿ ಕುಸಿಯುವ ಆತಂಕ ಎದುರಾಗಿದೆ. ಕೆಲ ದಿನಗಳ ಹಿಂದೆ ಈ ಪ್ರದೇಶದಲ್ಲಿ ಯಾವುದೇ ಬಿರುಕು ಮೂಡಿರಲಿಲ್ಲ.

ಈ ವ್ಯಾಪ್ತಿಯಲ್ಲಿ ಭೂ ಕುಸಿತವಾದ ಬಳಿಕ ಮತ್ತೆ ಬಿರುಕು ಮೂಡಿದೆ ಎಂದು ಸ್ಥಳೀಯ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಈ ನಿಶಾನಿ ಬೆಟ್ಟ ಕುಸಿದರೆ ಜೋಡುಪಾಲ, ಮದೆ ನಾಡು ವ್ಯಾಪ್ತಿಯಲ್ಲಿ ಭಾರಿ ಹಾನಿ ಉಂಟಾಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

Translate »