ಕೆ.ಆರ್.ಪೇಟೆ ತಹಸೀಲ್ದಾರ್ ಮಹೇಶ್ ಚಂದ್ರ ಅಪಹರಣ ಪ್ರಕರಣ ನಾಲ್ವರ ಬಂಧನ
ಮೈಸೂರು

ಕೆ.ಆರ್.ಪೇಟೆ ತಹಸೀಲ್ದಾರ್ ಮಹೇಶ್ ಚಂದ್ರ ಅಪಹರಣ ಪ್ರಕರಣ ನಾಲ್ವರ ಬಂಧನ

August 29, 2018

ಕೆ.ಆರ್.ಪೇಟೆ: ಕೆ.ಆರ್.ಪೇಟೆ ತಹಸೀಲ್ದಾರ್ ಮಹೇಶ್ ಚಂದ್ರ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯ ಸ್ಟೋರ್ ಕೀಪರ್ ಸೇರಿದಂತೆ ನಾಲ್ವರನ್ನು ಬಂಧಿಸುವಲ್ಲಿ ಸಾಲಿಗ್ರಾಮ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೆ.ಆರ್.ಪೇಟೆ ತಾಲೂಕು ಶೀಳನೆರೆ ಗ್ರಾಮದವನಾಗಿ ರುವ ರೈಲ್ವೆ ಇಲಾಖೆ ಸ್ಟೋರ್ ಕೀಪರ್ ಕೆ.ಎನ್. ಯೋಗೇಂದ್ರ(30) ಮೂಲತಃ ಶೀಳನೆರೆ ಗ್ರಾಮದ ವನೇ ಆಗಿದ್ದು, ಮೈಸೂರಿನ ಕಾರ್ಖಾನೆಯೊಂದರ ನೌಕರ ಎಸ್.ಎನ್.ದೀಪು ಅಲಿಯಾಸ್ ದೀಪಕ್ (29) ಮೂಲತಃ ಕೆ.ಆರ್.ಪೇಟೆಯ ಮುಸ್ಲಿಂ ಬ್ಲಾಕ್ ನಿವಾಸಿಯಾಗಿದ್ದು, ಬೆಂಗಳೂರು ಮಾಗಡಿ ರಸ್ತೆಯ ಹೋಟೆಲ್‍ವೊಂದರಲ್ಲಿ ಕ್ಯಾಪ್ಟನ್ ಆಗಿರುವ ಎಂ.ಎನ್.ಸೋಮಶೇಖರ್ ಅಲಿಯಾಸ್ ಸೋಮು (31) ಮತ್ತು ಶೀಳನೆರೆ ಗ್ರಾಮದ ಕಾರು ಚಾಲಕ ಎಸ್.ಸಿ.ಚಂದು(24) ಬಂಧಿತರಾಗಿದ್ದು, ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕಳೆದ ಆ.2ರಂದು ರಾತ್ರಿ ಕೆ.ಆರ್.ಪೇಟೆ ತಹಸೀಲ್ದಾರ್ ಮಹೇಶ್ ಚಂದ್ರ ಅವರನ್ನು ಭೇರ್ಯ ಸಮೀಪದ ಚಿಕ್ಕವಡ್ಡರಗುಡಿ ಗ್ರಾಮದ ಬಳಿ ಅಪಹರಿಸಿ ಆ.3ರಂದು ಸಂಜೆ ಕೆ.ಆರ್.ಪೇಟೆ ತಾಲೂಕು ಮಲ್ಕೋನಹಳ್ಳಿ ಗ್ರಾಮದ ಕ್ರಾಸ್ ಬಳಿ ಬಿಡುಗಡೆ ಮಾಡಲಾಗಿತ್ತು.

ಈ ಪ್ರಕರಣದಲ್ಲಿ ಅಪಹರಣಕಾರರು ಯಾರು ಎಂಬುದರ ಬಗ್ಗೆ ಚಿಕ್ಕ ಸುಳಿವೂ ದೊರೆಯದೇ ಪೊಲೀಸರು ಪರದಾಡುತ್ತಿದ್ದರು. ಕೆ.ಆರ್.ನಗರ ಪೊಲೀಸ್ ಇನ್ಸ್‍ಪೆಕ್ಟರ್ ಕೆ.ಕೆ.ರಘು ಮತ್ತು ಸಾಲಿಗ್ರಾಮ ಸಬ್ ಇನ್ಸ್‍ಪೆಕ್ಟರ್ ಮಹೇಶ್ ನೇತೃತ್ವದಲ್ಲಿ ಅಪಹರಣಕಾರರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು.

ಈ ತಂಡವು ತಹಸೀಲ್ದಾರ್ ಅಪಹರಣ ನಡೆದ ಸ್ಥಳ ಮತ್ತು ಅವರನ್ನು ಬಿಡುಗಡೆ ಮಾಡಿದ ಸ್ಥಳದ ಮೊಬೈಲ್ ಟವರ್‍ಗಳಲ್ಲಿ ಕಾರ್ಯ ನಿರ್ವಹಿಸಿರುವ ಸಂಖ್ಯೆಗಳನ್ನು ಕಲೆ ಹಾಕಿ, ಅಪಹರಣದ ಸಮಯ ಮತ್ತು ಬಿಡುಗಡೆಯ ಸಮಯದಲ್ಲಿ ಕಾರ್ಯ ನಿರ್ವಹಿಸಿದ್ದ ಮೊಬೈಲ್‍ಗಳನ್ನು ಪತ್ತೆ ಮಾಡಿ ಆರೋಪಿ ಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಆರೋಪಿಗಳು ತಹಸೀಲ್ದಾರ್ ಮಹೇಶ್ ಚಂದ್ರ ಅವರನ್ನು ಅಪಹರಣ ಮಾಡುವ ಮುನ್ನ ಪೊಲೀಸ ರಿಗೆ ಮೊಬೈಲ್ ಟವರ್ ಲೊಕೇಷನ್ ದೊರೆಯಬಾರ ದೆಂಬ ಕಾರಣಕ್ಕಾಗಿ ತಮ್ಮ ಮೊಬೈಲ್‍ಗಳನ್ನು ಸೈಲೆಂಟ್ ಮಾಡಿ ಮಂಕಿ ಕ್ಯಾಪ್‍ವೊಂದರಲ್ಲಿ ಇಟ್ಟು ಕೆ.ಆರ್. ಪೇಟೆ-ಭೇರ್ಯ ಮುಖ್ಯ ರಸ್ತೆಯಲ್ಲಿರುವ ವಿದ್ಯುತ್ ಕಂಬದ ಬಳಿ ಅಡಗಿಸಿಟ್ಟು, ಅಪಹರಣ ಮಾಡಿ ಕೆಲವು ಗಂಟೆಗಳ ನಂತರ ಮೊಬೈಲ್‍ಗಳನ್ನು ವಾಪಸ್ ತೆಗೆದುಕೊಂಡು ಹೋಗಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಅಪಹರಣವಾಗಿದ್ದ ತಹಸೀ ಲ್ದಾರ್ ಮಹೇಶ್ ಚಂದ್ರ ಅವರನ್ನು ಆರೋಪಿ ಗಳಲ್ಲೊಬ್ಬನಾದ ಯೋಗೇಂದ್ರ ಹಾಗೂ ಆತನ ಸಹೋದರನಿಗೆ ಸೇರಿದ ಜಮೀನಿನಲ್ಲಿದ್ದ ಸಣ್ಣ ಮನೆಯಲ್ಲಿ ಕೂಡಿ ಹಾಕಿದ್ದರು ಎಂಬುದು ಸಹ ವಿಚಾರಣೆ ವೇಳೆ ಗೊತ್ತಾಗಿದೆ. ಈ ಆರೋಪಿಗಳನ್ನು ಆ.25ರಂದೇ ಪೊಲೀಸರು ಬಂಧಿಸಿ, ನ್ಯಾಯಾಲ ಯಕ್ಕೆ ಹಾಜರುಪಡಿಸಿ 2 ದಿನಗಳ ಕಾಲ ತಮ್ಮ ವಶಕ್ಕೆ ಪಡೆದು ನಂತರ ಸೋಮವಾರ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ತಹಸೀಲ್ದಾರ್‌ರನ್ನು ಅಪಹರಿಸಿ ಒತ್ತೆಯಾಳಾಗಿ ಇಟ್ಟುಕೊಂಡು ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಇವರುಗಳು ಮಹೇಶ್ ಚಂದ್ರ ಅವರನ್ನು ಅಪಹರಿಸಿದ್ದರು. ನಂತರ ಪೊಲೀಸರ ಚಟುವಟಿಕೆ ಹೆಚ್ಚಾದಾಗ ಹೆದರಿ ಅವರನ್ನು ಮಲ್ಕೋನಹಳ್ಳಿ ಗ್ರಾಮದ ಕ್ರಾಸ್ ಬಳಿ ಬಿಡುಗಡೆ ಮಾಡಿ ಹೋದರು ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯು ಪೊಲೀಸರಿಗೆ ಸಿಗಬೇಕಾಗಿದ್ದು, ಆತ ಸಿಕ್ಕಿ ಬಿದ್ದ ನಂತರ ಅಪಹರಣದ ನೈಜ ಕಾರಣ ತಿಳಿಯಲಿದೆ ಎನ್ನಲಾಗುತ್ತಿದೆ.

ಈ ಸಂಬಂಧ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿ ಸಿದ ಮೈಸೂರು ಜಿಲ್ಲಾ ಎಸ್ಪಿ ಅಮಿತ್ ಸಿಂಗ್, ಆರೋಪಿಗಳು ವೃತ್ತಿ ಪರ ಅಪಹರಣಕಾರರಲ್ಲ. ಅವರು ಯಾವ ಕಾರಣಕ್ಕಾಗಿ ತಹಸೀಲ್ದಾರರನ್ನು ಅಪಹರಿಸಿದ್ದರು ಎಂಬುದರ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದರು.

Translate »