ಮೈಸೂರು ನಗರ ಪಾಲಿಕೆಯಿಂದ ಗೋಕುಲಂ ಬಡಾವಣೆಗೆ ಸ್ವಾಗತ ಕಮಾನು ಅಳವಡಿಕೆ
ಮೈಸೂರು

ಮೈಸೂರು ನಗರ ಪಾಲಿಕೆಯಿಂದ ಗೋಕುಲಂ ಬಡಾವಣೆಗೆ ಸ್ವಾಗತ ಕಮಾನು ಅಳವಡಿಕೆ

January 21, 2022

ಮೈಸೂರು, ಜ. 20 (ಆರ್‍ಕೆ)- ಮೈಸೂರಿನ ಗೋಕುಲಂ ಬಡಾವಣೆಗೆ ಇಎಸ್‍ಐ ಆಸ್ಪತ್ರೆ ಎದುರು ಕೆಆರ್‍ಎಸ್ ರಸ್ತೆಯಲ್ಲಿ ಸ್ವಾಗತ ಕಮಾನು ಅಳವಡಿಸಲಾಗಿದೆ.
ಕೆಆರ್‍ಎಸ್ ರಸ್ತೆಯಿಂದ ಡಾಕ್ಟರ್ಸ್ ಕಾರ್ನರ್ ಮೂಲಕ ಕಾಂಟೂರ್ ರೋಡ್ ಜಂಕ್ಷನ್ (ಗಣಪತಿ ದೇವಸ್ಥಾನ)ಗೆ ಹೋಗುವ ಮುಖ್ಯ ರಸ್ತೆಯ ಪ್ರವೇಶ ದ್ವಾರದಲ್ಲಿ ಆಕರ್ಷಕ ಸ್ವಾಗತ ಕಮಾನನ್ನು ಮಂಗಳವಾರ ಅಳವಡಿಸಲಾಗಿದ್ದು, ಒಂದು ಬದಿಯಲ್ಲಿ `ಗೋಕುಲಂ ಬಡಾವಣೆಗೆ ಸ್ವಾಗತ’ ಎಂದು ಬರೆದಿದ್ದರೆ, ಅದರ ಹಿಂಬದಿಯಲ್ಲಿ `ವಂದನೆಗಳು’ ಎಂದು ಗೋಲ್ಡ್ ಬಣ್ಣದ ಪ್ಲೇಟ್ ಅನ್ನು ಅಳವಡಿಸಲಾಗಿದೆ.

ಮೈಸೂರು ಮಹಾನಗರ ಪಾಲಿಕೆ ಸದಸ್ಯ (ವಾರ್ಡ್ ನಂ.6) ಎಸ್‍ಬಿಎಂ ಮಂಜು ಅವರ ಕೋರಿಕೆ ಮೇರೆಗೆ ಪಾಲಿಕೆಯ ವಲಯ ಕಚೇರಿ-4 ವತಿಯಿಂದ 6,35,000 ರೂ. ವೆಚ್ಚದಲ್ಲಿ ಅಳವಡಿಸಿರುವ ಸ್ವಾಗತ ಕಮಾನು ನೆಲಮಟ್ಟದಿಂದ 24 ಅಡಿ ಎತ್ತರವಿದೆ. ಚಿನ್ನದ ಬಣ್ಣದಿಂದ ಕೂಡಿದ ಪ್ಲೇಟ್‍ನಲ್ಲಿ ಅಕ್ಷರಗಳನ್ನು ಜೋಡಿಸಿರುವುದರಿಂದ ರಾತ್ರಿ ವೇಳೆಯೂ ಆಕರ್ಷಕ ಹಾಗೂ ಪ್ರಕಾಶಮಾನವಾಗಿ ಗೋಚರಿಸಲಿದೆ.

ಪಾಲಿಕೆ ವಲಯ ಕಚೇರಿ-4ರ ವಲಯಾಧಿಕಾರಿ ಚಂದ್ರಮ್ಮ, ಅಭಿವೃದ್ಧಿ ಅಧಿಕಾರಿ ಯೋಗಾನಂದ, ಇಂಜಿನಿಯರ್ ಎ.ಎಲ್. ರಾಜಶೇಖರ್ ಅವರು ಗುತ್ತಿಗೆದಾರ ನಾಗೇಶ್ ಎಂಬುವರ ಮೂಲಕ ಸ್ವಾಗತ ಕಮಾನು ಅಳವಡಿಸಿದ್ದು, ಗೋಕುಲಂ ಬಡಾವಣೆಯ ಅಂದ ಹೆಚ್ಚಿಸಿದೆ.

ಪಿಕೆಟಿಬಿ ಆಸ್ಪತ್ರೆ ಎದುರು ಕಲ್ಲಿನ ಬಸವ ವಿಗ್ರಹದ ಬಳಿ ಬೃಂದಾವನ ಬಡಾವಣೆಗೂ ಸ್ವಾಗತ ಕಮಾನು ಹಾಕಲು ಅನುಮೋದನೆ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿ ಯಲ್ಲಿದೆ. ಅತೀ ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದೂ ಕಾರ್ಪೊರೇಟರ್ ಎಸ್‍ಬಿಎಂ ಮಂಜು ತಿಳಿಸಿದರು.
ಅದೇ ರಸ್ತೆಯಲ್ಲಿ ಕುಂಬಾರಕೊಪ್ಪಲು ಟೋಲ್‍ಗೇಟ್ ಸರ್ಕಲ್ ನಲ್ಲಿ, ಮೇಟಗಳ್ಳಿ ಜಂಕ್ಷನ್‍ನಲ್ಲೂ ಈಗಾಗಲೇ ಸ್ವಾಗತ ಕಮಾನು ಗಳನ್ನು ಪಾಲಿಕೆಯಿಂದ ಅಳವಡಿಸಲಾಗಿದ್ದು, ಅದರಿಂದ ಕೆಆರ್‍ಎಸ್ ರಸ್ತೆವೊಂದರಲ್ಲೇ ನಾಲ್ಕು ಕಡೆ ಸ್ವಾಗತ ಕಮಾನುಗಳು ಕಾಣ ಸಿಗುತ್ತವೆ. ಅದೇ ರೀತಿ ಒಂಟಿಕೊಪ್ಪಲು ಬಡಾವಣೆಗೂ ಚೆಲು ವಾಂಬ ಪಾರ್ಕ್ ಬಳಿಯೂ ಮೂರು ವರ್ಷಗಳ ಹಿಂದೆ ಸ್ವಾಗತ ಕಮಾನು ಅಳವಡಿಸಲಾಗಿದೆ. ಮೈಸೂರಿನ ಹಲವು ವಸತಿ ಬಡಾವಣೆಗಳಲ್ಲಿ ಪಾಲಿಕೆಯಿಂದ ಈ ಮಾದರಿಯ ಸ್ವಾಗತ ಕಮಾನನ್ನು ಅಳವಡಿಸಿರುವುದು ಕಂಡು ಬರುತ್ತವೆ.

Translate »