ಕಾಡಾ ಕಚೇರಿ ಎದುರು ಪ್ರತಿಭಟನೆ
ಮೈಸೂರು

ಕಾಡಾ ಕಚೇರಿ ಎದುರು ಪ್ರತಿಭಟನೆ

January 21, 2022

ಮೈಸೂರು, ಜ.20(ಆರ್‍ಕೆಬಿ)- ಕಬಿನಿ, ಕಾವೇರಿ ಅಚ್ಚುಕಟ್ಟು ನಾಲೆಗಳಿಗೆ ಬೇಸಿಗೆಯಲ್ಲಿ ಕೆರೆ ಕಟ್ಟೆ ತುಂಬಿಸಲು ಮತ್ತು ದನಕರುಗಳಿಗೆ ಕುಡಿಯಲು ಹಾಗೂ ಮೇವು ಬೆಳೆಯಲು ನೀರು ಹರಿಸುವಂತೆ ಆಗ್ರಹಿಸಿ ರಾಜ್ಯ ರೈತಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಗುರುವಾರ ಮೈಸೂರಿನ ಕಾಡಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯಾ ಧ್ಯಕ್ಷ ಕುರುಬೂರು ಶಾಂತಕುಮಾರ್, ಕಬಿನಿ ಹಾಗೂ ಕಾವೇರಿ ಜಲಾಶಯಗಳು ಉತ್ತಮ ಮಳೆಯಾಗಿರುವ ಕಾರಣ ಹೆಚ್ಚಿನ ನೀರಿನ ಸಂಗ್ರಹವಿದೆ. ಈ ಅಚ್ಚುಕಟ್ಟು ಭಾಗದ ರೈತರು ಅತಿಯಾದ ಮಳೆಯಿಂದಾಗಿ ಮುಂಗಾ ರಿನಲ್ಲಿ ಭತ್ತದ ಇಳುವರಿ ಶೇ.40ರಷ್ಟು ಕಡಿಮೆ ಬಂದಿರುವ ಕಾರಣ ತೀವ್ರ ನಷ್ಟ ಅನುಭವಿಸಿದ್ದಾರೆ. ಈ ಬೆಳೆ ಬೆಳೆ ಯಲು ಮಾಡಿದ್ದ ಸಾಲ ತೀರಿಸಲು ಕಷ್ಟವಾಗಿದೆ. ಅಚ್ಚು ಕಟ್ಟು ಭಾಗದ ಕೆರೆ ಕಟ್ಟೆಗಳು ಒಣಗುತ್ತಿವೆ. ಬೆಳೆದು ನಿಂತಿರುವ ಕಬ್ಬು, ಬಾಳೆ ಬೆಳೆಗಳಿಗೆ ವಿದ್ಯುತ್ ಸಮಸ್ಯೆ ಯಿಂದ ನೀರು ಹರಿಸಲು ಹಾಗೂ ದನಕರುಗಳಿಗೆ ಮೇವು ಬೆಳೆಸಲು ಕಷ್ಟವಾಗಿದೆ ಎಂದರು.

ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಕಬಿನಿ ಅಚ್ಚುಕಟ್ಟು ಜಲಾಶಯದ ಎಲ್ಲಾ ಕಾಲುವೆಗಳಿಗೆ ಫೆಬ್ರವರಿ ಮೊದಲ ವಾರದಿಂದ ನೀರು ಹರಿಸುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು. ಆರಂಭದಲ್ಲಿ 20 ದಿನಗಳ ಕಾಲ ನೀರು ಹರಿಸಿ, ನಂತರ ಹತ್ತು ದಿನಗಳು ನಿಲ್ಲಿಸಿ, ವಾರಬಂದಿ ರೂಪದಲ್ಲಿ ನಾಲ್ಕು ಬಾರಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಅಭಿಯಂತರರನ್ನು ಒತ್ತಾಯಿಸಿದರು.
ನಂತರ ಕಾಡಾ ಸಹಾಯಕ ಮುಖ್ಯ ಅಭಿಯಂತರ ಪ್ರಭಾಕರ್ ಅವರಿಗೆ ಮನವಿ ಪತ್ರ ನೀಡಿದರು. ಕೂಡಲೇ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾ ಯಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಅತ್ತಹಳ್ಳಿ ದೇವರಾಜ್, ಕುರುಬೂರು ಸಿದ್ದೇಶ್, ಕಿರಗಸೂರು ಶಂಕರ್, ಗೌರಿಶಂಕರ, ಡಿ.ರಾಜೇಂದ್ರ ಇನ್ನಿತರರು ಭಾಗವಹಿಸಿದ್ದರು.

ಖರೀದಿ ಕೇಂದ್ರಗಳ ಮಾನದಂಡ ಬದಲಾಗಲಿ: ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ, ಭತ್ತ, ರಾಗಿ ಖರೀದಿ ಕೇಂದ್ರಗಳ ಮಾನದಂಡ ಬದಲಾಯಿಸುವಂತೆ ಒತ್ತಾಯಿಸಿ, ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆ ಯಡಿ ಭತ್ತ, ರಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಿ, ಕೇವಲ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡ ಬಾರದು. ಕೇವಲ 10 ಕ್ವಿಂಟಾಲ್ ರಾಗಿ, 40 ಕ್ವಿಂಟಾಲ್ ಭತ್ತ, ಸಣ್ಣ ರೈತರಿಂದ ಮಾತ್ರ ಖರೀದಿಸಬೇಕು ಎಂಬ ನಿಯಮವನ್ನು ರದ್ದುಗೊಳಿಸಬೇಕು. ಎಲ್ಲರಿಂದಲೂ ಕನಿಷ್ಠ 100 ಕ್ವಿಂಟಾಲ್ ಭತ್ತ, 20 ಕ್ವಿಂಟಾಲ್ ರಾಗಿ ಖರೀ ದಿಸುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಬಣ್ಣಾರಿ ಸಕ್ಕರೆ ಕಾರ್ಖಾನೆಯು ಸರ್ಕಾರ ಜಾರಿ ಮಾಡಿರುವ ಕಬ್ಬು ಬೆಳೆಗಾರರ ದ್ವಿಪಕ್ಷೀಯ ಒಪ್ಪಂದ ಪತ್ರವನ್ನು ಬದಲಾಯಿಸಿ, ತನಗೆ ಬೇಕಾದಂತೆ ರೈತರನ್ನು ವಂಚಿಸುವ ಒಪ್ಪಂದ ಪತ್ರ ಜಾರಿಗೊಳಿಸಿರುವ ಬಗ್ಗೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

Translate »