ಬೋಧಕ, ಬೋಧಕೇತರ ಸಿಬ್ಬಂದಿ ಮನೆಯಿಂದಲೇ ಕಾರ್ಯ ನಿರ್ವಹಿಸಿ ಸರ್ಕಾರದ ಸುತ್ತೋಲೆ
ಮೈಸೂರು

ಬೋಧಕ, ಬೋಧಕೇತರ ಸಿಬ್ಬಂದಿ ಮನೆಯಿಂದಲೇ ಕಾರ್ಯ ನಿರ್ವಹಿಸಿ ಸರ್ಕಾರದ ಸುತ್ತೋಲೆ

July 17, 2020

ಮೈಸೂರು, ಜು.16(ವೈಡಿಎಸ್)- ಕೋವಿಡ್-19 ಸೋಂಕು ಹೆಚ್ಚುತ್ತಲೇ ಇರುವುದರಿಂದ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಮನೆಯಿಂ ದಲೇ ಕೆಲಸ ನಿರ್ವಹಿಸುವಂತೆ ರಾಜ್ಯ ಸರ್ಕಾರ ಗುರುವಾರ ಸುತ್ತೋಲೆ ಹೊರ ಡಿಸಿದೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಅಧೀನದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಕೋವಿಡ್-19 ಸೋಂಕು ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜು.31 ರವರೆಗೆ ಮನೆಯಿಂದಲೇ ಕೆಲಸ ನಿರ್ವ ಹಿಸುವಂತೆ ಹೊರಡಿಸಿದ ಉಲ್ಲೇಖ(1)ರ ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ. ಇದರ ಅನುಸಾರ ರಾಜ್ಯದ ಶಾಲೆಗಳ ಲ್ಲಿನ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಯು ಸುರಕ್ಷತೆ ದೃಷ್ಟಿಯಿಂದ ಕೆಲವು ಮುಂಜಾಗ್ರತಾ ಕ್ರಮ ಕೈಗೊಳ್ಳ ಬೇಕಿದೆ. ಎಸ್‍ಎಸ್‍ಎಲ್‍ಸಿ ಉತ್ತರ ಪತ್ರಿಕೆ ಮೌಲ್ಯ ಮಾಪನಕ್ಕೆ ನಿಯೋಜಿಸಿದ ಸಿಬ್ಬಂದಿ ಮತ್ತು ಕೋವಿಡ್-19 ತಡೆ ಗಟ್ಟುವ ಸೇವಾ ಕರ್ತವ್ಯಕ್ಕೆ ನಿಯೋಜಿಸಿದ ಸಿಬ್ಬಂದಿ ಹೊರತುಪಡಿಸಿ ಉಳಿದೆಲ್ಲಾ ಶಾಲೆಗಳ ಶಿಕ್ಷಕರು,
ಬೋಧಕೇತರ ಸಿಬ್ಬಂದಿ, ಸಂಶೋಧಕರು, ಗುತ್ತಿಗೆ ನೌಕರರು, ಹಂಗಾಮಿ ಶಿಕ್ಷಕರು ಜು.31ರವರೆಗೂ ಮನೆಯಿಂದಲೇ ಕೆಲಸ ನಿರ್ವಹಿಸಬೇಕು. ಈ ಅವಧಿಯನ್ನು ಕರ್ತವ್ಯದ ಅವಧಿ ಎಂದೇ ಪರಿಗಣಿಸುವುದು.

ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರನ್ನು ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಲು ಅವರ ದೂರವಾಣಿ ಸಂಖ್ಯೆ/ ಇ-ಮೇಲ್ ವಿಳಾಸಗಳನ್ನು ಶಾಲಾ ಆಡಳಿತ, ಮುಖ್ಯ ಶಿಕ್ಷಕರು ಪಡೆದುಕೊಳ್ಳಬೇಕು.

ವಸತಿ ಸಹಿತ ಶಾಲೆಗಳು ಮತ್ತು ಹಾಸ್ಟೆಲ್‍ಗಳಲ್ಲಿ ಉಳಿದುಕೊಂಡಿರುವ ವಿದೇಶಿ ವಿದ್ಯಾರ್ಥಿಗಳಿಗೆ ಸಂಬಂಧಿಸಿ ಉಲ್ಲೇಖ(1)ರಲ್ಲಿ ಸೂಚಿಸಿದ ಕ್ರಮಗಳನ್ನು ಕೈಗೊಳ್ಳಬೇಕು.

ಈ ಅವಧಿಯಲ್ಲಿ ಶಿಕ್ಷಕರು/ಬೋಧಕೇತರ ಸಿಬ್ಬಂದಿ ಯಾವುದೇ ಕಾರಣಕ್ಕೂ ಕೇಂದ್ರಸ್ಥಾನ ಬಿಡಬಾರದು ಹಾಗೂ ಸರ್ಕಾರಕ್ಕೆ ಶಿಕ್ಷಕರ/ಬೋಧಕೇತರ ಸಿಬ್ಬಂದಿಯ ಸೇವೆ ಅಗತ್ಯವಿದ್ದಾಗ ಆರೋಗ್ಯ ಇಲಾಖೆಯಿಂದ ಹೊರಡಿಸಿದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕಡ್ಡಾಯವಾಗಿ ಸೇವೆಗೆ ಹಾಜರಾಗಬೇಕು.

ಸೋಂಕಿತರ ಮತ್ತು ಸೋಂಕಿನ ಸಂಭಾವ್ಯ ಅಪಾಯದ ಬಗ್ಗೆ ಸೂಚನೆ ನೀಡಲು ಆರೋಗ್ಯ ಸೇತು ಆ್ಯಪ್ ಸಹಕಾರಿ ಆಗಿರುವುದರಿಂದ ಎಲ್ಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿ ತಮ್ಮ ಮೊಬೈಲ್‍ನಲ್ಲಿ ಆ್ಯಪ್ ಅಳವಡಿಸಿಕೊಳ್ಳಬೇಕು.

ಆನ್‍ಲೈನ್ ತರಗತಿ ನಡೆಸುತ್ತಿದ್ದಲ್ಲಿ ಶಿಕ್ಷಕರು ಕಡ್ಡಾಯವಾಗಿ ಮನೆಯಿಂದಲೇ ಭಾಗವಹಿಸಬೇಕು.

ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಆನ್‍ಲೈನ್, ದೂರ ಸಂಪರ್ಕ ಅಥವಾ ತಂತ್ರಜ್ಞಾನ ಆಧಾರಿತ ತರಗತಿಗಳನ್ನು ನಡೆಸುವ ಯೋಜನೆಯಿದ್ದು, ಈ ವೇಳೆ ವಹಿಸಿದ ಕರ್ತವ್ಯಗಳನ್ನು ಚಾಚೂ ತಪ್ಪದೇ ನಿರ್ವಹಿಸಬೇಕು.

ಶಾಲೆಗಳು ಪ್ರಾರಂಭವಾಗುವವರೆಗೂ ಮಧ್ಯಾಹ್ನದ ಬಿಸಿಯೂಟ ಸ್ಥಗಿತವಾಗಿರುವುದರಿಂದ ಆ ಯೋಜನೆಯ ದಿನಸಿ ಪದಾರ್ಥಗಳನ್ನು ವಿದ್ಯಾರ್ಥಿಗಳಿಗೆ ಹಂಚಬೇಕು. ಪಠ್ಯಪುಸ್ತಕ ಹಾಗೂ ಸಮವಸ್ತ್ರ ಮುಂತಾದ ಸಾಮಗ್ರಿಗಳನ್ನು ವಿತರಿಸುವ ಕರ್ತವ್ಯವನ್ನು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನಿರ್ವಹಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಜಂಟಿ ಕಾರ್ಯದರ್ಶಿ ಆರ್.ಸೋಮಶೇಖರ್ ಸುತ್ತೋಲೆ ಹೊರಡಿಸಿದ್ದಾರೆ.

Translate »