ಕೊರೊನಾದಿಂದ ಜನರ ರಕ್ಷಣೆ ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ
ಮೈಸೂರು

ಕೊರೊನಾದಿಂದ ಜನರ ರಕ್ಷಣೆ ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ

July 17, 2020

ಸಚಿವ ಶ್ರೀರಾಮುಲು ಅವರ ಕೊರೊನಾದಿಂದ ಜನರ ದೇವರೇ ಕಾಪಾಡಲಿ ಹೇಳಿಕೆಗೆ ಡಿಕೆಶಿ ತೀಕ್ಷ್ಣ ಪ್ರತಿಕ್ರಿಯೆ

ಬೆಂಗಳೂರು, ಜು.16(ಕೆಎಂಶಿ)- ಕೊರೊನಾ ಪಿಡುಗಿನಿಂದ ಜನರನ್ನು ಕಾಪಾಡಲು ನಿಮ್ಮಿಂದ ಸಾಧ್ಯವಾಗದಿದ್ದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾ ರಕ್ಕೆ ಆಗ್ರಹಿಸಿದ್ದಾರೆ. ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ನಿನ್ನೆ ಕೊರೊನಾ ವಿಚಾರದಲ್ಲಿ ಜನರನ್ನು ದೇವರೇ ಕಾಪಾಡಬೇಕು ಎಂದು ನೀಡಿದ ಹೇಳಿಕೆಗೆ ಗುರುವಾರ ಡಿ.ಕೆ.ಶಿವಕುಮಾರ್ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀರಾಮುಲು ಅವರ ಹೇಳಿಕೆಯಿಂದ ಇಡೀ ರಾಜ್ಯ ತಲ್ಲಣ ಗೊಂಡಿದೆ. ಅಧಿಕಾರಕ್ಕಾಗಿ ಬಹಳ ಶ್ರಮ ವಹಿಸಿ ಸರ್ಕಾರ ರಚನೆ ಮಾಡಿದರು. ಈಗ ಕೋವಿಡ್ ವಿಚಾರದಲ್ಲಿ ನಾವು ಏನು ಮಾಡಲಿಕ್ಕೆ ಆಗುವುದಿಲ್ಲ, ದೇವರೇ ಕಾಪಾಡಬೇಕು ಎಂದು ಮುಖ್ಯಮಂತ್ರಿಗಳ ತಂಡ ಹೇಳುತ್ತಿದೆ. ಇದು ಕೇವಲ ಶ್ರೀರಾಮುಲು ಅವರ ಹೇಳಿಕೆಯಲ್ಲ. ಅವರು ಸರ್ಕಾರದ ಧ್ವನಿಯಾಗಿ ಈ ಮಾತನ್ನು ಹೇಳಿದ್ದಾರೆ. ಈ ಹೇಳಿಕೆ ನೀಡಿದ ಮರುಕ್ಷಣದಿಂದಲೇ ಬಿಜೆಪಿ ಅಧಿಕಾರದಲ್ಲಿರಲು ಸಾಧ್ಯವಿಲ್ಲ. ಕೊರೊನಾ ವಿಚಾರದಲ್ಲಿ ಜನರನ್ನು ದೇವರು ಕಾಪಾಡಬೇಕಾದರೆ, ನೀವು ಯಾಕೆ ಅಧಿಕಾರದಲ್ಲಿ ಇರಬೇಕು. ಜನರನ್ನು ನಿಮ್ಮಿಂದ ರಕ್ಷಣೆ ಮಾಡಲು ಆಗದಿದ್ದರೆ ರಾಜೀನಾಮೆ ನೀಡಿ. ಸರ್ಕಾರ ರಾಜೀನಾಮೆ ನೀಡಿ ರಾಷ್ಟ್ರಪತಿಗಳ ಆಳ್ವಿಕೆ ಜಾರಿಗೊಳಿಸಿ. ಅಧಿಕಾರಿಗಳ ಮೂಲಕ ರಾಜ್ಯಪಾಲರೇ ಆಡಳಿತ ನಡೆಸಲಿ. ನೀವು ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲೂ ವಿಫಲರಾಗಿದ್ದೀರಿ. ಜನರು, ಪ್ರತಿಪಕ್ಷಗಳು ಎಲ್ಲ ರೀತಿಯ ಸಹಕಾರ ಕೊಟ್ಟ ನಂತರವೂ ನಿಮ್ಮ ಕೈಯ್ಯಲ್ಲಿ ಆಗುವುದಿಲ್ಲ, ಎಲ್ಲ ದೇವರ ಕಥೆ ಎನ್ನುವುದಾದರೆ ಕೂಡಲೇ ಇಡೀ ಸರ್ಕಾರ ಅಧಿಕಾರದಿಂದ ಕೆಳಗಿಳಿಯುವುದು ಉತ್ತಮ ಎಂದರು.

Translate »