ಪತ್ರಕರ್ತರ ಕೊರೊನಾ ಟೆಸ್ಟ್‍ಗೆ ಅಡ್ಡಿ ಪ್ರಕರಣ ನಾಲ್ವರು ಪತ್ರಕರ್ತರ ವಿರುದ್ಧ ಕೆಟಿಎಸ್ ಪುತ್ರನಿಂದ ಎಫ್‍ಐಆರ್
ಮಂಡ್ಯ

ಪತ್ರಕರ್ತರ ಕೊರೊನಾ ಟೆಸ್ಟ್‍ಗೆ ಅಡ್ಡಿ ಪ್ರಕರಣ ನಾಲ್ವರು ಪತ್ರಕರ್ತರ ವಿರುದ್ಧ ಕೆಟಿಎಸ್ ಪುತ್ರನಿಂದ ಎಫ್‍ಐಆರ್

May 1, 2020

ಮಂಡ್ಯ, ಏ.30(ನಾಗಯ್ಯ)- ಕಳೆದ ಐದು ದಿನಗಳ ಹಿಂದೆ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರ ಕೊರೊನಾ ಟೆಸ್ಟ್‍ಗೆ ಅಡ್ಡಿಪಡಿಸಿದ ಜೆಡಿಎಸ್‍ನ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮತ್ತು ಅವರ ಮಗ ಕೃಷಿಕ್ ಗೌಡ ಪತ್ರಕರ್ತರ ವಿರುದ್ಧವೇ ದೂರು ದಾಖಲಿಸಿದ್ದಾರೆ.

ಪತ್ರಕರ್ತರಾದ ಕೆ.ಎನ್.ನಾಗೇಗೌಡ, ಸುನೀಲ್, ಎಚ್.ಎಸ್. ಮಹೇಶ್, ಮದನ್ ಅವರುಗಳು ತಮ್ಮ ತಂದೆ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹಾಗೂ ತನ್ನ ಮೇಲೂ ಹಲ್ಲೆ ನಡೆಸಿದ್ದಲ್ಲದೆ, ನಿಂದಿಸಿದ್ದಾರೆ ಎಂದು ಆರೋಪಿಸಿ ನಗರದ ಪಶ್ಚಿಮ ಠಾಣೆಯಲ್ಲಿ ದೂರು ನೀಡಿದ್ದು, ಮಂಗಳವಾರ ರಾತ್ರಿ ಎಫ್‍ಐಆರ್ ದಾಖಲಾಗಿದೆ. ‘ಏ.25ರಂದು ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಕೋವಿಡ್ ಪರೀಕ್ಷೆ ವೇಳೆ ಕೆ.ಎನ್. ನಾಗೇಗೌಡ, ಸುನೀಲ್, ಎಚ್.ಎಸ್.ಮಹೇಶ್, ಮದನ್ ಅವರನ್ನೊಳ ಗೊಂಡ ಪತ್ರಕರ್ತರು ತಮ್ಮ ತಂದೆ ಕೆ.ಟಿ.ಶ್ರೀಕಂಠೇಗೌಡರನ್ನು ನಿಂದಿಸಿ, ಹಾಗೂ ತನ್ನ ಮೇಲೆ ಹಲ್ಲೆ ನಡೆಸಿ ನಿಂದಿಸಿದರು’ ಎಂದು ಕೃಷಿಕ್ ಗೌಡ ಆರೋಪಿಸಿದ್ದಾರೆ.

ಕೊರೊನಾ ಟೆಸ್ಟ್ ವೇಳೆ ಆದ ಗಲಾಟೆ ಕುರಿತಂತೆ ತನ್ನ ಹಾಗೂ ತನ್ನ ತಂದೆಯ ವಿರುದ್ದ ಮಾಧ್ಯಮಗಳಲ್ಲಿ ಪ್ರಸಾರವಾದ ಅಪಪ್ರಚಾರದ ವರದಿಗಳಿಂದ ತಮಗೆ ಮಾನಸಿಕ ವಾಗಿ ಆಘಾತವಾಗಿತ್ತು, ಮಾನಸಿಕ ಹಿಂಸೆಯಿಂದ ಹೊರ ಬಂದ ನಂತರ ಇದೀಗ ದೂರು ನೀಡುತ್ತಿರುವುದಾಗಿ ತಿಳಿಸಿ ದ್ದಾರೆ. ದೂರಿನ ಅಂಶಗಳ ಮೇಲೆ ಐಪಿಸಿ ಸೆಕ್ಷನ್ 341,504,323,506 ಮೇಲೆ ಪ್ರಕರಣ ದಾಖಲಿಸಲಾಗಿದೆ.

ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ: ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೋವಿಡ್ ಕುರಿತ ಸಭೆಯಲ್ಲಿ ಪತ್ರಕರ್ತರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.

ಕೊರೊನಾ ವಾರಿಯರ್ಸ್ ಕರ್ತವ್ಯಕ್ಕೆ ಅಡ್ಡಿ, ಹಲ್ಲೆಯಂತಹ ಕೃತ್ಯಗಳನ್ನು ತಡೆಯಲು ಈಗಾಗಲೇ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿದೆ, ಆದರೆ ಇದುವರೆಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿರುವ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರಿಗೆ ಮನವಿ ಸಲ್ಲಿಸಿದರು. ಈಗಾಲೆ ಕೆ.ಟಿ.ಶ್ರೀಕಂಠೇ ಗೌಡ ಮತ್ತು ಅವರ ಪುತ್ರ ಸೇರಿದಂತೆ ಹಲವರ ವಿರುದ್ಧ ಕೊವಿಡ್ ಟೆಸ್ಟ್‍ಗೆ ಅಡ್ಡಿ, ನಿಂದನೆ, ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕೆ.ಟಿ.ಶ್ರೀಕಂಠೇಗೌಡ ಮತ್ತು ಅವರ ಪುತ್ರ ಸೇರಿದಂತೆ ಹಲವರು ಕೊರ್ಟ್‍ನಲ್ಲಿ ಜಾಮೀನು ಪಡೆದುಕೊಂಡಿದ್ದಾರೆ.

Translate »