ವೃತ್ತಿಪರ ನೈಪುಣ್ಯಗಾರರ ಪರಿಚಯಿಸಲು  ‘ಮೈಸೂರು ಪಂಡಿತ್’ ಹೊಸ ವೆಬ್‍ಸೈಟ್
ಮೈಸೂರು

ವೃತ್ತಿಪರ ನೈಪುಣ್ಯಗಾರರ ಪರಿಚಯಿಸಲು  ‘ಮೈಸೂರು ಪಂಡಿತ್’ ಹೊಸ ವೆಬ್‍ಸೈಟ್

July 13, 2018

ಮೈಸೂರು: ವಿವಿಧ ಕ್ಷೇತ್ರಗಳ ನುರಿತ ವೃತ್ತಿ ಪರರನ್ನು ಸಾರ್ವಜನಿಕರಿಗೆ ಒಂದೇ ವೇದಿಕೆಯಲ್ಲಿ ಪರಿಚಯಿಸುವುದಕ್ಕಾಗಿ ವೇದಾ ಸಾಫ್ಟೆಕ್ ಇಂಡಿಯಾ ಪ್ರೈ.ಲಿ ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ಮೈಸೂರು ಪಂಡಿತ್’ ಹೊಸ ವೆಬ್‍ಸೈಟ್ ಅನ್ನು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಕಾರ್ಯ ಕ್ರಮದಲ್ಲಿ ಕೃಷಿ ತಜ್ಞ ಡಾ.ಎಂ.ಮಹದೇವಪ್ಪ ಅನಾವರಣಗೊಳಿಸಿದರು.

ನೂತನ ವೆಬ್‍ಸೈಟ್‍ಗೆ ಚಾಲನೆ ನೀಡಿದ ಬಳಿಕ ಡಾ.ಎಂ.ಮಹದೇವಪ್ಪ ಮಾತನಾಡಿ, ವೃತ್ತಿಪರರಾದ ವೈದ್ಯರು, ಇಂಜಿನಿಯರ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳ ನುರಿತ ವೃತ್ತಿಪರರನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವುದಕ್ಕಾಗಿ ವೇದಾ ಸಾಫ್ಟೆಕ್ ಇಂಡಿಯಾ ಪ್ರೈ.ಲಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಸಾಮಾಜಿಕ ಜಾಲತಾಣ ಸಾರ್ವಜನಿಕ ವಲಯಕ್ಕೆ ಉಪಯುಕ್ತವಾಗಿದೆ. ಇದರಲ್ಲಿ ವೃತ್ತಿಪರರ ವಿಸ್ತೃತ ಪರಿಚಯವಿದ್ದು, ಅಗತ್ಯವುಳ್ಳವರಿಗೆ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ವೇದಾ ಸಾಫ್ಟೆಕ್ ಇಂಡಿಯಾ ಪ್ರೈ.ಲಿ ಸಂಸ್ಥೆಯ ನಿರ್ದೇಶಕ ತಾರಾದಾಸ್ ಮೆಂಚಿತಾರ್ ಮಾತನಾಡಿ, ಕೌಶಲ್ಯ ವೃತ್ತಿನಿರತರ ಆಧಾರದಲ್ಲಿ ವೈಯಕ್ತಿಕ ಜಾಲತಾಣ ಮತ್ತು ಕೋರಿಕೆಗಳ ಆಸಕ್ತಿಯ ಮೇರೆಗೆ ಮಾಹಿತಿ ಪಡೆಯುವ ಹಾಗೂ ವೃತ್ತಿನಿರತರ ಬೌದ್ಧಿಕ ಜ್ಞಾನಕ್ಕೆ ವೇದಿಕೆ ಒದಗಿಸುವುದಕ್ಕೆ ಈ ವೆಬ್‍ಸೈಟ್ ಉಪಯೋಗವಾಗಲಿದೆ ಎಂದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಯು.ಆರ್.ರುಕ್ಮಿಣಿ ಮಾತನಾಡಿ, ವೆಬ್‍ಸೈಟ್ ಬೀಟಾ ವರ್ಷನ್‍ನಲ್ಲಿದೆ. ವೆಬ್‍ನಲ್ಲಿ ಫೀಡ್ ಬ್ಯಾಕ್ ಫಾರ್ಮ್ ಇದ್ದು, ವೃತ್ತಿಪರರು ಮತ್ತು ಸಾರ್ವಜನಿಕರ ಸಲಹೆ ಸೂಚನೆಗಳನ್ನು ನೀಡಬಹುದು. ಈ ಸಲಹೆ ಸೂಚನೆ ಯಂತೆ ಮುಂದಿನ ದಿನಗಳಲ್ಲಿ ವೆಬ್‍ಸೈಟ್ ಅನ್ನು ಅಭಿವೃದ್ಧಿಗೊಳಿಸಲಾಗುತ್ತದೆ. ಆ್ಯಂಡ್ರಾಯ್ಡ್ ಫೋನ್ ಮತ್ತು ಫ್ಲೇ ಸ್ಟೋರ್‍ಗಳಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಲೆಕ್ಟ್ರಾನಿಕಲ್ ಮತ್ತು ಸಿಗ್ನಲ್ ಪ್ರೊಸೆಸ್ಸಿಂಗ್ ಪ್ರೊ. ರಘುನಂದನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್.ರಾಜು, ನಿರ್ದೇಶಕ ಕೆ.ಕುಶಾಲಪ್ಪ ಉಪಸ್ಥಿತರಿದ್ದರು.

Translate »