ಜು.15ರಂದು ಝಗಮಗಿಸುವ ಶಾಸ್ತ್ರೀಯ ನೃತ್ಯ ಪ್ರದರ್ಶನ
ಮೈಸೂರು

ಜು.15ರಂದು ಝಗಮಗಿಸುವ ಶಾಸ್ತ್ರೀಯ ನೃತ್ಯ ಪ್ರದರ್ಶನ

July 13, 2018

ಮೈಸೂರು: ಮೈಸೂರು ಬಿ.ನಾಗರಾಜ್‍ರವರಿಂದ ಸಂಯೋಜನೆಗೊಂಡಿರುವ ಆರ್ಟಿಕ್ಯುಲೇಟ್ ಫೆಸ್ಟಿವಲ್ (ನೃತ್ಯೋತ್ಸವ) ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ವೀಣೆ ಶೇಷಣ್ಣ ಭವನ, ಗಾನಭಾರತಿ ಆವರಣದಲ್ಲಿ ಪ್ರತಿ ತಿಂಗಳ ಮೂರನೇ ಭಾನುವಾರದಂದು ಆಯೋಜನೆಗೊಳ್ಳುತ್ತಿದೆ.

ಈ ಉತ್ಸವದಲ್ಲಿ ಐದು ಮಂದಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾಗಿರುವ ಶಾಸ್ತ್ರೀಯ ನೃತ್ಯ ಕಲಾಕಾರರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಮೆರುಗನ್ನು ನೀಡಲಿದ್ದಾರೆ. ಈ ನೃತ್ಯ ಸರಣಿಯ 26ನೆಯ ನೃತ್ಯೋತ್ಸವವು ಜು.15, 2018 ಭಾನುವಾರದಂದು ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ.

ಕಥಕ್ ಏಕವ್ಯಕ್ತಿ ಶೈಲಿಯ ನೃತ್ಯವನ್ನು ಪುಣೆಯ ಗುರು ಶ್ರೀಮತಿ ರೋಹಿಣಿ ಭಾಟೆರವರ ಶಿಷ್ಯೆ ಸಂಪದ ಪಿಳ್ಳೈರವರು ಪ್ರದರ್ಶಿಸಲಿದ್ದಾರೆ. ಭರತನಾಟ್ಯವನ್ನು ಏಕವ್ಯಕ್ತಿ ಪ್ರಕಾರದಲ್ಲಿ ಮೈಸೂರಿನ ರಾಸವೃಂದ ಸ್ಕೂಲ್ ಆಫ್ ಡಾನ್ಸ್‍ನ ಗುರು ಶ್ರೀಮತಿ ನಂದಿನಿ ಈಶ್ವರ್‍ರವರ ಶಿಷ್ಯೆ ಕೌಸಲ್ಯಚಂದ್ರ, ಕರ್ನಾಟಕ ಕಲಾಶ್ರೀ ವಿದ್ವಾನ್ ಸತ್ಯನಾರಾಯಣ್ ರಾಜುರವರ ಶಿಷ್ಯೆ ನಿಖಿತಾ ಮಂಜುನಾಥ್, ಗುರು ಶ್ರೀಮತಿ ಸುಪ್ರಿಯಾ ಕೋಮಂದುರ್‍ರವರ ಶಿಷ್ಯೆ ಓಜಸ್ವಿನಿ ಬಿ.ಯು. ಹಾಗೂ ಗುರು ಶ್ರೀಮತಿ ರುಕ್ಮಿಣಿ ವಿಜಯ್‍ಕುಮಾರ್‍ರವರ ಶಿಷ್ಯೆ ಸಂಧ್ಯಾ ಮುರುಳೀಧರನ್‍ರವರು ಪ್ರಸ್ತುತಪಡಿಸಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿರುತ್ತದೆ. ನೃತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಮೈಸೂರು ಬಿ.ನಾಗರಾಜ್‍ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »