ಮುಂಗಾರಿನ ಆಗಸದಲ್ಲಿ ಮಿಂಚಿದ ಐದು ಯುವ ನಕ್ಷತ್ರಗಳು
ಮೈಸೂರು

ಮುಂಗಾರಿನ ಆಗಸದಲ್ಲಿ ಮಿಂಚಿದ ಐದು ಯುವ ನಕ್ಷತ್ರಗಳು

July 24, 2018
  • ಆರ್ಟಿಕ್ಯುಲೇಟ್ ನೃತ್ಯೋತ್ಸವದಲ್ಲಿ ಚಳಿಯ ನಡುವೆಯೂ ಮಿಂದೆದ್ದ ಪ್ರೇಕ್ಷಕರು

ಮೈಸೂರು:  ಆರ್ಟಿಕ್ಯುಲೇಟ್ ನೃತ್ಯೋತ್ಸವ ಪ್ರತಿ ತಿಂಗಳ ಮೂರನೇ ಭಾನುವಾರ ಆಯೋಜಿಸಲಾಗುತ್ತದೆ. ಇದರ 26ನೇ ಸರಣಿಯು ಇತ್ತೀಚೆಗೆ ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಜರುಗಿತು. ಈ ಮೂಲಕ ಭರತನಾಟ್ಯ ಹಾಗೂ ಕಥಕ್ ನೃತ್ಯ ಶೈಲಿಯಲ್ಲಿ ಐವರು ನೃತ್ಯ ಕಲಾವಿದರು ನೃತ್ಯ ವೈಭವವನ್ನು ಅನಾವರಣಗೊಳಿಸಿದರು.

ನಿಖಿತಾ ಮಂಜುನಾಥ್‍ರವರು ಭರತನಾಟ್ಯ ಶೈಲಿಯಲ್ಲಿ ಎರಡು ನೃತ್ಯ ಪ್ರದರ್ಶನ ನೀಡಿದರು. ಇವುಗಳ ಪೈಕಿ ಒಂದು ‘ರೀತಿಗೌಲ’ ರಾಗ, ‘ಆದಿ’ ತಾಳದಲ್ಲಿದ್ದರೆ, ಮತ್ತೊಂದು ‘ಕಮಾಚ್’ ರಾಗ, ‘ಮಿಶ್ರ ಛಾಪು ತಾಳ’ದಲ್ಲಿತ್ತು. ಶ್ರೀ ಕೃಷ್ಣ ಕರ್ಣಾಮೃತ ಶ್ಲೋಕದ ಮೂಲಕ ನಿಖಿತರವರು ಶ್ರೀ ಕೃಷ್ಣ ಪರಮಾತ್ಮನ ವಿವಿಧ ಲೀಲೆಗಳನ್ನು ಅನಾವರಣಗೊಳಿಸಿ ಕೃಷ್ಣ ಪರಮಾತ್ಮನ ಹಿರಿಮೆಯನ್ನು ಕೊಂಡಾಡಿದರು. ‘ಮಾತಾಡಬಾರದೇನೋ ಮಾರಮಣನೇ’ ಎಂಬ ಕನ್ನಡ ಕೃತಿಯನ್ನು ಪ್ರದರ್ಶಿಸುವ ಮೂಲಕ ‘ಮುಗ್ಧ ನಾಯಕಿ’ಯನ್ನು ಕಣ್ಮುಂದೆ ತಂದು ನಿಲ್ಲಿಸಿದರು.

ಓಜಸ್ವಿನಿ ಬಿ.ಯು.ರವರು ‘ನವರಸ ಕನ್ನಡ ರಾಗ’, ‘ಆದಿತಾಳ’ದಲ್ಲಿ ನೃತ್ಯಾಂಜಲಿಯನ್ನು ಪ್ರದರ್ಶಿಸಿದರು. ಈ ಮೂಲಕ ದೇವರು ಹಾಗೂ ಗುರುಗಳಿಗೆ ಪುಷ್ಪಾಂಜಲಿ ಸಮರ್ಪಿಸಿದರು. ನಂತರ ಪಾಪನಾಶ ಶಿವನ ವಿರಚಿತ ಕೃತಿಯನ್ನು ಅಭಿನಯಿಸಲಾಯಿತು. ಇದು ‘ದೇವಿ ನೇಯಾ ತುನಾಲ್’ ರಾಗ, ‘ಕೀರ್ವಾಣಿ’, ‘ಆದಿತಾಳ’ದಲ್ಲಿದ್ದವು. ನಂತರ ಪುರಂದರದಾಸ ರಚಿತ ದಾಸರಪದ ‘ಚಂದ್ರ ಚೂಡ ಶಿವಶಂಕರ’ ಅಭಿನಯಿಸಿದರು. ಇದು ರಾಗಮಾಲಿಕಾ, ‘ಆದಿತಾಳ’ದಲ್ಲಿದ್ದವು. ಕೈಲಾಸವಾಸಿ ಪರಮೇಶ್ವರನ ಮಹಿಮೆಗಳನ್ನು ಅಭಿವ್ಯಕ್ತಗೊಳಿಸಿದರು.

ನಂತರ ಸಂಪದಾ ಪಿಳೈರವರು ಮೂರು ಕಥಕ್ ನೃತ್ಯಗಳನ್ನು ಪ್ರದರ್ಶಿಸಿದರು. ‘ಯಮನ್’ ರಾಗ್ ತೀನ್ ತಾಳ’ದಲ್ಲಿ ‘ಕೃಷ್ಣವಂದನ’ ನರ್ತಿಸಿ ನಂತರ ನೃತ್ತ (ತಾಳ್ ತೀನ್) ಹಾಗೂ, ‘ಏರಿ ಕೈಸೆ ಜಾವು’ (ಮಾರ್ವ ರಾಗ ತೀನ್ ತಾಳ), ಠುಮ್ರಿಯೊಂದಿಗೆ ಸಮಾಪ್ತಿಗೊಳಿಸಿದರು.

ಕೌಸಲ್ಯಚಂದ್ರರವರು ತಮ್ಮ ಭರತನಾಟ್ಯವನ್ನು ‘ತೋಡಯಾ ಮಂಗಳಂ’ನೊಂದಿಗೆ ಪ್ರಾರಂಭಿಸಿದರು. ಇದು ‘ರಾಗ ಮಾಲಿಕ’ ಹಾಗೂ ‘ತಾಳ ಮಾಲಿಕ’ ಸಂಯೋಜನೆಗೊಂಡಿದ್ದವು. ನಂತರ ತ್ಯಾಗರಾಜರ ಪಂಚರತ್ನ ಕೃತಿಯಾದ ‘ಕನಕನರುಚಿರ’ ಎಂಬ ಕೃತಿಯನ್ನು ಪ್ರಸ್ತುತಪಡಿಸಿದರು. ಇದು ‘ವರಳಿ’ ರಾಗ ಹಾಗೂ ‘ಆದಿತಾಳ’ದಲ್ಲಿದ್ದವು. ಶ್ರೀ ಚಂದ್ರಶೇಖರೇಂದ್ರ ಸರಸ್ವತಿಯವರ ಕೃತಿ ‘ಶ್ರೀ ದುರ್ಗ ಪಂಚರತ್ನ’ ಇದು ‘ಷಣ್ಮುಖ ಪ್ರಿಯ’ ರಾಗ ಹಾಗೂ ‘ಖಂಡ ಛಾಪು’ ತಾಳದಲ್ಲಿತ್ತು.

ಕುಮಾರಿ ಸಂಧ್ಯಾ ಮುರುಳೀಧರನ್‍ರವರು ಮೂರು ಭರತನಾಟ್ಯ ಶೈಲಿ ನೃತ್ಯಗಳನ್ನು ಪ್ರದರ್ಶಿಸಿದರು. ನಟರಾಜನ ಮೇಲೆ ‘ತಡವನ ಮುನಿಜನ ಸಕಲ ಸುರಾ ಸುರ’ (ಹಂಸಧ್ವನಿ ರಾಗ ಹಾಗೂ ಆದಿತಾಳ), ಶಾರದಾಂಬೆ ಸ್ತುತಿ ‘ವಂದೇಹಂ ಶಾರದಾ’ (ಯಮುನಾ ಕಲ್ಯಾಣಿ ರಾಗ ಹಾಗೂ ಮಿಶ್ರ ಛಾಪು ತಾಳ) ಹಾಗೂ ‘ಗುಮ್ಮನ ಕರೆಯದಿರೆ’ ದೇವರನಾಮವನ್ನು ಬಹಳ ಸೊಗಸಾಗಿ ಪ್ರದರ್ಶಿಸಿ ಎಲ್ಲರ ಮೈಚಳಿ ಬಿಡಿಸಿದರು.

ಆರ್ಟಿಕ್ಯುಲೇಟ್ ನೃತ್ಯೋತ್ಸವದ 26ನೇ ಸರಣಿಯಲ್ಲಿ ಇತ್ತೀಚೆಗೆ ಗಾನಭಾರತಿ ಸಭಾಂಗಣದಲ್ಲಿ ನಾಲ್ಕು ಯುವ ಪ್ರತಿಭೆಗಳು ಭರತನಾಟ್ಯ ಹಾಗೂ ಓರ್ವ ಕಲಾವಿದೆ ಕಥಕ್ ನೃತ್ಯವನ್ನು ಅದ್ಭುತವಾಗಿ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

Translate »