ಆ.1ರಿಂದ ಜಿಲ್ಲೆಯಾದ್ಯಂತ ಸ್ವಚ್ಛ ಸರ್ವೇಕ್ಷಣೆ ಆರಂಭ
ಮೈಸೂರು

ಆ.1ರಿಂದ ಜಿಲ್ಲೆಯಾದ್ಯಂತ ಸ್ವಚ್ಛ ಸರ್ವೇಕ್ಷಣೆ ಆರಂಭ

July 24, 2018
  • ಮೊದಲ ಬಾರಿಗೆ ಎಲ್ಲಾ ತಾಲೂಕುಗಳ ಸ್ಪರ್ಧೆ
  • ಕ್ಷಿಪ್ರ ಕಾರ್ಯಾಚರಣೆ ಮೂಲಕ ಸಿದ್ದತೆಗೆ ಸೂಚನೆ
  • ಸಾರ್ವಜನಿಕರಿಗೆ ಅರಿವು ಮೂಡಿಸಲು ಆಧ್ಯತೆ

ಮೈಸೂರು:  ಈ ಬಾರಿ ಸ್ವಚ್ಛ ಸರ್ವೇಕ್ಷಣಾ ಸ್ಪರ್ದೆಯಲ್ಲಿ ಮೊದಲ ಬಾರಿಗೆ ಮೈಸೂರು ನಗರದೊಂದಿಗೆ ಜಿಲ್ಲೆಯೂ ಪಾಲ್ಗೊಳ್ಳುತ್ತಿದ್ದು, ಆಗಸ್ಟ್ 1ರಿಂದ 30ರವರೆಗೆ ನಡೆಯಲಿರುವ ಸ್ವಚ್ಛ ಸರ್ವೇಕ್ಷಣೆಯಲ್ಲಿ ಎಲ್ಲಾ ತಾಲೂಕುಗಳ ಜನರು ಸಕ್ರಿಯವಾಗಿ ಪಾಲ್ಗೊಂಡು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವಂತೆ ಜಿ.ಪಂ ಸಿಇಒ ಪಿ.ಶಿವಶಂಕರ್ ಮನವಿ ಮಾಡಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಸ್ವಚ್ಛ ಸರ್ವೇಕ್ಷಣೆಯ ಕುರಿತಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ತಾಲೂಕುಗಳ ಅಧಿಕಾರಿಗಳೊಂದಿಗೆ ನಡೆಸಿದ ಪೂರ್ವಾಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇದುವರೆಗೆ ಮೈಸೂರು ನಗರದಲ್ಲಿ ಮಾತ್ರ ಸ್ವಚ್ಛ ಸರ್ವೇಕ್ಷಣೆ ನಡೆಯುತ್ತಿತ್ತು. ಆದರೆ ಈ ಬಾರಿ ನಗರ ಪ್ರದೇಶದೊಂದಿಗೆ ಎಲ್ಲಾ ತಾಲೂಕುಗಳಲ್ಲಿಯೂ ನಡೆಯುತ್ತದೆ. ಆ.1ರಿಂದ 30ರವರೆಗೆ ನಡೆಯಲಿರುವ ಈ ಸಮೀಕ್ಷೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಜ್ಜಾಗಬೇಕು. ಚುನಾವಣೆ ಸಂದರ್ಭದಲ್ಲಿ ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಲು ನಡೆಸಿದ ಮಿಂಚಿನ ನೊಂದಣಿಯಂತೆ ಸ್ವಚ್ಛ ಸರ್ವೇಕ್ಷಣೆಯ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ತ್ವರಿತಗತಿಯಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.

ಈ ಬಾರಿ ದೇಶದಲ್ಲಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು ಜಿಲ್ಲೆ ಸೇರಿದಂತೆ 698 ಜಿಲ್ಲೆಗಳು, 6980 ಗ್ರಾಮಗಳು, 34900 ಸಾರ್ವಜನಿಕ ಸ್ಥಳಗಳು, 50 ಲಕ್ಷ ನಾಗರೀಕರ ಪ್ರತಿಕ್ರಿಯೆ ಕೇಳಲಾಗುತ್ತದೆ. ಅಲ್ಲದೆ ಸರ್ವೇಕ್ಷಣೆ ಮಾಡಲು ಬರುವ ತಂಡದ ಸದಸ್ಯರು ಮೂರು ವಿಭಾಗದಲ್ಲಿ ಸಮೀಕ್ಷೆ ನಡೆಸಲಿದ್ದಾರೆ. ನಾಗರೀಕರ ಪ್ರತಿಕ್ರಿಯೆ(ಶೇ.35 ಅಂಕ), ನೈರ್ಮಲ್ಯ ಸ್ಥಿತಿ ಕುರಿತು ನೇರ ಪರಿವೀಕ್ಷಣೆ(ಶೆ.30), ಸೇವಾ ಹಂತದ ಪ್ರಗತಿ(ಶೇ.35)ಯನ್ನು ಪರಿಶೀಲಿಸಲಿದ್ದಾರೆ. ಇದಕ್ಕಾಗಿ ಸಿದ್ದತೆ ಮಾಡಿಕೊಳ್ಳುವಂತೆ ಅವರು ಸೂಚಿಸಿದರಲ್ಲದೆ, ನಾಗರೀಕರ ಪ್ರತಿಕ್ರಿಯೆ ಪಡೆಯುವ ವೇಳೆ ಯಾವ ಪ್ರಶ್ನೆ ಕೇಳಬಹುದು ಎನ್ನುವುದನ್ನು ಜನರಿಗೆ ತಿಳಿಸಬೇಕು.

ಕೇಳಿದ ಪ್ರಶ್ನೆಗೆ ಸಕಾರಾತ್ಮಕವಾದ ಉತ್ತರ ನೀಡುವಂತೆ ಮನವರಿಕೆ ಮಾಡಿಕೊಡುವ ಮೂಲಕ ತಮ್ಮ ತಮ್ಮ ತಾಲೂಕಿಗೆ ಸ್ವಚ್ಛ ತಾಲೂಕಿನ ಪಟ್ಟ ದೊರಕುವಂತೆ ಮಾಡಬೇಕು. ನೈರ್ಮಲ್ಯ ಸ್ಥಿತಿ ಕುರಿತು ನೇರ ಪರಿವೀಕ್ಷಣೆಯಲ್ಲಿ ಸಾರ್ವಜನಿಕ ಶೌಚಾಲಯಗಳು, ಅಂಗನವಾಡಿ ಕಟ್ಟಡಗಳು, ಸಂತೆಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಶಾಲಾ-ಕಾಲೇಜುಗಳು ಹಾಗೂ ಇನ್ನಿತರರ ಸ್ಥಳಗಳಿಗೆ ಭೇಟಿ ನೀಡಿ ಸ್ವಚ್ಛತೆಯನ್ನು ಪರಿಶೀಲಿಸಲಿದ್ದಾರೆ. ಅಲ್ಲದೆ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಯೊಂದಿಗೆ ಶೌಚಾಲಯಗಳ ಬಳಕೆಯ ಬಗ್ಗೆಯೂ ಅವಲೋಕಿಸಲಿದ್ದಾರೆ. ಸೇವಾ ಹಂತದ ಪ್ರಗತಿಯ ವಿಭಾಗದಲ್ಲಿ ತಾ.ಪಂ, ಗ್ರಾ.ಪಂ, ಪುರಸಭೆ ಸೇರಿದಂತೆ ಇನ್ನಿತರ ಸ್ಥಳೀಯ ಸಂಸ್ಥೆಗಳು ನೀಡುವ ಸೇವೆಗಳ ಬಗ್ಗೆ ಜನಭಿಪ್ರಾಯ ಕೇಳಲಾಗುತ್ತದೆ. ಸರ್ವೇಕ್ಷಣೆ ನಂತರ ಸ್ವಚ್ಛತೆಯಲ್ಲಿ ಸುಧಾರಣೆ ಆಗಿದೆಯಾ ಎಂಬ ಅನಿಸಿಕೆಯನ್ನು ಪಡೆಯಲಿದ್ದಾರೆ ಎಂದು ಅವರು ಹೇಳಿದರು.

ಸ್ವಚ್ಛ ಸರ್ವೇಕ್ಷಣೆಯ ಬಗ್ಗೆ ಜನರಲ್ಲಿ ತ್ವರಿತಗತಿಯಲ್ಲಿ ಅರಿವು ಮೂಡಿಸುವ ಅವಶ್ಯಕತೆಯಿದೆ. ಮೊದಲ ಹಂತದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ, ಪದವಿ ಮತ್ತು ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ಅಲ್ಲದೆ ವಿದ್ಯಾರ್ಥಿಗಳಿಂದ ಗ್ರಾಮ ಗ್ರಾಮಗಳಲ್ಲಿಯೂ ಜಾಥಾ ನಡೆಸಿ ಸ್ವಚ್ಛ ಸರ್ವೇಕ್ಷಣೆಯ ಬಗ್ಗೆ ಮಾಹಿತಿ ನೀಡಬೇಕು. ಗೋಡೆ ಬರಹ, ವಾಹನಗಳಲ್ಲಿ ದ್ವನಿವರ್ಧಕ ಅಳವಡಿಸಿ ಪ್ರಚಾರ ಮಾಡಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೂಲಕವೂ ಜನರಿಗೆ ತಿಳುವಳಿಕೆಯನ್ನುಂಟು ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿ.ಪಂ ಯೋಜನಾ ನಿರ್ದೇಶಕಿ ಹೆಚ್.ಸಿ.ಎಂ.ರಾಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಬಸವರಾಜು, ಯೋಜನಾಧಿಕಾರಿ ಲೋಕನಾಥ್, ಎಸ್‍ಡಬ್ಲೂಡಿ ಜಂಟಿ ನಿರ್ದೇಶಕಿ ಹೆಚ್.ಎಸ್.ಬಿಂಧ್ಯಾ, ಮೈಸೂರು ತಾ.ಪಂ ಇಒ ಲಿಂಗರಾಜಯ್ಯ, ಪಿರಿಯಾಪಟ್ಟಣ ಇಒ ಡಿ.ಸಿ.ಶೃತಿ, ಡಿಡಿಪಿಐ ಮಮತಾ, ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್‍ಸ್ವಾಮಿ, ಸಹ ಕಾರ್ಯದರ್ಶಿ ಮನೋಜ್‍ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸ್ವಚ್ಛ ಸರ್ವೇಕ್ಷಣೆ ಕುರಿತು ಮೈಸೂರಿನ ಜಿ.ಪಂ ಕಚೇರಿಯಲ್ಲಿ ಸೋಮವಾರ ಜಿ.ಪಂ ಸಿಇಒ ಪಿ.ಶಿವಶಂಕರ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

Translate »