ಆರ್ಟಿಕ್ಯುಲೇಟ್ ನೃತ್ಯೋತ್ಸವ ವಿಶೇಷ ಸಂಭ್ರಮ-25: ಜೂ.17ರಂದು ಹಿರಿಯ ಕಲಾವಿದರಿಂದ ಅಭಿನಯಪೂರಕ ನೃತ್ಯ ಪ್ರದರ್ಶನ
ಮೈಸೂರು

ಆರ್ಟಿಕ್ಯುಲೇಟ್ ನೃತ್ಯೋತ್ಸವ ವಿಶೇಷ ಸಂಭ್ರಮ-25: ಜೂ.17ರಂದು ಹಿರಿಯ ಕಲಾವಿದರಿಂದ ಅಭಿನಯಪೂರಕ ನೃತ್ಯ ಪ್ರದರ್ಶನ

June 13, 2018

ಮೈಸೂರು: ಮೈಸೂರು ಬಿ.ನಾಗರಾಜ್‍ರವರಿಂದ ಸಂಯೋಜನೆ ಗೊಂಡಿರುವ ಆರ್ಟಿಕ್ಯುಲೇಟ್ ಫೆಸ್ಟಿವಲ್ (ನೃತ್ಯೋತ್ಸವ) ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ರಮಾಬಾಯಿ ಗೋವಿಂದರಾವ್ ಭವನ, ವೀಣೆ ಶೇಷಣ್ಣ ಭವನದ ಪಕ್ಕ, ಗಾನಭಾರತಿ ಆವರಣದಲ್ಲಿ ಏರ್ಪಡಿಸಲಾಗಿದೆ.

ಈ ಉತ್ಸವದಲ್ಲಿ ಮೂರು ಮಂದಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹಿರಿಯ ಶಾಸ್ತ್ರೀಯ ನೃತ್ಯ ಕಲಾಕಾರರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಮೆರುಗನ್ನು ನೀಡಲಿದ್ದಾರೆ. ಈ ನೃತ್ಯ ಸರಣಿಯ 25ನೆಯ ನೃತ್ಯೋತ್ಸವವು ಜೂ.17 ಭಾನುವಾರದಂದು ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ.

ಆರ್ಟಿಕ್ಯುಲೇಟ್ ನೃತ್ಯೋತ್ಸವದಲ್ಲಿ ಕಳೆದೆರಡು ವರ್ಷಗಳಿಂದ ನಿರಂತರವಾಗಿ ಸುಮಾರು 350ಕ್ಕೂ ಅಧಿಕ ಪ್ರತಿಭಾವಂತ ಬಾಲ, ಯುವ, ಹಿರಿಯ ನೃತ್ಯ ಕಲಾವಿದರು ಬೃಹತ್ ವೇದಿಕೆಗಳಲ್ಲಿ ಭಾಗವಹಿಸಿ ಅತ್ಯಂತ ಯಶಸ್ವಿಗೊಳಿಸಿದ್ದಾರೆ. ಭರತನಾಟ್ಯ, ಕಥಕ್, ಒಡಿಸ್ಸಿ, ಕುಚುಪುಡಿ, ಮೋಹಿನಿಆಟ್ಟಂ, ಸತ್ತಾರಿಯಾ, ಮಣಿಪುರಿ ಹಾಗೂ ಜಾನಪದ ಸೊಗಡಿನ ನೃತ್ಯಗಳನ್ನು ಪ್ರದರ್ಶಿಸಿದ್ದಾರೆ. ಭಾರತೀಯ ಶಾಸ್ತ್ರೀಯ ನೃತ್ಯದ ಪದ್ಮಶ್ರೀ ಪುರಸ್ಕøತ ದೆಹಲಿಯ ಶ್ರೀಮತಿ ರಂಜನಗೌಹಾರ್ ಅವರು ಒಡಿಸ್ಸಿ ನೃತ್ಯವನ್ನು ಪ್ರದರ್ಶಿಸಲಿದ್ದಾರೆ. ಪುಣೆಯ ಶ್ರೀಮತಿ ಶಮಾ ಭಾಟೆಕಥಕ್ ನೃತ್ಯವನ್ನು ನಡೆಸಿಕೊಡಲಿದ್ದಾರೆ. ಮುಂಬೈನ ವಿದ್ವಾನ್ ದೀಪಕ್ ಮಜುಮ್ದಾರ್‌(ಪ್ರಖ್ಯಾತ ಹಿಂದಿ ಚಲನಚಿತ್ರ ನಟಿ ಹಾಗೂ ಭರತನಾಟ್ಯ ಕಲಾವಿದೆಯಾದ ಶ್ರೀಮತಿ ಹೇಮಮಾಲಿನಿಯವರ ನೃತ್ಯ ಸಂಯೋಜಕರು) ಅವರು ಭರತನಾಟ್ಯವನ್ನು ಪ್ರಸ್ತುತಪಡಿಸಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿರುತ್ತದೆ. ನೃತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಮೈಸೂರು ಬಿ.ನಾಗರಾಜ್‍ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »