3 ವರ್ಷಗಳ ಬಳಿಕ ಭರ್ತಿಯತ್ತ ಕೆಆರ್‌ಎಸ್‌ ತಂದಿದೆ ರೈತರಿಗೆ ದಿಲ್ ಖುಷ್
ಮಂಡ್ಯ

3 ವರ್ಷಗಳ ಬಳಿಕ ಭರ್ತಿಯತ್ತ ಕೆಆರ್‌ಎಸ್‌ ತಂದಿದೆ ರೈತರಿಗೆ ದಿಲ್ ಖುಷ್

July 13, 2018

ಮಂಡ್ಯ:  ಜೀವನದಿ ಕಾವೇರಿ ಉಗಮತಾಣ ಕೊಡಗಿನಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಇನ್ನೆರಡು ದಿನಗಳಲ್ಲೇ ಅಣೆಕಟ್ಟೆ ಭರ್ತಿಯಾಗುವ ಸಾಧ್ಯತೆ ಇದೆ.!

ಕಳೆದ 3 ವರ್ಷಗಳಿಂದ ಬರದಿಂದಾಗಿ ಜಲಾಶಯ ಭರ್ತಿಯಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಈ ಬಾರಿ ಜುಲೈ ತಿಂಗಳಲ್ಲೇ ಜಲಾಶಯ ಭರ್ತಿಯಾಗುತ್ತಿರುವುದು ಕಾವೇರಿಕೊಳ್ಳದ ರೈತರಲ್ಲಿ ಸಂತಸ ತಂದಿದೆ. ಇದರಿಂದಾಗಿ ಜಲಾಶಯ ತುಂಬುವ ಶುಭ ಘಳಿಗೆಗಾಗಿ ಜನರು ಕಾತರರಾಗಿದ್ದಾರೆ.

124.80 ಅಡಿ ನೀರು ಸಂಗ್ರಹ ಸಾಮಥ್ರ್ಯ ಹೊಂದಿರುವ ಕೆಆರ್‌ಎಸ್‌ ಜಲಾಶಯದಲ್ಲಿ ಸದ್ಯ 119.10 ಅಡಿ ನೀರು ಸಂಗ್ರಹವಾಗಿದೆ. ಗುರುವಾರ ಸಂಜೆ ಜಲಾಶಯಕ್ಕೆ 41,583 ಕ್ಯೂಸೆಕ್‍ನಷ್ಟು ಒಳ ಹರಿವಿದ್ದು, ಜಲಾಶಯದಿಂದ ನದಿಗೆ 3,771 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಈ ವರ್ಷ ಜುಲೈ ಮೂರನೇ ವಾರದಲ್ಲಿ ಕೆಆರ್‌ಎಸ್‌ ತುಂಬಲಿದ್ದು, 3 ವರ್ಷಗಳ ನಂತರ ಜಲಾಶಯ ಭರ್ತಿಯಾಗು ತ್ತಿದೆ. ಕಳೆದ ವರ್ಷ 2017ರಲ್ಲಿ ಇದೇ ವೇಳೆ ಅಣೆಕಟ್ಟೆಯಲ್ಲಿ ಕೇವಲ 78 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಗರಿಷ್ಠವಾಗಿ 114.32 ಅಡಿಗಳಷ್ಟು ಮಾತ್ರ ನೀರು ಸಂಗ್ರಹವಾಗಿತ್ತು.

ಯಾವ್ಯಾವ ವರ್ಷ ಭರ್ತಿ: 7 ಆಗಸ್ಟ್ 2014, 1 ಆಗಸ್ಟ್ 2013, 13 ಆಗಸ್ಟ್ 2011, 28 ಅಕ್ಟೋಬರ್ 2010, 24 ಜುಲೈ 2009, 15 ಆಗಸ್ಟ್ 2008, 15 ಜುಲೈ 2007, 27 ಜುಲೈ 2006, 11 ಆಗಸ್ಟ್ 2005, 21 ಆಗಸ್ಟ್ 2004, 7 ಅಕ್ಟೋಬರ್ 2000ರಲ್ಲಿ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿತ್ತು.

ತಮಿಳುನಾಡಿಗೆ ಹರಿಯುತ್ತಿದೆ ಕಾವೇರಿ: ತಮಿಳುನಾಡಿಗೆ ಭಾನುವಾರದಿಂದಲೇ ಕಾವೇರಿ ನೀರನ್ನು ಹರಿಸಲಾಗುತ್ತಿದೆ. ಸರ್ಕಾರದ ಆದೇಶದ ಮೇರೆಗೆ ಅಧಿಕಾರಿಗಳು ತಮಿಳುನಾಡಿನ ಅಣೆಕಟ್ಟುಗಳಿಗೆ ಕಾವೇರಿ ನೀರು ಹರಿಸುತ್ತಿದ್ದಾರೆ. ಜು.8ರ ರಾತ್ರಿಯಿಂದಲೇ ನೀರು ಬಿಡುಗಡೆ ಮಾಡುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಇದು ರೈತರನ್ನು ಸಹಜವಾಗಿಯೇ ಚಿಂತೆಗೀಡು ಮಾಡಿದೆ.

ಜಿಲ್ಲೆಯ ರೈತರು ಏನೇನು ಬೆಳೆ ಬೆಳೆದಿದ್ದಾರೆ?: ಈ ಬಾರಿ ಮಳೆ ಕೊರತೆಯ ನಡುವೆಯೂ ರೈತರು ಮಳೆಯಾಶ್ರಿತದಲ್ಲೇ ವಾಣಿಜ್ಯ, ತೋಟಗಾರಿಕೆ, ಅಲ್ಪಾವಧಿ ಬೆಳೆ ಗಳನ್ನು ಬೆಳೆದಿದ್ದು, ಜಿಲ್ಲಾದ್ಯಂತ ಮುಂಗಾರು ಹಂಗಾಮಿನಲ್ಲಿ 23380 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಮಂಡ್ಯ ಜಿಲ್ಲೆಯಾದ್ಯಂತ ಇಲ್ಲಿಯವರೆಗೆ ಶೇ.11.6ರಷ್ಟು ಬಿತ್ತನೆಯಾಗಿದೆ. ಜಿಲ್ಲೆಯಾ ದ್ಯಂತ 8 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆಯ ಪ್ರದೇಶವಿದೆ. ಆದರೆ ಹಾಲಿ 2 ರಿಂದ 3 ಲಕ್ಷ ಹೆಕ್ಟೇರ್ ಪ್ರದೇಶದ ರೈತರು ಮಾತ್ರ ಕೃಷಿಯಲ್ಲಿ ತೊಡಗಿದ್ದಾರೆ. ಉಳಿದ ಪ್ರದೇಶ ಹಾಗೆ ತೆಕ್ಕಲು ಬಿದ್ದಿದೆ. ಇದರಲ್ಲಿ ಕಬ್ಬು, ಭತ್ತ, ಜೋಳ, ರಾಗಿ, ಮುಸುಕಿನ ಜೋಳ, ತೃಣಧಾನ್ಯ, ತೊಗರಿ, ಹುರುಳಿ, ಉದ್ದು, ಅಲಸಂದೆ, ಅವರೆ, ನೆಲಗಡಲೆ, ಎಳ್ಳು, ಹರಳು, ಹುಚ್ಚೆಳ್ಳು ಸೇರಿದಂತೆ ಏಕದಳ, ದ್ವಿದಳ, ಎಣ್ಣೆಕಾಳು, ಆಹಾರ ಧಾನ್ಯ ಒಳಗೊಂಡಿದೆ. ಪ್ರಸ್ತುತ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿರುವ ಬೆಳೆಗಳಿವೆ. ತೋಟಗಾರಿಕೆ ಬೆಳೆ, ವಾಣಿಜ್ಯ ಬೆಳೆಗಳು ಸೇರಿದೆ.

Translate »