ಚಿನ್ನದ ಮೇಲೆ ಬಂಡವಾಳ ಹೂಡಿಕೆ ನಿರರ್ಥಕ: ಷೇರು ಪೇಟೆ ಬಂಡವಾಳ ಹೂಡಿಕೆ ಬಾಲಾಜಿ ರಾವ್ ಅಭಿಮತ
ಮೈಸೂರು

ಚಿನ್ನದ ಮೇಲೆ ಬಂಡವಾಳ ಹೂಡಿಕೆ ನಿರರ್ಥಕ: ಷೇರು ಪೇಟೆ ಬಂಡವಾಳ ಹೂಡಿಕೆ ಬಾಲಾಜಿ ರಾವ್ ಅಭಿಮತ

July 14, 2018

ಮೈಸೂರು: ಚಿನ್ನ ಸೇರಿದಂತೆ ಇತರೆ ಚರಾಸ್ತಿಗಳ ಮೇಲೆ ಭಾವನಾತ್ಮಕ ಚಿಂತನೆಯೊಂದಿಗೆ ಹೆಚ್ಚಿನ ಬಂಡವಾಳ ಹೂಡಿದರೆ, ಯಾವುದೇ ಪ್ರಯೋಜನವಿಲ್ಲ ಎಂದು ಷೇರುಪೇಟೆ ಬಂಡವಾಳ ಹೂಡಿಕೆ ತರಬೇತುದಾರ ಡಿ.ಜಿ.ಬಾಲಾಜಿ ರಾವ್ ಅಭಿಪ್ರಾಯಪಟ್ಟರು.

ಜೆಎಲ್‍ಬಿ ರಸ್ತೆಯ ಎಂಜಿನಿಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ದಿ ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್(ಇಂಡಿಯಾ) ಮೈಸೂರು ಘಟಕ ಹಾಗೂ ಪ್ರೂಡೆಟ್ ಕಾರ್ಪೊರೇಟ್ ಅಡ್ವೈಸರಿ ಸರ್ವಿಸ್ಸ್(ಲಿ), ಹೆಚ್‍ಡಿಎಫ್‍ಸಿ ಮ್ಯೂಚುಯಲ್ ಫಂಡ್ ಸಹಯೋಗದೊಂದಿಗೆ ಆಯೋಜಿಸಿದ್ದ `ಷೇರುಪೇಟೆಯಲ್ಲಿ ಬಂಡವಾಳ ಹೂಡಿಕೆ’ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹೂಡಿಕೆದಾರರು ಭಾವನಾತ್ಮಕವಾಗಿ ಅಗತ್ಯಕ್ಕಿಂತ ಹೆಚ್ಚು ಚಿನ್ನ ಖರೀದಿ ಮಾಡಿ, ಮೈ ಮೇಲೆ ಹಾಕಿಕೊಂಡರೆ ಅಥವಾ ಮನೆಯಲ್ಲಿಟ್ಟರೆ, ಇದಕ್ಕೆ ಭದ್ರತೆಯ ಸವಾಲು. ಆದ್ದರಿಂದ ವಿವಿಧ ಪ್ರತಿಷ್ಠಿತ ಕಂಪನಿ ಷೇರುಗಳ ಮೇಲೆ ಬಂಡವಾಳ ಹೂಡಿದರೆ, ಹೆಚ್ಚಿನ ಆರ್ಥಿಕ ಲಾಭ ದೊರಕಬಹುದು ಎಂದರು.

ಸರ್ಕಾರದ ವಿವಿಧ ಹುದ್ದೆಗಳಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಸಿಬ್ಬಂದಿ ಅಥವಾ ಅಧಿಕಾರಿಗಳು, ನಿವೃತ್ತಿ ಆರ್ಥಿಕ ಸವಲತ್ತುಗಳನ್ನು ಯಾವುದಾದರೊಂದು ಬ್ಯಾಂಕ್‍ನಲ್ಲಿ ಅಲ್ಪಮೊತ್ತದ ಬಡ್ಡಿಗೆ ಠೇವಣೆ ಇಡುವ ಬದಲು ಸ್ವಲ್ಪ ಹಣವನ್ನಾದರೂ ಷೇರುಪೇಟೆಯಲ್ಲಿ ಬಂಡವಾಳ ಹೂಡುವುದು ಉಚಿತ. ಈ ಬಗ್ಗೆ ನೀವೇ ದೃಢ ನಿರ್ಧಾರ ಕೈಗೊಳ್ಳಬೇಕು ಎಂದರು.

ನಾವು ಹೊಲ, ಮನೆ ಸೇರಿದಂತೆ ಇತರೆ ಸ್ಥಿರಾಸ್ತಿ ನೋಡಿಕೊಂಡು ನಮ್ಮ ಬಂಡವಾಳದ ಬಗ್ಗೆ ತೃಪ್ತಿಪಟ್ಟುಕೊಂಡರೆ ಸಾಲದು. ಈ ಮಾರ್ಗದಲ್ಲಿ ನಿತ್ಯ ಜೀವನ ಕ್ರಮದ ವೆಚ್ಚ ಭರಿಸಲು ಸಾಧ್ಯವೇ ಎಂದು ಪ್ರಶ್ನಿಸಿಕೊಳ್ಳಬೇಕು. ಬದಲಾಗಿ, ನಮ್ಮ ದುಡಿಮೆಯಲ್ಲಿ ಒಂದು ಭಾಗ ದೂರಗಾಮಿ ಚಿಂತನೆಯೊಂದಿಗೆ ಬೇರೆ ರೂಪದಲ್ಲಿ ಹೂಡಿಕೆ ಮಾಡಿದರೆ, ಹೆಚ್ಚಿನ ಲಾಭ ಗಳಿಸುವ ಬಗ್ಗೆ ಚಿಂತಿಸಬೇಕು ಎಂದರು.

ಹೂಡಿಕೆದಾರರಿಗೆ ಷೇರುಪೇಟೆ ಮೇಲೆ ನಕಾರಾತ್ಮಕ ಭಾವನೆ ರೂಢಿಸಿಕೊಳ್ಳದೆ, ಸಕಾರತ್ಮಾಕ ಭಾವನೆ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ, ಮಧ್ಯಮ ವರ್ಗ ಯಾವುದರ ಮೇಲೆ ಹೂಡಿಕೆ ಮಾಡಿದರೂ ನಿಮ್ಮ ಹಣದ ಭದ್ರತೆ ಬಗ್ಗೆ ಬರುವುದಿಲ್ಲ ಎಂದು ಸಲಹೆ ನೀಡಿದ ಅವರು, ನಮ್ಮ ಜೀವಕ್ಕೆ ನಾವೇ ಆರೋಗ್ಯ ಭದ್ರತೆ ಕಲ್ಪಿಸಿಕೊಳ್ಳುವುದು ತಪ್ಪು. ನಮ್ಮ ಜೀವಕ್ಕೆ ಯಾವುದೇ ಸಂದರ್ಭದಲ್ಲಿ ಅವಘಡ ಸಂಭವಿಸಿದರೆ, ಆ ಪರಿಸ್ಥಿತಿ ಒತ್ತಡದಲ್ಲಿ ಹಣ ಜೋಡಣೆಗೆ ಮುಂದಾಗುತ್ತೇವೆ. ಇದರ ಬದಲು, ಮುನ್ನವೇ ವಿವಿಧ ವಿಮಾ ಕಂಪನಿಗಳ `ಆರೋಗ್ಯ ವಿಮೆ’ ಮಾಡಿಸಿಕೊಳ್ಳುವಂತೆ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಐಇಐ ಮೈಸೂರು ಘಟಕದ ಅಧ್ಯಕ್ಷ ಎಂ.ಚಿನ್ನಸ್ವಾಮಿ, ಡಿ.ಕೆ.ದಿನೇಶ್‍ಕುಮಾರ್, ಸಂದೀಪ್ ಸೇರಿದಂತೆ ಇತರೆ ಸದಸ್ಯರು ಹಾಜರಿದ್ದರು. ಮೈಸೂರು ಜೆಎಲ್‍ಬಿ ರಸ್ತೆಯ ಎಂಜಿನಿಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ದಿ ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್(ಇಂಡಿಯಾ) ಮೈಸೂರು ಘಟಕ ವತಿಯಿಂದ ಆಯೋಜಿಸಿದ್ದ `ಷೇರುಪೇಟೆಯಲ್ಲಿ ಬಂಡವಾಳ ಹೂಡಿಕೆ’ ಕುರಿತಾದ ವಿಶೇಷ ಉಪನ್ಯಾಸವನ್ನು ಷೇರುಪೇಟೆ ಬಂಡವಾಳ ಹೂಡಿಕೆ ತರಬೇತುದಾರ ಡಿ.ಜಿ.ಬಾಲಾಜಿ ರಾವ್ ನೀಡಿದರು.

Translate »