ಕರ್ನಾಟಕದಲ್ಲೂ ಉಚಿತವಾಗಿ ಲಸಿಕೆ ನೀಡಲು ಧಮ್ ಇದೆಯೇ…!?
ಮೈಸೂರು

ಕರ್ನಾಟಕದಲ್ಲೂ ಉಚಿತವಾಗಿ ಲಸಿಕೆ ನೀಡಲು ಧಮ್ ಇದೆಯೇ…!?

October 24, 2020

ಬೆಂಗಳೂರು, ಅ.23(ಕೆಎಂಶಿ)- ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿಗೆ ಒಳಗಾಗಿರುವ ಜನರಿಗೆ ಲಸಿಕೆಯನ್ನು ಉಚಿತವಾಗಿ ಕೊಡಿಸಲು ಧಮ್ ಇದೆಯೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಪತ್ರಿಕಾಗೋಷ್ಠಿಯಲ್ಲಿ ಉಚಿತವಾಗಿ ಲಸಿಕೆಗಳನ್ನು ನೀಡುವುದು ಸರ್ಕಾರದ ಕರ್ತವ್ಯ. ಅದೇ ರೀತಿ ಕೋವಿಡ್-19 ಸೋಂಕಿಗೂ ಸರ್ಕಾರದ ವತಿಯಿಂದಲೇ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ಸಮಾಜದ ರಕ್ಷಣೆ ಮಾಡುವುದು ಯಾವುದೇ ಸರ್ಕಾರದ ಕರ್ತವ್ಯ. ಇದುವರೆಗೂ ಆ ಕರ್ತವ್ಯವನ್ನು ಮಾಡಿಕೊಂಡು ಬಂದಿದೆ. ಎಲ್ಲಾ ರೀತಿಯ ಸಾಂಕ್ರಾಮಿಕ ರೋಗಗಳು ಎದುರಾದ ಸಂದರ್ಭದಲ್ಲೂ ಸರ್ಕಾರಗಳೇ ಉಚಿತ ಲಸಿಕೆ ನೀಡಿವೆ.

ಕೋವಿಡ್-19ಗೂ ಉಚಿತ ಲಸಿಕೆಯನ್ನು ಸರ್ಕಾರವೇ ನೀಡಲಿದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯವರು ಸಭೆ ನಡೆಸಿ, ಸರ್ಕಾರದ ನಿರ್ಣಯವನ್ನು ಪ್ರಕಟಿಸಲಿದ್ದಾರೆ ಎಂದರು. ಇದಕ್ಕೂ ಮುನ್ನ ಸಿದ್ದರಾಮಯ್ಯನವರು ಟ್ವೀಟ್ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಕೆಣಕಿ ಬಿಹಾರ ವಿಧಾನಸಭಾ ಚುನಾವಣೆಗೆ ಪ್ರಣಾಳಿಕೆ ಘೋಷಣೆ ಮಾಡಿರುವ ಬಿಜೆಪಿಯು ಅಲ್ಲಿನ ಜನರಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡುವ ಭರವಸೆ ನೀಡಿದೆ.

ಪ್ರಾಣ ರಕ್ಷಕ ಕೊರೊನಾ ಲಸಿಕೆಯನ್ನು ಬಿಹಾರ ರಾಜ್ಯಕ್ಕೆ ಉಚಿತವಾಗಿ ನೀಡುವ ಭರವಸೆ ನೀಡಿರುವ ನಮ್ಮ ರಾಜ್ಯದ, ರಾಜ್ಯಸಭಾ ಸದಸ್ಯೆ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಔದಾರ್ಯದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸುವಿರಾ ಎಂದು ಕಟೀಲ್ ಅವರನ್ನು ಪ್ರಶ್ನಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರ ಮನವೊಲಿಸಿ, ನಿಮ್ಮದೇ ಪಕ್ಷ ಅಧಿಕಾರಲ್ಲಿರುವ ಕರ್ನಾಟಕದಲ್ಲಿ ಕೊರೊನಾ ಲಸಿಕೆಯನ್ನು ಉಚಿತವಾಗಿ ಕೊಡಿಸುವ ಧಮ್ ನಿಮಗಿದೆಯೇ ಎಂದು ಕಟೀಲ್ ಅವರನ್ನು ಕೆಣಕಿದ್ದಾರೆ.

 

 

Translate »