ಜಾನಪದ ಉಳಿಸಿ, ಬೆಳೆಸುವುದು ಎಲ್ಲರ ಹೊಣೆ
ಮೈಸೂರು

ಜಾನಪದ ಉಳಿಸಿ, ಬೆಳೆಸುವುದು ಎಲ್ಲರ ಹೊಣೆ

December 21, 2020

ಜಾನಪದ ಸುಗ್ಗಿ ಕಾರ್ಯಕ್ರಮಕ್ಕೆ ಗೈರಾದ ಸಚಿವ ಎಸ್.ಟಿ.ಸೋಮಶೇಖರ್‍ರಿಂದ ಮುದ್ರಿತ ಸಂದೇಶ

ಮೈಸೂರು,ಡಿ.20(ಎಂಟಿವೈ)-ಜನಪದಕ್ಕೆ ಅದರದ್ದೇ ಆದ ವೈಶಿಷ್ಟ್ಯವಿದೆ. ಅದು ನಮ್ಮ ಸಂಸ್ಕøತಿಯನ್ನು ಸಾರಿ ಹೇಳುತ್ತದೆ. ಇದನ್ನು ಉಳಿಸಿ, ಬೆಳೆಸಲು ಎಲ್ಲರೂ ಪಣ ತೊಡಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.

`ವಿಶ್ವ ಜಾನಪದ ದಿನ’ದಂಗವಾಗಿ ಮೈಸೂರಿನ ಕಲಾಮಂದಿರ ದಲ್ಲಿ `ಜಾನಪದ ಸುಗ್ಗಿ’ಗೆ ಗೈರಾದ ಸಚಿವ ಎಸ್.ಟಿ.ಸೋಮಶೇಖರ್ ಸಂದೇಶ ಕಳುಹಿಸಿದ್ದರು. ಜಾನಪದ ಕಲೆ, ಸಂಸ್ಕøತಿ ಉಳಿವಿಗೆ ಸಂಘಟಿತ ಪ್ರಯತ್ನ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಜನಪದ ಸಂಸ್ಕøತಿ ಕೊಡುಗೆ ನೀಡಲು ಪಣ ತೊಡುವಂತೆ ಸಲಹೆ ನೀಡಿದ್ದಾರೆ. ಯಾವುದೇ ಒಂದು ದೇಶ, ರಾಜ್ಯ ಅಥವಾ ಪ್ರದೇಶದ ಹಿನ್ನೆಲೆ, ಪರಂಪರೆ ಹಾಗೂ ಸತ್ವ ಈ ಜಾನಪದದಲ್ಲಿ ಅಡಗಿರುತ್ತದೆ. ಜಾನಪದವನ್ನು ತುಂಬಾ ಸರಳವಾಗಿ ಹೇಳಬೇಕೆಂ ದರೆ, ಜನರಿಂದ ಜನರಿಗೆ, ಮಾತಿನಿಂದ ಮಾತಿನ ಮೂಲಕ ಬೆಳೆದುಕೊಂಡು ಬಂದ ಒಂದು ಕಲೆ ಎಂದು ಬಣ್ಣಿಸಬಹುದು. ಜಾನಪದ ಸಂಗೀತವನ್ನಷ್ಟೆ ಕಲೆ ಎಂದು ಹೇಳಲಾಗದು. ಕಲೆ, ಸಾಹಿತ್ಯ, ನೃತ್ಯ, ನಾಟಕ ಹೀಗೆ ಹಲವು ಕ್ಷೇತ್ರಗಳು ಜಾನಪದ ದಲ್ಲಿವೆ. ಇದು ನಮ್ಮ ಸಂಸ್ಕøತಿಯ ಶ್ರೀಮಂತಿಕೆ ಎತ್ತಿ ತೋರಿಸುತ್ತದೆ. ಈ ಆಚರಣೆಗಳ ಹಿಂದೆ ಅದರದ್ದೇ ಆದ ಮಹತ್ವ ಇವೆ. ನಮ್ಮ ಕರ್ನಾಟಕದಲ್ಲೂ ಅನೇಕ ಜನಪದ ಸಾಹಿತ್ಯ, ಗೀತೆ, ಕ್ರೀಡೆ ಸೇರಿದಂತೆ ಹಲವು ಪ್ರಕಾರಗಳು ಜನಮನ ಗೆದ್ದಿವೆ. ನಮ್ಮ ನಾಡಿನ ವಿವಿಧ ಭಾಗಗಳ ಜಾನಪದ ಸೊಗಡನ್ನು ನಮ್ಮ ಪೂರ್ವಜರು ಇಲ್ಲಿಯವರೆಗೂ ಕಾಪಾಡಿಕೊಂಡು ಬಂದಿದ್ದು, ನಾವು ಇದನ್ನು ಮುಂದೂ ಸಹ ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಹೇಳಿದ್ದಾರೆ.

‘ಬಾಲ ಬಾಯಿಯಲ್ಲಿ ಬ್ರಹ್ಮಾಂಡ ಅಡಗಿರುವಂತೆ ಜಾನಪದದಲ್ಲಿ ಎಲ್ಲವೂ ಅಡಗಿದೆ’ ಎಂದು ಸಾಹಿತಿ ದೇ.ಜವರೇಗೌಡ ಹೇಳಿದರೆ, ‘ಜನರ ನಾಲಿಗೆ ತೂಗು ತೊಟ್ಟಿಲಿನ ಮೇಲೆ ನರ್ತಿಸುತ್ತಾ ಜನಸಾಮಾನ್ಯರ ಸರ್ವತೋಮುಖ ಅಭಿವ್ಯಕ್ತಿ ಯಾಗಿದೆ’ ಎಂದು ಮತ್ತೊಬ್ಬ ಸಾಹಿತಿಗಳು, ಜನಪದ ತಜ್ಞರೂ ಆಗಿರುವ ಗೊ.ರು. ಚನ್ನಬಸಪ್ಪ ಅಭಿಪ್ರಾಯಪಟ್ಟಿದ್ದಾರೆ. ಅಕಾಡೆಮಿ ಹಮ್ಮಿಕೊಂಡಿರುವ ಜಾನಪದ ಸುಗ್ಗಿ ಕಾರ್ಯಕ್ರಮ ನಿಜಕ್ಕೂ ಒಂದು ಪ್ರಶಂಸನೀಯ ಎಂದು ಶ್ಲಾಘಿಸಿದ್ದಾರೆ.

Translate »