ನನ್ನ ಹೋರಾಟವೇ ಕಾರಣವಾಯ್ತು…
ಮೈಸೂರು

ನನ್ನ ಹೋರಾಟವೇ ಕಾರಣವಾಯ್ತು…

December 1, 2022

ಮೈಸೂರು, ನ.30(ಆರ್‍ಕೆಬಿ)- ಹಿಂದೆ ಕುರುಬ ಎಂದು ಹೇಳಿಕೊಳ್ಳಲು ಭಯ ಮತ್ತು ನಾಚಿಕೆ ಪಡುವ ಕಾಲವಿತ್ತು. ಆದರೆ ಇಂದು ನಾನು ಕುರುಬ ಎಂದು ಎದೆಯುಬ್ಬಿಸಿ ಹೇಳಿಕೊಳ್ಳುವ ಮಟ್ಟಕ್ಕೆ ಕುರುಬ ಸಮಾಜದಲ್ಲಿ ಜಾಗೃತಿ ಮೂಡಿದೆ. ಅದಕ್ಕೆ ಕಾರಣ ನನ್ನ ಹೋರಾಟ ಮತ್ತು ಸಂಘಟನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನ ಕಲಾಮಂದಿರದಲ್ಲಿ ಕರ್ನಾ ಟಕ ರಾಜ್ಯ ಕುರುಬರ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕಗಳು ಆಯೋಜಿ ಸಿದ್ದ 535ನೇ ಕನಕದಾಸರ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ 1988ರಲ್ಲಿ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾನು ಸಾರಿಗೆ ಸಚಿವನಾಗಿದ್ದೆ. ಸರ್ಕಾರದ ವತಿಯಿಂದ ಒಂದು ವರ್ಷ ಕಾಲ ಕನಕ ದಾಸ ಜಯಂತಿ ಆಚರಿಸುವಂತೆ ಮುಖ್ಯ ಮಂತ್ರಿಗಳ ಗಮನಕ್ಕೆ ತಂದೆ. ಅವರು ಒಪ್ಪಿದರು. ಆಗ ನಾನು 500ನೇ ಕನಕ ಜಯಂತಿ ಸಮಿತಿ ಅಧ್ಯಕ್ಷನಾಗಿದ್ದೆ. ಕಾರ್ಯ ಕ್ರಮವನ್ನು ವರ್ಷಪೂರ್ತಿ ಆಚರಿಸಲಾ ಯಿತು. 1989ರ ನವೆಂಬರ್‍ನಲ್ಲಿ ಜಯಂತಿ ಮಹೋತ್ಸವ ಸಮಾರೋಪ ಆಚರಿಸಬೇಕಿತ್ತು. ಅಷ್ಟರಲ್ಲಿ ಬೇರೆ ಸರ್ಕಾರ ಬಂತು. ಸಮಾ ರೋಪ ಸಮಾರಂಭ ಮಾಡಲೇ ಇಲ್ಲ ಎಂದು ತಾವು ಸರ್ಕಾರದ ವತಿಯಿಂದ ಕನಕ ಜಯಂತಿ ಆಚರಣೆಗೆ ನೀಡಿದ ಮಹತ್ವದ ಬಗ್ಗೆ ವಿವರಿಸಿದರು. ನಾನು ಕನಕದಾಸರ ಸಾಹಿತ್ಯವನ್ನು, ಅವರ ಪುಸ್ತಕಗಳನ್ನು ಕಡಿಮೆ ದರದಲ್ಲಿ ಇಡೀ ರಾಜ್ಯದ ಜನರಿಗೆ ಸಿಗ ಬೇಕೆಂದು ಮುದ್ರಿಸಿ,ಹಂಚುವ ಕೆಲಸ ಮಾಡಿದೆ. ಆಗ ವಿಶ್ರಾಂತ ಕುಲಪತಿ ದೇಜಗೌ ಅದರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದೆವು. ಕನಕದಾಸರ ಕುರಿತು ಸಣ್ಣ ಕೈಪಿಡಿ ಮಾಡಿ ಹಂಚಲಾಯಿತು.

ಅದಾದ ನಂತರ ಕನಕ ಜಯಂತಿಯನ್ನು ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ಆಚರಿಸಲು ಶುರು ಮಾಡಿದರು. ಅಲ್ಲಿಯವರೆಗೆ ಕನಕದಾಸರಿಗೆ ಅಷ್ಟು ಪ್ರಾಮುಖ್ಯತೆ ಸಿಕ್ಕಿರಲಿಲ್ಲ. ನಾನು 1989ರಲ್ಲಿ ಸೋತೆ. 89ರಿಂದ 94ರವರೆಗೆ ಫ್ರೀಯಾಗಿದ್ದೆ. ಆಗ ಇಡೀ ರಾಜ್ಯದಲ್ಲಿ ಸುತ್ತಾಡಿ, ಎಲ್ಲ ಕಡೆ ಕನಕ ಜಯಂತಿ ಆಚರಣೆ ಮಾಡುವಂತೆ ಮಾಡಿದೆ. ಅದಾದ ಬಳಿಕ ನಮ್ಮ ಸಮಾಜದಲ್ಲಿ ಜಾಗೃತಿ ಮೂಡಲು ಶುರುವಾಯಿತು. ಕುರುಬರು ಎಂದು ಹೇಳಿಕೊಳ್ಳಲು ನಾಚಿಕೆಪಡುತ್ತಿದ್ದ ಕಾಲವದು. ಎಲ್ಲೆಡೆ ಕನಕ ಜಯಂತಿ ಮಾಡಿದ ನಂತರ ಕುರುಬರಲ್ಲಿದ್ದ ಭಯ ಹೋಗಿ, ನಾನು ಕುರುಬ ಎಂದು ಎದೆ ತಟ್ಟಿಕೊಂಡು ಹೇಳಿಕೊಳ್ಳುವಂತಾಯಿತು ಎಂದು ಸಿದ್ದರಾಮಯ್ಯ ಹೇಳಿದರು.

ಅಂಬೇಡ್ಕರ್ ಸಂವಿಧಾನದಿಂದ ನಾವಿಂದು ವಿದ್ಯೆ ಕಲಿಯುತ್ತಿದ್ದೇವೆ: ಯಾರಿಗೆ ಇತಿಹಾಸ ಗೊತ್ತಿಲ್ಲವೋ ಅವರು ಭವಿಷ್ಯ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ನೋವು ಅನುಭವಿಸದವರಿಗೆ ಏನು ಗೊತ್ತಾಗುತ್ತದೆ. ನೋವು ಗೊತ್ತಿಲ್ಲದವರು, ಅನುಭವಿಸದವರು ಸಮಾಜ ಬದಲಾವಣೆ ಹೇಗೆ ಮಾಡುತ್ತಾರೆ. ಹೆಜ್ಜೆ ಹೆಜ್ಜೆಗೂ ಅವಮಾನ ಉಂಡವರು ಕನಕದಾಸರು. ಮಂತ್ರ ಕಲಿಯಲೆಂದು ವ್ಯಾಸರಾಜರ ಬಳಿ ಕನಕದಾಸರು ಹೋದಾಗ, ನೀನು ಕುರುಬ, ನಿನಗೆಂಥ ಮಂತ್ರ ಎಂದು ಹೀಯ್ಯಾಳಿಸಿದ್ದರು. ಬರೀ ಮಂತ್ರ ಅಷ್ಟೇ ಅಲ್ಲ. ವಿದ್ಯೆ ಕಲಿಯಲೂ ಅಂದು ಅವಕಾಶ ಇರಲಿಲ್ಲ. ಆದರೆ ಇಂದು ನಾವು ವಿದ್ಯೆ ಕಲಿಯುತ್ತಿದ್ದೇವೆ ಎಂದರೆ ಅದಕ್ಕೆ ಕನಕದಾಸರ ಹೋರಾಟ ಹಾಗೂ ಡಾ.ಅಂಬೇಡ್ಕರ್ ಅವರ ಸಂವಿಧಾನದಿಂದ ಸಾಧ್ಯವಾಗಿದೆ ಎಂದರು.

ಇಂದಿಗೂ ಉಳಿದಿರುವ ಜಾತಿ ವ್ಯವಸ್ಥೆ: ಜಾತಿ ವ್ಯವಸ್ಥೆ ಹೋಗಲಾಡಿಸಲು ಅನೇಕ ಸುಧಾರಣಾವಾದಿಗಳು ಪ್ರಯತ್ನ ಮಾಡಿದ್ದರೂ ಕೂಡ ಇಂದಿಗೂ ಅದು ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದ ಸಿದ್ದರಾಮಯ್ಯ, ವ್ಯವಸ್ಥೆ ವಿರುದ್ಧ ದನಿ ಎತ್ತಿದವರು ಬುದ್ಧ, ಬಸವ, ಕನಕದಾಸ, ಬಸವಣ್ಣ, ಮಹಾತ್ಮ ಗಾಂಧಿ, ಅಂಬೇಡ್ಕರ್. ಜಾತ್ಯಾತೀತ ಸಮಾಜ ನಿರ್ಮಾಣದ ಕÀನಸು ಕಂಡಿದ್ದವರು. ಯಾವ ವ್ಯವಸ್ಥೆಗೆ ಚಲನೆ ಇಲ್ಲವೋ ಅಲ್ಲಿ ಬದಲಾವಣೆ ಸಾಧ್ಯವಿಲ್ಲ. ಎಲ್ಲಿ ಚಲನೆ ಇರುತ್ತದೆಯೋ ಅಲ್ಲಿ ಬದಲಾವಣೆ ಸಾಧ್ಯ. ಅದಕ್ಕಾಗಿ ಎಲ್ಲರೂ ಸಾಮಾಜಿಕವಾಗಿ, ಆರ್ಥಿಕವಾಗಿ ಶಕ್ತಿವಂತರಾಗಬೇಕು. ನೀವೆಲ್ಲರೂ ಬದಲಾವಣೆಗೆ ಪ್ರಯತ್ನ ಮಾಡಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಶೋಷಣೆ ಮಾಡುತ್ತಲೇ ಇರುತ್ತಾರೆ: ಪಟ್ಟಭದ್ರ ಹಿತಾಸಕ್ತಿಗಳು, ಬದಲಾವಣೆ ಬೇಡ ಎನ್ನುವವರು ಆರ್‍ಎಸ್‍ಎಸ್‍ನವರು. ಅವರಿಗೆ ಬದಲಾವಣೆ ಬೇಕಾಗಿಲ್ಲ. ಸಂಘ ಪರಿವಾರದವರಿಗೂ ಬದಲಾವಣೆ ಬೇಕಾಗಿಲ್ಲ. ಅವರಿಗೆ ಅಸಮಾನತೆ ಉಳಿಯಬೇಕು. ಅದರ ಮೂಲಕ ಜನರನ್ನು ತುಳಿದು, ಶೋಷಣೆ ಮಾಡುತ್ತಲೇ ಇರುತ್ತಾರೆ ಎಂದರು.

ಸಾಮಾಜಿಕ ಅವ್ಯವಸ್ಥೆಯ ವಿರುದ್ಧ ಮಾತನಾಡಬೇಕು: ನಾನು ಶಾಸಕರ ಭವನದ ಎದುರು ಮಹರ್ಷಿ ವಾಲ್ಮೀಕಿ, ಕನಕದಾಸರ ಪ್ರತಿಮೆ ಹಾಕಿಸಿದೆ. ಆದರೆ ಅದರ ಲಾಭ ಪಡೆಯುತ್ತಿದ್ದಾರೆ. ಸಮಾಜಕ್ಕೆ ಬುದ್ದ, ಬಸವ, ಅಂಬೇಡ್ಕರ್, ಕನಕ, ಗಾಂಧೀಜಿಯವರ ಕೊಡುಗೆ ಏನು? ಕನಕದಾಸರ ಜಯಂತಿ ಏಕೆ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಎಲ್ಲರೂ ಚಿಂತಿಸಬೇಕು. ಎಲ್ಲರೂ ವಿಚಾರಶೀಲರಾಗಿ ಇದರ ಬಗ್ಗೆ ಹೆಚ್ಚು ಚರ್ಚೆಗಳಾಗಬೇಕು. ಕುಲಕುಲವೆಂದು ಹೊಡೆದಾಡದಿರಿ ಎಂದ ಕನಕದಾಸರ ಬಗ್ಗೆ ಹಾಗೂ ಇವನಾರವ…ಇನವಾರವ… ಇವ ನಮ್ಮವ, ಇವ ನಮ್ಮವ ಎಂದ ಬಸವಣ್ಣನವರ ವಿಚಾರಗಳನ್ನು ಅರಿಯಬೇಕು. ಇಂದಿನ ಸಾಮಾಜಿಕ ಅವ್ಯವಸ್ಥೆಯ ವಿರುದ್ಧ ಮಾತನಾಡುವ ಕೆಲಸ ಆಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸಮುದಾಯದ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಹಾಗೂ ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಿದ್ದರಾಮಯ್ಯ ಪುರಸ್ಕರಿಸಿದರು.
ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕೆ.ಆರ್.ನಗರ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಮುಖ್ಯ ಭಾಷಣ ಮಾಡಿದರು. ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಕರ್ನಾಟಕ ಕುರುಬರ ಸಂಘದ ರಾಜ್ಯಾಧ್ಯಕ್ಷ ಬಿ.ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪದಾಧಿಕಾರಿಗಳಾದ ದೇವರಾಜ ಸುಬ್ಬರಾಯಪ್ಪ, ಪ್ರಭಾವತಿ, ಭಗವಂತರಾಯ ಪಾಟೀಲ್, ಜಿಲ್ಲಾಧ್ಯಕ್ಷ ಕೋಟೆ ಶಿವಪ್ಪ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ರವಿಶಂಕರ್, ರಾಕೇಶ್ ಪಾಪಣ್ಣ ಇನ್ನಿತರರು ಉಪಸ್ಥಿತರಿದ್ದರು.

Translate »