ಜೈನ ಮುನಿ ತರುಣ್ ಸಾಗರ್ ವಿಧಿವಶ
ಮೈಸೂರು

ಜೈನ ಮುನಿ ತರುಣ್ ಸಾಗರ್ ವಿಧಿವಶ

September 2, 2018

ನವದೆಹಲಿ: ಜೈನಮುನಿ ತರುಣ್ ಸಾಗರ್ ದೀರ್ಘಕಾಲದ ಅನಾರೋಗ್ಯದ ನಂತರ ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ದೆಹಲಿಯಲ್ಲಿ ನಿಧನರಾಗಿದ್ದಾರೆ. ಜಾಂಡೀಸ್‍ನಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 51 ವರ್ಷ ವಯಸ್ಸಾಗಿತ್ತು. ಪೂರ್ವ ದೆಹಲಿಯ ಕೃಷ್ಣ ನಗರ ಪ್ರದೇಶದಲ್ಲಿರುವ ರಾಧಾಪುರಿ ಜೈನ ದೇವಸ್ಥಾನದಲ್ಲಿ ಅವರು ಆಶ್ರಮ ಹೊಂದಿ ದ್ದರು. ಅವರ ಅಂತಿಮ ಕ್ರಿಯೆಗಳು ಉತ್ತರ ಪ್ರದೇಶದ ಮುರುದ್ ನಗರದ ತರುಣ್ ಸಾಗರಮ್‍ನಲ್ಲಿ ನಡೆಸಲಾಗುತ್ತದೆ.

ಮಧ್ಯಪ್ರದೇಶದ ದಹೊಹ್ ಜಿಲ್ಲೆಯಲ್ಲಿ 1967ರ ಜೂನ್ 26ರಂದು ಜನಿಸಿದ್ದ ತರುಣ್ ಸಾಗರ್ ಅವರು ದಿಗಂಬರ ಜೈನ ಸನ್ಯಾಸಿಯಾಗಿದ್ದು, ಅಪಾರ ಜೈನ ಸಮುದಾಯದ ಅನುಯಾಯಿಗಳನ್ನು ಹೊಂದಿದ್ದರು. ಅನಾರೋಗ್ಯ ಹಿನ್ನಲೆಯಲ್ಲಿ ಮೂರು ವಾರಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಅವರ ಮೂಲ ಹೆಸರು ಪವನ್‍ಕುಮಾರ್ ಜೈನ್. 1981ರ ಆದಿಭಾಗದಲ್ಲಿ ತಮ್ಮ ಮನೆ ಮತ್ತು ಕುಟುಂಬ ತೊರೆದು ಸನ್ಯಾಸತ್ವ ಸ್ವೀಕರಿಸಿದ್ದರು. ಇವರು 2016ರಲ್ಲಿ ಹರ್ಯಾಣ ವಿಧಾನಸಭೆಯಲ್ಲಿ ಮಾಡಿದ್ದ ಕಡೆ ಪ್ರವಚನ ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಇವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.

Translate »