ಕೊಡಗಿನಲ್ಲಿ ಪ್ರಕೃತಿ ವಿಕೋಪ ಕುರಿತು ಕೆಪಿಎ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ
ಮೈಸೂರು

ಕೊಡಗಿನಲ್ಲಿ ಪ್ರಕೃತಿ ವಿಕೋಪ ಕುರಿತು ಕೆಪಿಎ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ

September 2, 2018

ಮೈಸೂರು: ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ(ಕೆಪಿಎ)ಯಲ್ಲಿ ತರಬೇತಿ ಪಡೆಯುತ್ತಿರುವ 100 ಮಂದಿ ಡಿವೈಎಸ್‍ಪಿ ಮತ್ತು 300 ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಪ್ರಶಿಕ್ಷಣಾರ್ಥಿಗಳಿಗೆ ಕೊಡಗಿನ ಪ್ರಕೃತಿ ವಿಕೋಪಕ್ಕೊಳಗಾಗಿ ರುವ ಪ್ರದೇಶಗಳಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಯಿತು.

ಕಳೆದ ಮೂರು ದಿನಗಳಿಂದ ಮೂರು ತಂಡಗಳಾಗಿ ವಿಂಗಡಿಸಿ ಪ್ರತಿದಿನ 100 ಮಂದಿಯನ್ನು ಕರೆದೊಯ್ದು ಕೊಡಗಿನ ಅತಿವೃಷ್ಟಿಯಿಂದ ಉಂಟಾದ ಭೂ ಕುಸಿತ, ಜಲಾವೃತ ಪ್ರದೇಶ ಗಳು, ರಕ್ಷಣಾ ಕಾರ್ಯ ಪುನರ್ವಸತಿ ಪ್ರಕ್ರಿಯೆ ಹಾಗೂ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿರುವವರ ಮೃತದೇಹಗಳನ್ನು ಹೊರತೆಗೆದ ಬಗ್ಗೆ ನೂತನ ಪೊಲೀಸ್ ಅಧಿಕಾರಿಗಳಿಗೆ ಸ್ಥಳದಲ್ಲಿ ವಿವರಿಸಿ ಪ್ರಾಯೋಗಿಕ ತರಬೇತಿ ನೀಡಲಾಯಿತು ಎಂದು ದಕ್ಷಿಣ ವಲಯ ಐಜಿಪಿ ಕೆ.ವಿ.ಶರತ್‍ಚಂದ್ರ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.
ಪ್ರತಿದಿನ 100 ಮಂದಿ ಸಬ್ ಇನ್ಸ್‍ಪೆಕ್ಟರ್‍ಗಳು 10 ಡಿವೈ ಎಸ್‍ಪಿಗಳಂತೆ ಗುರುವಾರದಿಂದ ಮೂರು ದಿನಗಳ ಕಾಲ ಮೈಸೂರಿನಿಂದ ಮಡಿಕೇರಿಗೆ ಕರೆದೊಯ್ದು, ಅಲ್ಲಿನ ಎಸ್ಪಿ ಕಚೇರಿಯಲ್ಲಿ ಹಾಜರಾತಿ ಪಡೆದು ನಂತರ ಜಿಲ್ಲಾ ಮೀಸಲು ಪಡೆ ಅಧಿಕಾರಿಗಳೊಂದಿಗೆ ವಿಕೋಪಕ್ಕೊಳಗಾದ ಸ್ಥಳಗಳಿಗೆ ಕರೆದೊಯ್ದು ವಿವರಿಸಲಾಯಿತು ಎಂದು ತಿಳಿಸಿದರು.

ರಸ್ತೆ, ಸೇತುವೆಗಳು ಕುಸಿದು ರಸ್ತೆ ಸಂಪರ್ಕ ಕಡೆತಗೊಂಡಿ ರುವುದು, ಗುಡ್ಡಗಳು ಉರುಳಿರುವುದು, ಮನೆಗಳು ಕುಸಿದು ಅವಶೇಷಗಳು ಮುಚ್ಚಿ ಹೋಗಿರುವುದು, ಬೆಳೆ ಕೊಚ್ಚಿಹೋಗಿ ರುವುದನ್ನು ತೋರಿಸಲಾಯಿತಲ್ಲದೆ, ರಕ್ಷಣಾ ಕಾರ್ಯಗಳ ಬಗ್ಗೆಯೂ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಿಕ್ಷಣಾರ್ಥಿ ಗಳಿಗೆ ವಿವರಿಸಿದರು ಎಂದು ಶರತ್‍ಚಂದ್ರ ತಿಳಿಸಿದರು.
ಆಗಸ್ಟ್ 16 ಮತ್ತು 17ರಂದು ಪ್ರಕೃತಿ ವಿಕೋಪದಿಂದ ಉಂಟಾದ ಅನಾಹುತ, ಅದರಿಂದ ಜೀವ ಆಸ್ತಿ-ಪಾಸ್ತಿ ಕಳೆದು ಕೊಂಡವರ ಪರಿಸ್ಥಿತಿ ಹಾಗೂ ಪರಿಹಾರ ಕೇಂದ್ರಗಳಲ್ಲಿ ಮಾಡಿರುವ ತಾತ್ಕಾಲಿಕ ಪುನರ್ವಸತಿ ಬಗ್ಗೆಯೂ ತಿಳಿಸಿಕೊಡಲಾಗಿದ್ದು, ಅತಿವೃಷ್ಠಿ, ನೆರೆಹಾವಳಿ ಯಂತಹ ಪ್ರಕೃತಿ ವಿಕೋಪ ಉಂಟಾದಾಗ ಕೈಗೊಳ್ಳಬೇಕಾದ ಕ್ಷಿಪ್ರ ರಕ್ಷಣಾ ಕಾರ್ಯದ ಬಗ್ಗೆಯೂ ಇದೇ ವೇಳೆ ತಿಳಿಸಿಕೊಡಲಾಯಿತು.

ಕೆಪಿಎ ನಿರ್ದೇಶಕ ವಿಪುಲ್‍ಕುಮಾರ್ ಹಾಗೂ ಐಜಿಪಿ ಶರತ್ ಚಂದ್ರ ಅವರು ಪರಸ್ಪರ ಸಮಾಲೋಚನೆ ನಡೆಸಿ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ನೆರೆ ಹಾವಳಿ ರಕ್ಷಣಾ ಕಾರ್ಯದ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲು ನಿರ್ಧರಿಸಿ ಮೂರು ದಿನಗಳ ಕಾಲ ಪ್ರಕೃತಿ ವಿಕೋಪ ಪರಿಸ್ಥಿತಿ ನಿರ್ವಹಣೆಯನ್ನು ಪರಿ ಚಯಿಸ ಲಾಗಿದ್ದು, ಇಂದಿಗೆ ತರಬೇತಿ ಅಂತ್ಯಗೊಂಡಿದೆ.

Translate »