ಶ್ರೀ ವಾಣಿ ಫನ್ ಫೆಸ್ಟ್-2018: ವಿದ್ಯಾರ್ಥಿಗಳಲ್ಲಿ ವ್ಯವಹಾರ ಕೌಶಲ್ಯ, ಸಹಕಾರ ಮನೋಭಾವನೆ ಮೂಡಿಸುವ ಪ್ರಯತ್ನ
ಮೈಸೂರು

ಶ್ರೀ ವಾಣಿ ಫನ್ ಫೆಸ್ಟ್-2018: ವಿದ್ಯಾರ್ಥಿಗಳಲ್ಲಿ ವ್ಯವಹಾರ ಕೌಶಲ್ಯ, ಸಹಕಾರ ಮನೋಭಾವನೆ ಮೂಡಿಸುವ ಪ್ರಯತ್ನ

September 2, 2018

ಮೈಸೂರು: ಪ್ರಸ್ತುತ ಜಾಗತೀಕರಣ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ವೃತ್ತಿ ಕೌಶಲ್ಯ, ಸಂವಹನ ಕಲೆ ಹಾಗೂ ವ್ಯವಹಾರ ಜ್ಞಾನ ವೃದ್ಧಿಗೆ ಪೂರಕವಾಗಿ ಹಮ್ಮಿಕೊಂಡಿದ್ದ ಫನ್ ಫೆಸ್ಟ್‍ನಲ್ಲಿ ವಿದ್ಯಾರ್ಥಿಗಳು ತಿಂಡಿ-ತಿನಿಸು ಸೇರಿದಂತೆ ವಿವಿಧ ಬಗೆಯ ಮಳಿಗೆಗಳನ್ನು ತೆರೆದು ವ್ಯಾಪಾರ-ವಹಿವಾಟು ನಡೆಸಿದರು.

ಮೈಸೂರಿನ ನಜರ್‍ಬಾದ್‍ನಲ್ಲಿರುವ ಶ್ರೀಜಯಚಾಮರಾಜ ಅರಸು ಎಜುಕೇಷನ್ ಟ್ರಸ್ಟ್‍ನ ಶ್ರೀ ವಾಣಿವಿಲಾಸ ಅರಸು ಬಾಲಿಕಾ ಪದವಿಪೂರ್ವ ಮತ್ತು ಪದವಿ ಕಾಲೇಜು ವತಿಯಿಂದ ಕಾಲೇಜಿನ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ `ಶ್ರೀ ವಾಣಿ ಫನ್ ಫೆಸ್ಟ್-2018’ರಲ್ಲಿ ವಿದ್ಯಾರ್ಥಿನಿಯರು ತಿಂಡಿ-ತಿನಿಸು, ಆಟಿಕೆ ಹಾಗೂ ಮನರಂಜನೆ ನೀಡುವಂತಹ ಮಳಿಗೆಗಳನ್ನು ತೆರೆದು ವ್ಯವಹಾರ ಕೌಶಲ್ಯ ಪ್ರದರ್ಶಿಸಿದರು.

ಒಂದು ಮಳಿಗೆ ನಿರ್ವಹಣೆಗೆ 10 ಮಂದಿವರೆಗೆ ಅವಕಾಶ ನೀಡಲಾಗಿತ್ತು. ಮಳಿಗೆಗಳಿಗೆ ಭೇಟಿ ನೀಡುವವರೊಂದಿಗೆ ವ್ಯವಹರಿಸಿ ಸಹಕಾರ ಹಾಗೂ ಸಹಶ್ರಮದ ಮಹತ್ವದ ಬಗ್ಗೆ ವಿದ್ಯಾರ್ಥಿನಿಯರು ತಿಳಿದುಕೊಂಡರು. 6ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕಾಗದ ಅರಿಯುವುದು, ಪಿಂಗ್ ಪಾಂಗ್ ಬಾಲ್, ಬಲೂನ್ ಹೊಡೆಯುವುದು, ನಟ್ ಮೇಲೆ ನಟ್ ಜೋಡಿಸುವುದು ಸೇರಿದಂತೆ ವಿವಿಧ ಮೋಜಿನ ಆಟಗಳು ಭರಪೂರ ಮನರಂಜನೆ ನೀಡಿದವು. ಗೋಬಿ, ಪಾನಿಪೂರಿ, ಚುರುಮುರಿ, ಚಕ್ಕಲಿ ಸೇರಿದಂತೆ ನಾನಾ ತಿಂಡಿ-ತಿನಿಸುಗಳ ಮಳಿಗೆಗಳು ಬಾಯಲ್ಲಿ ನೀರೂರಿಸಿದವು.

ವಿವಿಧ ರೀತಿ ಭಯಾನಕ ಮುಖವಾಡ ಧರಿಸಿ, ಕತ್ತಲ ಕೋಣೆಯಲ್ಲಿ ಅಡಗಿ ಕುಳಿತು ಕೊಠಡಿ ಪ್ರವೇಶಿಸುವವರಲ್ಲಿ ಗಾಬರಿ-ಆತಂಕ ಸೃಷ್ಟಿಸುವ `ಭಯದ ಮನೆ (ಸ್ಕರೀ ಹೌಸ್)’, `ಭೂಮಿ ಸಂರಕ್ಷಿಸಿ-ಬದುಕು ಉಳಿಸಿ’ ಆಂಗ್ಲಾ ಕಿರುಚಿತ್ರ ಪ್ರದರ್ಶನದ ಕೊಠಡಿ ಗಮನ ಸೆಳೆದವು. ಜೊತೆಗೆ ಈ ಕೊಠಡಿಯಲ್ಲಿ ಕೊಡಗು ಮತ್ತು ಕೇರಳ ನೆರೆ ಸಂತ್ರಸ್ತರ ಪರಿಹಾರ ನಿಧಿ ಸಂಗ್ರಹಕ್ಕೂ ಪೆಟ್ಟಿಗೆ ಇಡಲಾಗಿತ್ತು. 40ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿದ್ಯಾರ್ಥಿನಿಯರು ತಮ್ಮ ಕೌಶಲ್ಯ ಸಾದರಪಡಿಸಿದರಲ್ಲದೆ, ಸಾಂಸ್ಕøತಿಕ ಕಾರ್ಯಕ್ರಮದಲ್ಲೂ ಹಾಡಿ-ಕುಣಿದು ಸಂಭ್ರಮಿಸಿದರು.

ಬೆಳಿಗ್ಗೆ 9.30ರಿಂದ ಸಂಜೆ 5ರವರೆಗೆ ನಡೆದ ಒಂದು ದಿನದ ಈ ಕಾರ್ಯಕ್ರಮಕ್ಕೆ 20 ರೂ.ಗಳ ಪ್ರವೇಶ ದರ ನಿಗದಿ ಮಾಡಿ, ಸಾರ್ವನಿಕರಿಗೂ ಪ್ರವೇಶ ಕಲ್ಪಿಸಲಾಗಿತ್ತು. ಬಳಿಕ ಕಾಲೇಜಿನ ಆವರಣದಲ್ಲಿರುವ ವಿವಿಧ ಮಳಿಗೆಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗಿತ್ತು. ಭೇಟಿ ನೀಡುವವರ ಪೈಕಿ ಐವರಿಗೆ ಲಕ್ಕಿ ಡಿಪ್ ಮೂಲಕ ವಿವಿಧ ಬಹುಮಾನ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಪ್ರಥಮ ಬಹುಮಾನ 2 ಗ್ರಾಂನ ಚಿನ್ನದ ನಾಣ್ಯ, ದ್ವಿತೀಯ ಬಹುಮಾನ ರೇಷ್ಮೆ ಸೀರೆ, ತೃತೀಯ ಬಹುಮಾನ ಬೆಳ್ಳಿ ದೀಪ, ನಾಲ್ಕನೇ ಬಹುಮಾನ ಫ್ಯಾನ್ ಹಾಗೂ ಐದನೇ ಬಹುಮಾನ ಫ್ಲಾಸ್ಕ್.

ಉದ್ಘಾಟನೆ: ಹೂ ಗಿಡಕ್ಕೆ ನೀರೆರೆದು, ಬಲೂನ್‍ಗಳನ್ನು ಹಾರಿ ಬಿಟ್ಟು ಫೆಸ್ಟ್‍ಗೆ ಚಾಲನೆ ನೀಡಿದ ಮೈಸೂರು ರಾಜವಂಶಸ್ಥರೂ ಆದ ಟ್ರಸ್ಟಿನ ಮಹಾಪೋಷಕರಾದ ಡಾ.ಪ್ರಮೋದಾದೇವಿ ಒಡೆಯರ್ ಮಾತನಾಡಿ, ಈ ಕಾರ್ಯಕ್ರಮದ ಉದ್ದೇಶ ಈಡೇರಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಯರು ತಮ್ಮ ಕೌಶಲ್ಯ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗಿಡಕ್ಕೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದ್ದು ಅರ್ಥಪೂರ್ಣವಾಗಿದೆ. ಪ್ರಸ್ತುತ ಪರಿಸರ ಸಂರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ. ಶಾಲೆ ಮತ್ತು ಕಾಲೇಜಿನಲ್ಲಿ ಇಂಗ್ಲಿಷ್ ಮಾತನಾಡುವ ಕೋರ್ಸ್ ಆರಂಭಿಸಿರುವುದನ್ನು ಉತ್ತಮ ಬೆಳವಣಿಗೆ. ಇದನ್ನು ವಿದ್ಯಾರ್ಥಿನಿಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರಲ್ಲದೆ, ಕಾಲೇಜಿನ ಆವರಣದಲ್ಲಿ ಕ್ಯಾಂಟಿನ್‍ಗೆ ವ್ಯವಸ್ಥೆ ಮಾಡುವ ನಿಮ್ಮ ಬೇಡಿಕೆಯನ್ನು ಈಡೇರಿಸಲಾಗುವುದು. ಶೀಘ್ರದಲ್ಲಿ ಮೊಬೈಲ್ ಕ್ಯಾಂಟಿನ್ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಟ್ರಸ್ಟಿನ ಗೌರವ ಕಾರ್ಯದರ್ಶಿ ಮಹೇಶ್ ಎನ್.ಅರಸ್, ಸಹ ಕಾರ್ಯದರ್ಶಿ ಸರ್ದಾರ್ ಶ್ರೀಕಂಠೇರಾಜೇ ಅರಸ್, ಪದವಿ ಕಾಲೇಜಿನ ಪ್ರಾಂಶುಪಾಲ ನಂಜುಂಡಸ್ವಾಮಿ, ಪಿಯು ಕಾಲೇಜಿನ ಪ್ರಾಂಶುಪಾಲರಾದ ಜೆ.ಸಿ.ಅನಿತಾ ಮತ್ತಿತರರು ಹಾಜರಿದ್ದರು.

Translate »