ಜ.22, ರಾಷ್ಟ್ರ ಮಟ್ಟದ ಶ್ವಾನ ಪ್ರದರ್ಶನ ಸ್ಪರ್ಧೆ
ಮೈಸೂರು

ಜ.22, ರಾಷ್ಟ್ರ ಮಟ್ಟದ ಶ್ವಾನ ಪ್ರದರ್ಶನ ಸ್ಪರ್ಧೆ

January 18, 2023

ಮೈಸೂರು,ಜ.17(ಪಿಎಂ)-ಕೆನೈನ್ ಕ್ಲಬ್ ಆಫ್ ಮೈಸೂರು ವತಿಯಿಂದ ಮೈಸೂರಿನಲ್ಲಿ ಜ.22ರಂದು ರಾಷ್ಟ್ರ ಮಟ್ಟದ ಶ್ವಾನ ಪ್ರದರ್ಶನ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕ್ಲಬ್‍ನ ಅಧ್ಯಕ್ಷ ಬಿ.ಪಿ.ಮಂಜುನಾಥ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿಯ ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿ ಅಂದು ಬೆಳಗ್ಗೆ 9ಕ್ಕೆ ಪ್ರದರ್ಶನ ಸ್ಪರ್ಧೆಗೆ ಚಾಲನೆ ದೊರೆಯಲಿದೆ. ಕೆನೆಲ್ ಕ್ಲಬ್ ಆಫ್ ಇಂಡಿಯಾದ ಮಾನದಂಡಗಳಡಿ ಸ್ಪರ್ಧೆ ನಡೆಯಲಿದ್ದು, ಅದರಂತೆ ಶ್ವಾನಗಳಿಗೆ ಮೈಕ್ರೋಚಿಪ್ ಅಳವಡಿಸಬೇಕು ಹಾಗೂ ಮೂರು ತಲೆಮಾರಿನ ವಂಶದ ದಾಖಲೆ ಪ್ರಮಾಣ ಪತ್ರ ಹೊಂದಿರಬೇಕು ಎಂದು ಹೇಳಿದರು.

ಈಗಾಗಲೇ 400ಕ್ಕೂ ಹೆಚ್ಚು ಶ್ವಾನಗಳ ನೋಂದಣಿ ಆಗಿದೆ. ಎಲ್ಲಾ ವಿಭಾಗಗಳಿಂದ ಭಾಗವಹಿಸುವ ಒಟ್ಟು ಶ್ವಾನಗಳ ಪೈಕಿ `ಬೆಸ್ಟ್ ಇನ್ ಶೋ’ಗೆ 9 ಶ್ವಾನಗಳು ಆಯ್ಕೆ ಯಾಗಲಿವೆ. ಪ್ರದರ್ಶನದ ವೇಳೆ ತಂಟೆ ಮಾಡುವ ಶ್ವಾನ ಗಳನ್ನು ಸ್ಪರ್ಧೆಯಿಂದ ಹೊರ ಹಾಕುವ ಅಧಿಕಾರವನ್ನು ತೀರ್ಪುಗಾರರು ಹೊಂದಿರುತ್ತಾರೆ. ಯಾವುದೇ ಮಿಶ್ರತಳಿ (ಕ್ರಾಸ್ ಬ್ರೀಡ್) ಶ್ವಾನಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇಲ್ಲ. ಸ್ಥಳದಲ್ಲಿ ನೋಂದಣಿಗೆ ಅವಕಾಶ ಇಲ್ಲವಾಗಿದ್ದು, ಪ್ರದರ್ಶನಕ್ಕೆ ಮೂರು ದಿನಗಳ ಮುನ್ನ ತಿತಿತಿ.ಜogsಟಿಚಿoತಿs.ಛಿom ಮೂಲಕ ಆನ್‍ಲೈನ್ ನಲ್ಲಿ ನೋಂದಣಿ ಆಗಿರಬೇಕು. ಇಂದು ಸಂಜೆ 7ಕ್ಕೆ ನೋಂದಣಿ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.

ದೇಶ-ವಿದೇಶದ 40ಕ್ಕೂ ಹೆಚ್ಚು ತಳಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. 4ರಿಂದ 6 ತಿಂಗಳು ವಿಭಾಗ, 6ರಿಂದ 12, 12ರಿಂದ 18, 18ರಿಂದ 36 ತಿಂಗಳು ವಿಭಾಗಗಳು ಮತ್ತು 36 ತಿಂಗಳ ಮೇಲ್ಪಟ್ಟ ಮುಕ್ತ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಇವುಗಳಲ್ಲಿ ಗಂಡು ಮತ್ತು ಹೆಣ್ಣು ಶ್ವಾನ ಗಳ ಪ್ರತ್ಯೇಕ ವಿಭಾಗಗಳೂ ಇರಲಿವೆ. ಎಲ್ಲಾ ವಿಭಾಗ ಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ, `ಬೆಸ್ಟ್ ಆಫ್ ಬ್ರೀಡ್’, `ಬೆಸ್ಟ್ ಇನ್ ಶೋ’ ಸ್ಥಾನಕ್ಕೆ ಆಕರ್ಷಕ ಟ್ರೋಫಿ ಹಾಗೂ ಪ್ರಮಾಣ ಪತ್ರ ನೀಡಲಾಗುವುದು ಎಂದರು.

ಸಂಜೆ 8ಕ್ಕೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ತೀರ್ಪುಗಾರರಾಗಿ ಚೆನ್ನೈನ ಸಿ.ವಿ.ಸುದ ರ್ಶನ್, ಬೆಂಗಳೂರಿನ ಟಿ.ಪ್ರೀತಂ, ಯಶೋಧರ ಹೇಮಚಂದ್ರ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಶ್ವಾನ ಪ್ರದರ್ಶನ ವೀಕ್ಷಿಸಲು 50 ರೂ.ಗಳ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಕ್ಲಬ್‍ನ ಉಪಾಧ್ಯಕ್ಷ ಡಾ.ಡಿ.ಟಿ.ಜಯರಾಮಯ್ಯ ಮಾತನಾಡಿ, ದೇಸಿಯ ತಳಿಗಳ ವಿಶೇಷ ಶ್ವಾನ ಪ್ರದ ರ್ಶನವನ್ನೂ ಏರ್ಪಡಿಸಿದ್ದು, ದೇಸಿಯ ತಳಿಯಾದ ಮುದೋಳ್ ಶ್ವಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಲಿವೆ ಎಂದರು. ಬಳಿಕ ಶ್ವಾನ ಪ್ರದರ್ಶನ ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಕೆನೈನ್ ಕ್ಲಬ್ ಆಫ್ ಮೈಸೂರು ಕಾರ್ಯದರ್ಶಿ ಡಾ.ಸಂಜೀವ್ ಮೂರ್ತಿ, ಪದಾಧಿಕಾರಿಗಳಾದ ಗಿರೀಶ್, ತೇಜಸ್ವಿ, ಅಭಿಷೇಕ್ ಹೆಗ್ಡೆ, ಮನೋಹರ್, ಪೋಷಕ ವಿನಿತ್ ಗೋಷ್ಠಿಯಲ್ಲಿದ್ದರು.

Translate »