ಪಂಚಮಸಾಲಿ 3ನೇ ಪೀಠ ಸ್ಥಾಪನೆಗೆ ಜಯಮೃತ್ಯುಂಜಯ ಸ್ವಾಮಿ ವಿರೋಧ]
ಮೈಸೂರು

ಪಂಚಮಸಾಲಿ 3ನೇ ಪೀಠ ಸ್ಥಾಪನೆಗೆ ಜಯಮೃತ್ಯುಂಜಯ ಸ್ವಾಮಿ ವಿರೋಧ]

February 6, 2022

ಮೈಸೂರು, ಫೆ.5(ಎಂಟಿವೈ)- ದೇಶಕ್ಕೆ ಒಬ್ಬರೇ ರಾಷ್ಟ್ರಪತಿ. ಒಂದು ಸಮುದಾಯಕ್ಕೆ ಒಬ್ಬರೇ ಗುರು ಪದ್ಧತಿ ಇರುವಾಗ ಪಂಚಮಸಾಲಿ ಮೂರನೇ ಪೀಠದ ಅಗತ್ಯವಿಲ್ಲ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ಜಯ ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನ ಕೆ.ಆರ್.ಮೊಹಲ್ಲಾದಲ್ಲಿ ವಿಜಯಪುರದ ಸಿದ್ಧಿ ಸಿರಿ ಸೌಹಾರ್ಧ ಸಹಕಾರಿ ನಿಯಮಿತದ ಮೈಸೂರು ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಂಚಮಸಾಲಿ ಸಮುದಾಯ ಸಂಘಟಿತವಾಗುತ್ತಿದೆ. ಇದಕ್ಕಾಗಿ 14 ವರ್ಷಗಳಿಂದ ಶ್ರಮಿಸಿದ್ದೇನೆ. ಈ ಸಂಘಟಿತ ಶಕ್ತಿಯನ್ನು ಛಿದ್ರಗೊಳಿಸುವ ನಿಟ್ಟಿನಲ್ಲಿ ಮೂರನೇ ಪೀಠ ಸ್ಥಾಪನೆ ಸಂಚು ನಡೆಸಲಾಗುತ್ತಿದೆ. ಇದು ಖಂಡನೀಯ. ಇದನ್ನು ಸಹಿಸುವುದಿಲ್ಲ ಎಂದು ಕಿಡಿಕಾರಿದರು.

ದೇಶಕ್ಕೆ ಒಬ್ಬರೇ ರಾಷ್ಟ್ರಪತಿ, ಒಂದು ಸಮುದಾಯಕ್ಕೆ ಒಬ್ಬರೇ ಗುರುಗಳಿದ್ದಾರೆ. ಮತ್ತೆ ಮೂರನೇ ಪೀಠ ಅಗತ್ಯವಿಲ್ಲ. ದಶಕ್ಕಕ್ಕೂ ಮುಗಿಲಾಗಿ ಚಳಿ, ಮಳೆ, ಬಿಸಿಲು, ಗಾಳಿ ಎನ್ನದೆ ಪಂಚಮಸಾಲಿ ಸಮುದಾಯದ ಸಂಘಟನೆ ಮಾಡಲಾಗಿದೆ. ಇದರಿಂದ ಕೂಡಲ ಸಂಗಮ ಶ್ರೀಗಳ ಪ್ರಭಾವ ಹೆಚ್ಚಾಗುತ್ತದೆ ಎಂಬ ಹೊಟ್ಟೆ ಕಿಚ್ಚಿನ ಮನೋಭಾವದಿಂದ ಮೂರನೇ ಪೀಠದ ಹುನ್ನಾರ ನಡೆಸ ಲಾಗುತ್ತಿದೆ. ಆದರೂ ನಮ್ಮ ಹೋರಾಟಕ್ಕೆ ಜಯ ಸಿಗಲಿದೆ. ಪಂಚಮಸಾಲಿಗಳಿಗೆ ಪ್ರವರ್ಗ-2ರ ಮೀಸಲಾತಿ ಸೌಲಭ್ಯ ದೊರೆಯಲಿದೆ. ಅದರ ಸಂಪೂರ್ಣ ಲಾಭ ಬಸವನಗೌಡ ಪಾಟೀಲ್ ಯತ್ನಾಳ್, ಸಿ.ಸಿ.ಪಾಟೀಲ್, ಅರವಿಂದ್ ಬೆಲ್ಲದ್ ಅವರಿಗೆ ಸಿಗುತ್ತದೆ ಎಂಬ ಆತಂಕದಿಂದ ಇಂತಹ ಸಂಚು ನಡೆಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾರು ಏನೇ ಮಾಡಿದರು ನಮ್ಮ ಹೋರಾಟ ನಿಲ್ಲಿಸಲು ಸಾಧ್ಯವಿಲ್ಲ. ಪಂಚಮಸಾಲಿ ಪೀಠವೇ ನಮ್ಮ ಪೀಠ. ಅವರು ಬೇಕಾ ದರೆ ಮನೆಗೊಂದು, ಊರಿಗೊಂದು ಪೀಠ ಮಾಡಿಕೊಳ್ಳಲಿ. ನಮಗೆ 2ಎ ಮೀಸಲಾತಿ ಕೊಡಿಸುವುದಷ್ಟೇ ನಮ್ಮ ಗುರಿ. ಈ ಹೋರಾಟವನ್ನು ತಡೆಯಲು ಎಷ್ಟೇ ತೊಂದರೆ ನೀಡಿ ದರೂ ಹಾಗೂ ತಲೆ ಕೆಳಗೆ ಮಾಡಿದರೂ ಈ ಹೋರಾಟ ನಿಲ್ಲಿಸುವುದಿಲ್ಲ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮ ಸಾಲಿ ಪೀಠಾಧ್ಯಕ್ಷ ಜಯ ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿ ದರು. ಇದಕ್ಕೂ ಮುನ್ನ ಹೊಸಮಠದ ಚಿದಾನಂದ ಸ್ವಾಮೀಜಿ ಹೊಸ ಶಾಖೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಬಸವನಗೌಡ ಪಾಟೀಲ್, ಉದ್ಯಮಿ ಎಂ.ಕೆ.ಪೋತರಾಜ್, ಮುಖಂಡ ಆಲನಹಳ್ಳಿ ಪುಟ್ಟಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.

Translate »