ಮೈಸೂರಲ್ಲಿ ಮರಳು ಅಭಾವ ನಿವಾರಣೆಗೆ ಸದ್ಯವೇ ಕ್ರಮ
ಮೈಸೂರು

ಮೈಸೂರಲ್ಲಿ ಮರಳು ಅಭಾವ ನಿವಾರಣೆಗೆ ಸದ್ಯವೇ ಕ್ರಮ

February 6, 2022

ಮೈಸೂರು, ಫೆ.5(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಮರಳು ಅಭಾವ ತಪ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸ ಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಆಚಾರ್ ಹಾಲಪ್ಪ ಬಸಪ್ಪ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಡಿ.ದೇವರಾಜ ಅರಸು ಸಭಾಂಗಣ ದಲ್ಲಿ ಎರಡು ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿ, ಮೈಸೂರಿನಲ್ಲಿ ಮರಳಿಗೆ ಬಹಳ ಬೇಡಿಕೆ ಇದೆ. ಆದರೆ ಇಲ್ಲಿ ಉತ್ಪಾದನಾ ಘಟಕಗಳಿಲ್ಲದ ಪರಿಣಾಮ ಮರಳು ಅಭಾವ ಸೃಷ್ಟಿಯಾಗಿದೆ. ನದಿ ಉಗಮ ಸ್ಥಾನ ಪ್ರದೇಶದಲ್ಲಿ ಮರಳು ತೆಗೆಯದಂತೆ ಕೇಂದ್ರ ಸರ್ಕಾರದ ನಿರ್ಬಂಧವಿದೆ. ಈ ಕಾರಣದಿಂದಾಗಿ ಇಲ್ಲಿನ ನದಿಪಾತ್ರದಲ್ಲಿ ಮರಳು ತೆಗೆಯಲು ಸಾಧ್ಯವಿಲ್ಲ. ಬಿಲ್ಡಿಂಗ್ ಸ್ಟೋನ್ಸ್ ಕ್ರಷರ್‍ಗಳ ಸಂಖ್ಯೆಯೂ ಕಡಿಮೆ ಇರುವುದ ರಿಂದ ಎಂ ಸ್ಯಾಂಡ್ ಕೊರತೆಯೂ ಉಂಟಾಗಿದೆ. ಪರಿಣಾಮ ವಾಗಿ ಮರಳು ಹಾಗೂ ಎಂ ಸ್ಯಾಂಡ್‍ಗೆ ಬೇರೆ ಜಿಲ್ಲೆಗಳನ್ನು ಅನಿವಾರ್ಯವಾಗಿ ಅವಲಂಬಿಸುವಂತಾಗಿದೆ. ಇದನ್ನು ತಗ್ಗಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಿಗುವ ಕಚ್ಛಾವಸ್ತುಗಳನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುವುದರ ಜೊತೆಗೆ ಸಾರ್ವಜನಿಕರಿಗೆ ಹೊರೆಯಾಗದ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಹೊಸ ಮರಳು ನೀತಿಯನ್ನು ಶೀಘ್ರ ಅನುಷ್ಠಾನಗೊಳಿಸಿ, ಬೇಡಿಕೆಗೆ ಅನುಸಾರವಾಗಿ ಪೂರೈಕೆ ಮಾಡಲು ಕ್ರಮ ಕೈಗೊಳ್ಳ ಲಾಗುವುದು. ಮರಳು ಅಭಾವ ತಪ್ಪಿಸಲು ಬ್ಲಾಕ್‍ಗಳನ್ನು ಗುರುತಿಸಿ ಗ್ರಾಪಂಗಳ ಮೂಲಕ ಮರಳು ವಿತರಿಸಲಾಗು ವುದು. ವ್ಯಾಪ್ತಿಯಲ್ಲಿರುವ ತೊರೆ, ಹಳ್ಳ, ಜರಿಗಳಂತಹ ಮರಳು ಸಂಗ್ರಹಿಸಿ, ಸಣ್ಣ ಪ್ರಮಾಣದ ಬ್ಲಾಕ್‍ಗಳ ಮೂಲಕ ಸ್ಥಳೀಯ ವಾಗಿ ವಿತರಿಸುವ ಜವಾಬ್ದಾರಿಯನ್ನು ಗ್ರಾಪಂಗಳಿಗೇ ನೀಡ ಲಾಗುವುದು. ಸಾರ್ವಜನಿಕರು `ಮರಳು ಆಪ್’ ಮೂಲಕ ಮರಳು ಖರೀದಿಗೆ ವ್ಯವಸ್ಥೆ ಮಾಡಲಾಗುವುದು. ಹೊಳೆ, ತೊರೆ ಭಾಗದಲ್ಲಿ ಮರಳು ತೆಗೆಯುವ ಬಗ್ಗೆ ತಜ್ಞರ ಮೂಲಕ ಪರಿ ಶೀಲನೆ ನಡೆಸಿ, ಸಮಸ್ಯೆ ಇಲ್ಲ ಎನ್ನುವುದನ್ನು ಖಚಿತಪಡಿಸಿ ಕೊಂಡ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಯೋಜನೆ ತಲುಪಿಸಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಸಭೆ ಯಲ್ಲಿ ಚರ್ಚಿಸಲಾಗಿದೆ. 6 ತಿಂಗಳಿಂದ 6 ವರ್ಷದವರೆಗಿನ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕತೆ ಹೆಚ್ಚಿಸುವ ಉದ್ದೇಶದೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆ ನೀಡಿವೆ. ಯೋಜನೆ ಅನುಷ್ಠಾನದಲ್ಲಿ ಲೋಪವಾಗದಂತೆ ಪೌಷ್ಟಿಕತೆ ಹೆಚ್ಚಿಸುವ ವಸ್ತುಗಳ ಗುಣಮಟ್ಟ ಹಾಗೂ ಪ್ರಮಾಣದಲ್ಲಿ ಯಾವುದೇ ಕಾರಣಕ್ಕೂ ವ್ಯತ್ಯಾಸವಾಗದಂತೆ ನಿಗಾ ವಹಿಸಬೇಕೆಂದು ಸೂಚಿಸ ಲಾಗಿದೆ. ಬಾಲ್ಯ ವಿವಾಹ ತಡೆ, ಪೋಕ್ಸೋ ಪ್ರಕರಣಗಳ ಸಂತ್ರಸ್ತರಿಗೆ ನೆರವು ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿ, ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ರಾಜಸ್ವ ಸಂಗ್ರಹಣೆ ಹೆಚ್ಚಿಸಿ: ಇದಕ್ಕೂ ಮುನ್ನ ಸಭೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ರಾಜಸ್ವ ಸಂಗ್ರಹಕ್ಕೆ ಗಮನ ಹರಿಸುವಂತೆ ಸೂಚನೆ ನೀಡಿದರು. ಇದೇ ವೇಳೆ ಇಲಾಖೆ ನಿರ್ದೇ ಶಕರು, `ರಾಜಸ್ವ ಸಂಗ್ರಹ ಪ್ರಮಾಣ ಹಾಗೂ ಡಿಎಂಎಫ್ (ಜಿಲ್ಲಾ ಖನಿಜ ಪ್ರತಿಷ್ಠಾನ) ಪ್ರಮಾಣದ ವಿವರಗಳಲ್ಲಿ ವ್ಯತ್ಯಾಸ ವಿದೆ. ಇದನ್ನು ಸರಿಪಡಿಸಿ 2015-16ನೇ ಸಾಲಿನಿಂದ ಈವರೆ ಗಿನ ಸಂಗ್ರಹದ ಮಾಹಿತಿ ನೀಡಬೇಕು. ಕ್ವಾರಿಕಲ್ಲು ಉಪಯೋಗಿ ಸಿಕೊಳ್ಳದೆ, ಅರ್ಜಿ ವಿಲೇವಾರಿ ಮಾಡದೆ ವಿಳಂಬ ಮಾಡಿದರೆ ರಾಜಸ್ವ ಸಂಗ್ರಹ ಯಾವ ರೀತಿಯಲ್ಲಾಗುತ್ತದೆ. ಈ ಬಗ್ಗೆ ಇನ್ನೆ ರಡು ದಿನಗಳಲ್ಲಿ ಮಾಹಿತಿ ಸಲ್ಲಿಸಬೇಕು’ ಎಂದು ಸೂಚಿಸಿದರು.

ಶಾಸಕರ ಅಸಮಾಧಾನ: ಇದೇ ವೇಳೆ ಶಾಸಕ ಎಲ್. ನಾಗೇಂದ್ರ ಮಾತನಾಡಿ, ತಿ.ನರಸೀಪುರ ಹಾಗೂ ನಂಜನ ಗೂಡಿನಲ್ಲಿ ಯಥೇಚ್ಛವಾಗಿ ಅತ್ಯುತ್ತಮ ಮರಳು ಲಭ್ಯವಿದ್ದರೂ ನಮ್ಮ ಉಪಯೋಗಕ್ಕೆ ಬಳಕೆ ಮಾಡಿಕೊಳ್ಳಲಾಗದ ಸ್ಥಿತಿ ಇದೆ. ನಾವು ತೆಗೆಯದ ಕಾರಣ ನೀರಿನ ಹರಿವಿನಲ್ಲಿ ಮರಳು ಬೇರೆ ರಾಜ್ಯಗಳ ಸೇರುತ್ತಿದೆ. ಅಲ್ಲಿಂದ ನಾವು ಹಣ ಕೊಟ್ಟು ತರುವಂತಾ ಗಿದೆ. ಎಂ ಸ್ಯಾಂಡ್‍ಗೂ ಮರಳಿಗೂ ಸಾಕಷ್ಟು ವ್ಯತ್ಯಾಸವಿದೆ. ಆದರೆ ಎಲ್ಲಾ ಕಾಮಗಾರಿಗಳಿಗೂ ಎಂ ಸ್ಯಾಂಡ್ ಬಳಸುವಂತಾ ಗಿದೆ. ಹೊಸ ಮರಳು ನೀತಿ ಜಾರಿಗೆ ತರುವ ಮೂಲಕ ಸಾರ್ವ ಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು.
ಈ ವೇಳೆ ಅಧಿಕಾರಿಗಳು ನದಿ ಉಗಮ ಸ್ಥಾನದ ಪ್ರದೇಶ ದಲ್ಲಿ ಮರಳು ತೆಗೆಯಲು ಕೇಂದ್ರ ನಿರ್ಬಂಧ ವಿಧಿಸಿದೆ ಎಂದು ತಿಳಿಸಿದ್ದರಿಂದ ಸಿಟ್ಟಾದ ನಾಗೇಂದ್ರ, ಕೇರಳ, ತಮಿಳು ನಾಡಿಗಿಲ್ಲದ ನಿರ್ಬಂಧ ನಮಗೆ ಮಾತ್ರ ಹೇಗೆ ಅನ್ವಯ ವಾಗುತ್ತದೆ ಎಂದರು. ಈ ಬಗ್ಗೆ ಸಚಿವ ಆಚಾರ್ ಪ್ರತಿ ಕ್ರಿಯಿಸಿ, ಈ ಬಗ್ಗೆ ಚರ್ಚೆ ನಡೆಸಿ, ನಿರ್ಬಂಧ ವಿನಾಯ್ತಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸೋಣ ಎಂದು ತಿಳಿಸಿದರು.

ಅಂಗನವಾಡಿಗೆ ಸಿಎಸ್‍ಆರ್ ಬಳಕೆ: ಜಿಲ್ಲೆಯಲ್ಲಿರುವ ಅಂಗನವಾಡಿಗಳ ಸಂಖ್ಯೆ, ಕಟ್ಟಡಗಳ ಮಾಹಿತಿ, ಮೂಲ ಸೌಕರ್ಯದ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಪ್ರಿಯಾಂಕ ಮೇರಿ ಪ್ರಾನ್ಸಿಸ್, ಅಂಗನವಾಡಿಗಳ ಸೌಲಭ್ಯಕ್ಕಾಗಿ ಸ್ಥಳೀಯ ಸಂಸ್ಥೆಗಳಲ್ಲೂ ಅನುದಾನ ಮೀಸಲಿಡಬೇಕು ಎಂದು ಸಲಹೆ ನೀಡಿದರು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ಎಲ್ಲಾ ಅಂಗನವಾಡಿಗಳಿಗೂ ಸ್ವಂತ ಕಟ್ಟಡ ಕಲ್ಪಿಸಿಕೊಡಬೇಕು. ನಿವೇಶನ ಲಭ್ಯವಿಲ್ಲದಿದ್ದರೆ ಸರ್ಕಾರಿ ಶಾಲಾ ಆವರಣದಲ್ಲೇ ಸೂಕ್ತ ಸ್ಥಳದಲ್ಲಿ ಕೊಠಡಿ ನಿರ್ಮಿಸಿ, ಅಲ್ಲಿಗೆ ಸ್ಥಳಾಂ ತರಿಸಬೇಕು ಎಂದು ಸೂಚನೆ ನೀಡಿದರು.

ಈ ವೇಳೆ ಸಚಿವ ಆಚಾರ್, ರಾಮನಗರದ ಜಿಲ್ಲೆಯ ಮಾದರಿ ಅಂಗನವಾಡಿ ಬಗ್ಗೆ ವಿವರಿಸಿ, ಶಾಸಕರ ನಿಧಿ ಸೇರಿ ವಿವಿಧ ಅನುದಾನ ಬಳಸಿಕೊಂಡು ಅಂಗನವಾಡಿ ಅಭಿವೃದ್ಧಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಮನಸ್ಸು ಮಾಡಬೇಕು. ಸಿಎಸ್‍ಆರ್ ಫಂಡ್ ಅನ್ನೂ ಅಂಗನವಾಡಿ ಅಭಿವೃದ್ಧಿಗೆ ಕೊಡಿಸಬಹುದು ಎಂದು ತಿಳಿಸಿದರು.

ಮೊದಲು ಸೌಲಭ್ಯ ಕಲ್ಪಿಸಿ: ಶಾಸಕ ನಾಗೇಂದ್ರ ಮಾತ ನಾಡಿ, ಈಗಿರುವ ಅಂಗನವಾಡಿಗಳಲ್ಲಿ ಮೂಲಭೂತ ಸೌಕರ್ಯ ಗಳಿಲ್ಲ. ನಮ್ಮ ಕ್ಷೇತ್ರ ವ್ಯಾಪ್ತಿಯ ತಿಲಕ್‍ನಗರದಲ್ಲಿ ಹಳೇ ಶಾಲೆಯೊಂದರಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಕಾಟಾ ಚಾರಕ್ಕೆ ಅಂಗನವಾಡಿ ನಡೆಸುವಂತಾಗಬಾರದು, ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಬೇಕು ಎಂದರಲ್ಲದೆ, ಸುಬ್ರಹ್ಮಣ್ಯನಗರದಲ್ಲಿ ಪಾಲಿಕೆ ವತಿಯಿಂದ ಅಂಗನವಾಡಿ ಕಟ್ಟಡ ಕಟ್ಟಿಸಿದ್ದು, ಕೇಂದ್ರ ಆರಂಭಕ್ಕೆ ಅನುಮತಿ ನೀಡಬೇಕೆಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಲಾಖೆ ನಿರ್ದೇಶಕಿ, ಹೊಸ ಕೇಂದ್ರ ಆರಂ ಭಕ್ಕೆ ಕೇಂದ್ರ ಸರ್ಕಾರ ಅನುಮತಿಸಬೇಕು. ಪಾಲಿಕೆ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಕಾರ್ಯಕರ್ತೆ ಹಾಗೂ ಸಹಾ ಯಕಿಯನ್ನು ನಿಯೋಜಿಸಿದರೆ, ಅಗತ್ಯವಾದ ಆಹಾರ ವಸ್ತು ಗಳನ್ನು ಇಲಾಖೆಯಿಂದ ಪೂರೈಸಲಾಗುವುದು ಎಂದರು. 4 ದಿನಗಳಲ್ಲಿ ಸದ್ಯಕ್ಕೆ ಸಮೀಪದ ಅಂಗನವಾಡಿ ಕೇಂದ್ರವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಸಚಿ ವರು ಸೂಚನೆ ನೀಡಿದರು. ಆರೋಗ್ಯ ಇಲಾಖೆಯವರು ವೈದ್ಯ ಕೀಯ ತಪಾಸಣೆ ಮೂಲಕ ಅಪೌಷ್ಟಿಕತೆಯುಳ್ಳ 256 ಮಕ್ಕಳನ್ನು ಗುರುತಿಸಿದ್ದಾರೆ. ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು 156 ಮಕ್ಕಳು ಎಂದು ಮಾಹಿತಿ ನೀಡಿದ್ದಾರೆ. ಅಂಗನವಾಡಿಗೆ ಬಾರದ ಮಕ್ಕಳನ್ನೂ ಸಮೀಕ್ಷೆ ಮಾಡಿ, ನಿಖರ ದಾಖಲೆಯೊಂದಿಗೆ ಅಂತಹ ಮಕ್ಕಳಿಗೆ ಸೌಲಭ್ಯ ತಲುಪಿ ಸಬೇಕು ಎಂದು ತಿಳಿಸಿದರು. ಮೇಯರ್ ಸುನಂದಾ ಪಾಲ ನೇತ್ರ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜಿಪಂ ಸಿಇಒ ಎ.ಎಂ.ಯೋಗೀಶ್, ಎಎಸ್‍ಪಿ ಶಿವಕುಮಾರ್ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Translate »