ಸಂಸದೆ ಸುಮಲತಾರೊಂದಿಗೆ ಜೆಡಿಎಸ್ ಕಾರ್ಯಕರ್ತರ ವಾಕ್ಸಮರ: ಏಳು ಮಂದಿ ವಿರುದ್ಧ ಕೊಲೆ ಯತ್ನ ಕೇಸ್
ಮೈಸೂರು

ಸಂಸದೆ ಸುಮಲತಾರೊಂದಿಗೆ ಜೆಡಿಎಸ್ ಕಾರ್ಯಕರ್ತರ ವಾಕ್ಸಮರ: ಏಳು ಮಂದಿ ವಿರುದ್ಧ ಕೊಲೆ ಯತ್ನ ಕೇಸ್

March 10, 2022

ಸಂಸದೆ ನೆರವಿಗೆ ಬಂದ ಕಾಂಗ್ರೆಸ್ ಕಾರ್ಯಕರ್ತರು-ಜೆಡಿಎಸ್ ಮುಖಂಡರ ನಡುವೆ ಮಾರಾಮಾರಿ ಅವಾಚ್ಯ ಶಬ್ದಗಳ ಬಳಕೆ; ಸುಮಲತಾಗೆ ರಕ್ಷಣೆ ನೀಡಿದ ಮಹಿಳೆಯರು
ಕೆ.ಆರ್.ನಗರ, ಮಾ.೯-ಕೆ.ಆರ್.ನಗರ ತಾಲೂಕು ಮುಂಜನಹಳ್ಳಿ ಗ್ರಾಮದಲ್ಲಿ ಸಂಸದೆ ಸುಮಲತಾ ಅವರು ಕಾಮಗಾರಿವೊಂದಕ್ಕೆ ಚಾಲನೆ ನೀಡಲು ತೆರಳಿದಾಗ ಅವರಿಗೆ ಜೆಡಿಎಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದು, ಈ ವೇಳೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಪರಿಸ್ಥಿತಿ ಕೈ-ಕೈ ಮಿಲಾಯಿಸುವ ಹಂತ ತಲು ಪಿದೆ. ಈ ವಿಚಾರವಾಗಿ ಸುಮಲತಾ ಅವರು ಸಾಲಿಗ್ರಾಮ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ೭ ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ವಿವರ: ಸಂಸದೆ ಸುಮಲತಾ ತಮ್ಮ ಸಂಸದರ ಅನುದಾನದಲ್ಲಿ ತಾಲೂ ಕಿನ ಚೌಕಹಳ್ಳಿ, ಬ್ಯಾಡರಹಳ್ಳಿ, ಹಂಪಾ ಪುರ ಮತ್ತು ಮುಂಜನಹಳ್ಳಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿದರು. ಸಂಜೆ ೫.೩೦ರ ಸುಮಾರಿನಲ್ಲಿ ಅವರು ಮುಂಜನಹಳ್ಳಿ ಗ್ರಾಮಕ್ಕೆ ಆಗಮಿಸಿದಾಗ ಅವರಿಗೆ ಅಡ್ಡಿಪಡಿಸಿದ ಜೆಡಿಎಸ್ ಕಾರ್ಯಕರ್ತರು ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ವರನ್ನು ಬಿಟ್ಟು ನೀವೊಬ್ಬರೇ ಗುದ್ದಲಿಪೂಜೆ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಕಾಂಗ್ರೆಸ್ ಮುಖಂಡ ಡಿ.ರವಿಶಂಕರ್ ಹಾಗೂ ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ ಸೇರಿದಂತೆ ಕೆಲವರು ಸುಮಲತಾ ಅವರ ಬೆಂಬಲಕ್ಕೆ ನಿಂತರು. ಈ ವೇಳೆ ಮಾತಿಗೆ ಮಾತು ಬೆಳೆದು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ವೇಳೆ ಗ್ರಾಮದ ಮಹಿಳೆಯರು ಸುಮಲತಾ ಅವರ ಬೆಂಬಲಕ್ಕೆ ನಿಂತು ಸುತ್ತುವರೆದರು. ಕೊನೆಗೂ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಹಿಳೆಯರ ಸಹಕಾರದಿಂದ ಸುಮಲತಾ ಗುದ್ದಲಿ ಪೂಜೆ ನೆರವೇರಿಸಿ ತೆರಳಿದರು. ಈ ವೇಳೆ ಮುಂಜನಹಳ್ಳಿ ಗ್ರಾಪಂ ಅಧ್ಯಕ್ಷ ಅನೀಫ್ ಗೌಡ, ನಮ್ಮ ಶಾಸಕ ಸಾ.ರಾ.ಮಹೇಶ್ ಅವರನ್ನು ಬಿಟ್ಟು ಗುದ್ದಲಿ ಪೂಜೆ ಮಾಡಲು ಇವರಿಗೆ ಏನು ಹಕ್ಕಿದೆ? ಈ ಕಾಮಗಾರಿಗೆ ಶಾಸಕರ ಅನುದಾನವೂ ಸೇರಿದೆ. ಸಂಸದೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಸುಮಲತಾ ವಿರುದ್ಧ ಧಿಕ್ಕಾರ ಕೂಗಿದರು.

ಕೊಲೆ ಯತ್ನ ಪ್ರಕರಣ ದಾಖಲು: ಈ ಸಂಬAಧ ಸುಮಲತಾ ಅವರು, ಸಾಲಿಗ್ರಾಮ ಠಾಣೆಗೆ ದೂರು ನೀಡಿದ್ದು, ಗುಳುವಿನ ಅತ್ತಿಕುಪ್ಪೆ ಗ್ರಾಮದ ಅನೀಶ್ ಕುಮಾರ್, ಸತೀಶ್, ಭೇರ್ಯದ ತನು, ಸುಗ್ಗನಹಳ್ಳಿಯ ಕುಮಾರ್, ಚಿಕ್ಕ ಭೇರ್ಯ ಗ್ರಾಮದ ಚೆಲುವರಾಜು, ಚಿದಂಬರ ನಾಯಕ, ಹಂಪಾಪುರ ಸುರೇಶ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ತಾವು ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಆರ್.ನಗರ ತಾಲೂಕು ಮುಂಜನಹಳ್ಳಿ ಗ್ರಾಮದಲ್ಲಿ ತನ್ನ ವಿವೇಚನಾ ಖೋಟಾದಡಿ ನೀರಾವರಿ ಇಲಾಖೆಯ ಟಿಎಸ್‌ಪಿ ಅನುದಾನದಡಿ ಕಾಮಗಾರಿಗೆ ಚಾಲನೆ ನೀಡಲು ಇಂದು ಸಂಜೆ ೫.೩೦ರಲ್ಲಿ ತೆರಳಿದಾಗ ಅನಾಮಧೇಯ ವ್ಯಕ್ತಿಗಳು ಅಕ್ರಮ ಗುಂಪು ಕಟ್ಟಿಕೊಂಡು ತಮ್ಮನ್ನು ರಸ್ತೆ ಮಧ್ಯೆ ಅಡ್ಡಗಟ್ಟಿ ಹಲ್ಲೆ ಮಾಡಲು ಪ್ರಯತ್ನಿಸಿದರು. ತನ್ನ ರಕ್ಷಣೆಗೆ ಬಂದ ನನ್ನ ಕಾರಿನ ಚಾಲಕ ನಂಜುAಡ ಅವರ ಬಟ್ಟೆ ಹರಿದು ಕುತ್ತಿಗೆಯನ್ನು ಬಲವಾಗಿ ಹಿಡಿದು ಉಸಿರುಗಟ್ಟಿಸಿ ಕೊಲ್ಲಲು ಯತ್ನಿಸಿದ್ದಾರೆ. ಆತನನ್ನು ಬಿಡಿಸಲು ಹೋದ ಆಪ್ತ ಸಹಾಯಕ ಅಲೋಕ್ ಮತ್ತು ನನ್ನ ಸಂಬAಧಿ ಮದನ್ ಮೇಲೂ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ಸ್ಥಳೀಯರು ಹಾಗೂ ತಮ್ಮ ಬೆಂಬಲಿಗರು ಬಂದು ನಮ್ಮನ್ನು ರಕ್ಷಿಸಿದ್ದಾರೆ. ಈ ವ್ಯಕ್ತಿಗಳು ಯಾರು ಎಂದು ವಿಚಾರಿಸಲಾಗಿ ಅವರುಗಳು ಸ್ಥಳೀಯರಲ್ಲದೇ ಬೇರೆ ಊರಿನಿಂದ ಬಂದು ರಾಜಕೀಯ ದ್ವೇಷದಿಂದ ಬೇರೆ ಯಾರೋ ನೀಡಿದ ಕುಮ್ಮಕ್ಕಿನಿಂದ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಬಂದು ನನ್ನ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನನ್ನು ಉದ್ದೇಶಿಸಿ `ನೀನು ಮತ್ತೆ ಈ ಕಡೆ ಬಂದರೆ ನಿನಗೆ ಬೇರೆ ಗತಿ ಕಾಣ ಸುತ್ತೇವೆ’ ಎಂದು ಬೆದರಿಕೆ ಹಾಕುವುದರ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಾನು ಜವಾಬ್ದಾರಿಯುತ ಸಂಸದೆಯಾಗಿದ್ದು, ಈ ವ್ಯಕ್ತಿಗಳು ನನ್ನ ಅಧಿಕೃತ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದರ ಜೊತೆಗೆ ದೈಹಿಕ ಹಲ್ಲೆಗೆ ಪ್ರಯತ್ನಿಸಿದ್ದು, ಮಹಿಳೆಯಾದ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಘನತೆಗೆ ಮತ್ತು ಸ್ಥಾನಕ್ಕೆ ಅಪಚಾರವೆಸಗಿದ್ದಾರೆ. ನನ್ನ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವ್ಯಕ್ತಿಗಳು ಹಾಗೂ ಇವರಿಗೆ ಕುಮ್ಮಕ್ಕು ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಸುಮಲತಾ ತಮ್ಮ ದೂರಿನಲ್ಲಿ ಕೋರಿದ್ದಾರೆ. ಸಾಲಿಗ್ರಾಮ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ್ ಅವರು ೭ ಮಂದಿ ಶಾಸಕ ಸಾ.ರಾ.ಮಹೇಶ್ ಬೆಂಬಲಿಗರು ಹಾಗೂ ಇತರರಿಂದ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Translate »