ಆಭರಣ, ರಾಡೋ ವಾಚ್ ಸುಲಿಗೆ
ಮೈಸೂರು

ಆಭರಣ, ರಾಡೋ ವಾಚ್ ಸುಲಿಗೆ

January 31, 2019

ಮೈಸೂರು: ಪೊಲೀಸರ ಸೋಗಿನಲ್ಲಿ ಅಪರಿಚಿತರಿಬ್ಬರು, ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು ಅವರ 35 ಗ್ರಾಂ ಚಿನ್ನಾಭರಣ ಹಾಗೂ ಬೆಲೆ ಬಾಳುವ ರಾಡೋ ವಾಚ್ ಸುಲಿಗೆ ಮಾಡಿದ ಘಟನೆ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಬಳಿ ರಾಮಾನುಜ ರಸ್ತೆ ಜಂಕ್ಷನ್‍ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.

ನಂಜನಗೂಡಿನ ಗೋಪಾಲ್, ಆಭರಣ ಹಾಗೂ ರಾಡೋ ಕೈಗಡಿಯಾರ ಕಳೆದು ಕೊಂಡವರು. ಲ್ಯಾಬೊರೇಟರಿಯಲ್ಲಿ ರಕ್ತ ಪರೀಕ್ಷೆ ಮಾಡಿಸಲೆಂದು ಬಂದಿದ್ದ ಗೋಪಾಲ್, ಅಗ್ರಹಾರ ಸರ್ಕಲ್‍ನಿಂದ ಜೆಎಸ್‍ಎಸ್ ಆಸ್ಪತ್ರೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬೈಕ್‍ನಲ್ಲಿ ಬಂದ ವ್ಯಕ್ತಿಗಳಿಬ್ಬರು `ನಾವು ಪೊಲೀಸ್ ಸ್ಕ್ವಾಡ್‍ನವರು. ಮೈಸೂರಲ್ಲಿ ಕಳ್ಳರ ಹಾವಳಿ ಇದೆ. ನೀವು ಹೀಗೆ ಆಭರಣ, ಕಾಸ್ಟ್ಲಿ ವಾಚ್ ಧರಿಸಿದ್ದರೆ ಕಿತ್ತುಕೊಳ್ಳುತ್ತಾರೆ. ಅದನ್ನು ಬಿಚ್ಚಿಕೊಡಿ ಕರ್ಚೀಫ್‍ನಲ್ಲಿ ಸುತ್ತಿಕೊಡುತ್ತೇವೆ’ ಎಂದರು. ಅವರ ಮಾತನ್ನು ನಂಬಿದ ಗೋಪಾಲ್, ವಾಚು, 35 ಗ್ರಾಂ ತೂಕದ ಕುತ್ತಿಗೆ ಚೈನು ಹಾಗೂ ಎರಡು ಉಂಗುರಗಳನ್ನು ಕಳಚಿ ಕೊಟ್ಟರು. ಅಪರಿಚಿತರು ಕರ್ಚೀಫ್‍ನಲ್ಲಿ ಸುತ್ತಿಕೊಟ್ಟಿ ದ್ದನ್ನು ಜೇಬಿಗಿರಿಸಿಕೊಂಡ ಗೋಪಾಲ್, ಸಮೀಪದ ಲಾಜಿಕ್ ಡಯೋಗ್ನೊಸ್ಟಿಕ್ ಸೆಂಟರ್‍ಗೆ ತೆರಳಿ ರಕ್ತದ ಸ್ಯಾಂಪಲ್ ಕೊಟ್ಟು ಹಣ ಕೊಡಲೆಂದು ನೋಡಿದಾಗ ಕರ್ಚೀಫ್‍ನಲ್ಲಿ ಹಳೇ ವಿಸಿಟಿಂಗ್ ಕಾರ್ಡ್‍ಗಳು, ಪೇಪರ್ ಉಂಡೆ ಇದ್ದುದು ತಿಳಿಯಿತು.

ತಾನು ಮೋಸ ಹೋಗಿರುವುದು ದೃಢಪಟ್ಟ ಗೋಪಾಲ್, ಕೆ.ಆರ್.ಠಾಣೆಗೆ ತೆರಳಿ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಇನ್ಸ್‍ಪೆಕ್ಟರ್ ಪ್ರಕಾಶ್, ಸ್ಥಳ ಮಹಜರು ನಡೆಸಿದರು. ವಿಷಯ ತಿಳಿಯುತ್ತಿದ್ದಂತೆಯೇ ನಗರ ಪೊಲೀಸ್ ಕಮಿ ಷ್ನರ್ ಕೆ.ಟಿ.ಬಾಲಕೃಷ್ಣ, ಎಸಿಪಿ ಧರ್ಮಪ್ಪ ಸಹ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು.

Translate »