ಬೆಂಗಳೂರು: ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ 1998ರ ಬ್ಯಾಚ್‍ನ ಗ್ರೂಪ್ `ಎ’ ಮತ್ತು `ಬಿ’ಯ 383 ಪ್ರೊಬೆಷನರಿ ಗೆಜೆಟೆಡ್ ಅಧಿಕಾರಿಗಳ ಆಯ್ಕೆಯ ಅಂತಿಮ ಹಾಗೂ ಪರಿಷ್ಕøತ ಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‍ಸಿ) ಬುಧವಾರ ಪ್ರಕಟಿಸಿದೆ.
ಜ.25ರಂದು ಹೊರಡಿಸಿರುವ ವಿಶೇಷ ಕರ್ನಾಟಕ ರಾಜ್ಯಪತ್ರದಲ್ಲಿನ ಇ(1)308/18-19/ಪಿಎಸ್‍ಸಿ ಅಧಿಸೂಚನೆಯಲ್ಲಿ ಈ ಪಟ್ಟಿ ಪ್ರಕಟವಾಗಿದೆ. ಇದರಿಂದಾಗಿ 19 ವರ್ಷಗಳಿಂದ ಗೊಂದಲದಲ್ಲೇ ಇದ್ದ, ಈಗಾಗಲೇ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದರೆ, ರಾಜ್ಯ ಹೈಕೋರ್ಟ್ 2016ರ ಜೂ.21ರಂದು ಹೊರಡಿ ಸಿದ ಆದೇಶದ ನಂ.3ನೇ ನಿರ್ದೇಶನವನ್ನು ಅನುಷ್ಠಾನಗೊಳಿಸಬೇಕಾದ ಸಂದರ್ಭ ಬಂದರೆ ಈ ಪಟ್ಟಿಯು ಬದಲಾವಣೆ ಅಥವಾ ಪರಿಷ್ಕರಣೆಗೆ ಒಳಗಾಗುವ ಸಾಧ್ಯತೆ ಇದೆ ಎಂದೂ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.