ಮೈಸೂರಿನ ಕಲ್ಪನಾ ಕುಟ್ಟಪ್ಪ ಭಾಗಿ
ಮೈಸೂರು

ಮೈಸೂರಿನ ಕಲ್ಪನಾ ಕುಟ್ಟಪ್ಪ ಭಾಗಿ

March 24, 2021

ಇಲ್ಲಿ ಆಯ್ಕೆಯಾದರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಅರ್ಹತೆ
ಮೈಸೂರು,ಮಾ.23(ಪಿಎಂ)- ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಹಲವು ಚಿನ್ನದ ಪದಕ ಗಳಿಸುವ ಮೂಲಕ ಉತ್ತಮ ಸಾಧನೆಗೈದ ಮೈಸೂರಿನ ಕಲ್ಪನಾ ಕುಟ್ಟಪ್ಪ ಏ.4ರಿಂದ 10ರವರೆಗೆ ಚಂಡೀಗಢದಲ್ಲಿ ನಡೆಯುವ ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾಳೆ.

ತನ್ನ 5ನೇ ವಯಸ್ಸಿನಲ್ಲಿಯೇ ಸ್ಕೇಟಿಂಗ್ ಅಭ್ಯಾಸ ಪ್ರಾರಂಭಿ ಸಿದ್ದ ಕಲ್ಪನಾ ಕುಟ್ಟಪ್ಪ, ಮೊದಲಿಗೆ ವಿಜಯನಗರದ ಮುನಿಸ್ವಾಮಿ ರೆಡ್ಡಿ ಎಂಬುವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದಳು. ಬೆಂಗಳೂರಿನ ಪ್ರತೀಕ್‍ರಾಜ್ ಅವರಲ್ಲಿ ಉನ್ನತ ತರಬೇತಿ ಪಡೆದ ಕಲ್ಪನಾ ಕುಟ್ಟಪ್ಪ, 2010ರಿಂದಲೂ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಕೇಟಿಂಗ್ ಸ್ಪರ್ಧೆಗಳಲ್ಲಿ ಹಲವು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾಳೆ.

ಗ್ಯಾರೇಜ್ ಮ್ಯೆಕಾನಿಕ್ ರವಿಕುಟ್ಟಪ್ಪ ಅವರ ಪುತ್ರಿಯಾದ ಈಕೆ, 2005ರಲ್ಲಿ ಜನಿಸಿದಳು. ಪೋಷಕರ ಪ್ರೋತ್ಸಾಹದಿಂದ ಸ್ಕೇಟಿಂಗ್‍ನಲ್ಲಿ ಉತ್ತಮ ಪ್ರತಿಭೆಯಾಗಿ ಹೊರಹೊಮ್ಮಿರುವ ಈ ಬಾಲಕಿ, ಪ್ರಸ್ತುತ ಮೈಸೂರಿನ ಲಯನ್ಸ್ ಸೇವಾನಿಕೇತನ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಚಂಡೀಗಢದಲ್ಲಿ ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಆಯ್ಕೆಯಾದರೆ, ಮುಂಬರುವ ಸೆಪ್ಟೆಂಬರ್‍ನಲ್ಲಿ ಅಮೆರಿಕದ ಕೊಲಂಬಿಯಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯುತ್ತಾಳೆ. ತನ್ನ ಸಾಧನೆಗೆ ಸಂಘ-ಸಂಸ್ಥೆಗಳು ನೆರವಾಗುವ ನಿರೀಕ್ಷೆಯಲ್ಲಿ ಈ ಸ್ಕೇಟಿಂಗ್ ಪಟು ಇದ್ದಾಳೆ.

Translate »