ಮೈಸೂರು, ಮಾ.23(ಎಂಕೆ)- ಮೈಸೂರಿನಲ್ಲಿ ರುವ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯು (ಆಯಿಷ್) ಬೃಹತ್ ಎಲ್‍ಇಡಿ ಪರದೆಯಲ್ಲಿ ತನ್ನೆಲ್ಲಾ ಕಾರ್ಯಚಟುವಟಿಕೆಗಳನ್ನು ಪ್ರಸಾರ ಮಾಡುವ ಮೂಲಕ ಸಾರ್ವಜನಿಕರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ.
ಮಾ.3ರ ವಿಶ್ವ ಶ್ರವಣ ದಿನದಂಗವಾಗಿ ಆಯಿಷ್ ಸಂಸ್ಥೆ ಆವರಣಕ್ಕೆ ಹೊಂದಿಕೊಂಡಂತಿರುವ ಶಂಕರ್ ನಾಗ್ ವೃತ್ತ(ಆಯಿಷ್ ವೃತ್ತ)ದ ಸಿಗ್ನಲ್ ಸಮೀಪ 6 ಲಕ್ಷ ರೂ. ವೆಚ್ಚದಲ್ಲಿ ಬೃಹತ್ ಎಲ್‍ಇಡಿ ಪರದೆ ಅಳವಡಿಸಿದ್ದು, ನಿತ್ಯ ಬೆಳಿಗ್ಗೆಯಿಂದ ರಾತ್ರಿ ವರೆಗೂ ವಾಕ್ ಮತ್ತು ಶ್ರವಣ ದೋಷ ಸಂಬಂ ಧಿತ ಮಾಹಿತಿ ಹಾಗೂ ಸಂಸ್ಥೆಯ ಕಾರ್ಯಚಟು ವಟಿಕೆಗಳ ಬಗ್ಗೆ ಮತ್ತು ವೈದ್ಯಕೀಯ ತರಬೇತಿ ಕುರಿತ ಮಾಹಿತಿಗಳಿರುವ 46 ವಿಡಿಯೋಗಳನ್ನು ಭಿತ್ತರಿಸುವ ಮೂಲಕ ವಿಶೇಷಚೇತನರಿಗೆ, ಸಾರ್ವ ಜನಿಕರಿಗೆ ಹತ್ತಿರವಾಗಿದೆ.
ವಾಕ್ ಮತ್ತು ಶ್ರವಣ ನ್ಯೂನತೆ ಇದ್ದರೂ ಚಿಕಿತ್ಸೆ ಪಡೆಯದವರನ್ನು ಸೆಳೆಯಲು ಹಾಗೂ ಸಂಸ್ಥೆಯ ಲ್ಲಿನ ಸೌಲಭ್ಯಗಳ ಕುರಿತು ಅರಿವು ಮೂಡಿಸಲು 40 ಮಂದಿ ಕನ್ನಡ, ಹಿಂದಿ ಭಾಷೆಯ ಖ್ಯಾತ ಚಿತ್ರ ನಟರು ಹಾಗೂ ಸ್ಥಳಿಯ ಜನಪ್ರತಿನಿಧಿಗಳಿಂದ ಜಾಗೃತಿ ಸಂದೇಶ ನೀಡಲಾಗುತ್ತಿದೆ.
ವಿಶೇಷ ಪ್ರಯತ್ನ: ಮೈಸೂರಿನಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಎಂಬುದಿದೆ ಎಂದು ಇಂದಿಗೂ ಸಾಕಷ್ಟು ಜನರಿಗೆ ಗೊತ್ತಿಲ್ಲ. ಕಿವಿ ನೋವು ಅಥವಾ ಕಿವುಡುತನ ಕಂಡು ಬಂದರೆ ಸಾವಿರಾರು ರೂ., ಖರ್ಚು ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೆ `ಆಯಿಷ್’ ಸಂಸ್ಥೆಯಲ್ಲಿ ಗುಣ ಮಟ್ಟದ ಸೇವೆ ಮತ್ತು ಸೌಲಭ್ಯವಿದ್ದರೂ ಸದುಪಯೋಗ ಪಡಿಸಿಕೊಳ್ಳುವವರು ಮಾತ್ರ ಕಡಿಮೆ. ಆದ್ದರಿಂದ ರಸ್ತೆಬದಿ ವ್ಯಾಪಾರಿಗಳು, ಪಾದಚಾರಿಗಳು, ವಾಹನ ಸವಾರರಿಗೆ ಕಾಣುವಂತೆ ಬೃಹತ್ ಎಲ್‍ಇಡಿ ಪರದೆ ಅಳವಡಿಸಲಾಗಿದೆ. ದಿನಕ್ಕೆ ಒಬ್ಬರು ಇದನ್ನು ಗಮನಿಸಿ ತಮ್ಮಲ್ಲಿ ನ್ಯೂನತೆ ಅರಿತು ಚಿಕಿತ್ಸೆ ಪಡೆಯಲು ಬಂದರೆ ಸಾಕು ವಿಶೇಷ ಪ್ರಯತ್ನಕ್ಕೆ ಫಲ ದೊರೆತಂ ತಾಗುತ್ತದೆ ಎಂದು `ಆಯಿಷ್’ ಸಂಸ್ಥೆ ನಿರ್ದೇಶಕಿ ಡಾ. ಎಂ.ಪುಷ್ಪಾವತಿ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.
ಆಯಿಷ್ ಸಂಸ್ಥೆಗೆ ಹೊಂದಿಕೊಂಡಂತಿರುವ ಶಂಕರ್‍ನಾಗ್ ವೃತ್ತ(ಆಯಿಷ್ ವೃತ್ತ)ದ ಸಿಗ್ನಲ್ ಸಮೀಪದಲ್ಲಿ ಎಲ್‍ಇಡಿ ಪರದೆ ಅಳವಡಿಸಿದ್ದು, ಸಿಗ್ನಲ್ ಇರುವುದರಿಂದ ನಿತ್ಯ ಸಾವಿರಾರು ವಾಹನ ಸವಾರರು, ಪಾದಚಾರಿಗಳು ಇದನ್ನು ಗಮನಿಸು ತ್ತಾರೆ. ವಾಕ್ ಮತ್ತು ಶ್ರವಣ ಸಂಬಂಧಿತ ಮಾಹಿತಿ, ಸಂಸ್ಥೆಯ ಕಾರ್ಯಕ್ರಮಗಳು ಹಾಗೂ ವೈದ್ಯಕೀಯ ಡಿಪ್ಲೊಮಾ ಕೋರ್ಸ್‍ಗಳ ಬಗೆಗೂ ಮಾಹಿತಿ ನೀಡುವುದರಿಂದ ವಿದ್ಯಾರ್ಥಿಗಳಿಗೂ ಅನು ಕೂಲವಾಗಲಿದೆ ಎಂದು ತಿಳಿಸಿದರು.
ಮಾ.3ರ ವಿಶ್ವ ಶ್ರವಣ ದಿನದಿಂದ ಚಾಲನೆ ನೀಡಲಾಗಿದ್ದು, ದಿನದ 12 ಗಂಟೆಗಳ ಕಾಲ ನಿರಂತರ ಪ್ರಸಾರವಾಗಲಿದ್ದು, ವಿದ್ಯುತ್ ಕಡಿತ ವಾದರೂ ಸಮಸ್ಯೆ ಎದುರಾಗದಂತೆ ವ್ಯವಸ್ಥೆ ಕಲ್ಪಿಸ ಲಾಗಿದೆ. ಸಾರ್ವಜನಿಕರು ಹಾಗೂ ವಿಶೇಷಚೇತ ನರ ಅನುಕೂಲ ಮತ್ತು ವಾಕ್ ಮತ್ತು ಶ್ರವಣ ಸಂಬಂಧಿತ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವ ಮಾಹಿತಿ ನೀಡುವ ಉದ್ದೇಶ ಇದಾಗಿದೆ ಎಂದರು.