ಕನ್ನಡ ಭೌತಿಕ ಸಂಗತಿಯಲ್ಲ, ಅದು ಬದುಕು: ಪ್ರೊ.ಕೃಷ್ಣೇಗೌಡ
ಮೈಸೂರು

ಕನ್ನಡ ಭೌತಿಕ ಸಂಗತಿಯಲ್ಲ, ಅದು ಬದುಕು: ಪ್ರೊ.ಕೃಷ್ಣೇಗೌಡ

December 1, 2021

ಮೈಸೂರು,ನ.30(ಎಸ್‍ಬಿಡಿ)- `ಕನ್ನಡ ವೆಂದರೆ ಬರಿ ನುಡಿಯಲ್ಲ ನಾವು, ನೀವು, ಅವರು’ ಎಂಬಂತೆ ಜನಮಾನಸದ ಎಲ್ಲಾ ದನಿಗಳನ್ನು ದಾಖಲು ಮಾಡುವ ಅಗತ್ಯ ವಿದೆ ಎಂದು ಪ್ರಸಿದ್ಧ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಆಶಯ ವ್ಯಕ್ತಪಡಿಸಿದರು.

ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ಸಭಾಂಗಣದಲ್ಲಿ ಶಾಸ್ತ್ರೀಯ ಕನ್ನಡ ಅತ್ಯು ನ್ನತ ಅಧ್ಯಯನ ಕೇಂದ್ರದ ವತಿಯಿಂದ ಏರ್ಪಡಿಸಲಾಗಿದ್ದ ಶಾಸ್ತ್ರೀಯ ಕನ್ನಡ ಮಾನ್ಯತಾ ದಿನಾಚರಣೆ ಹಾಗೂ 66ನೇ ಕನ್ನಡ ರಾಜ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಭಾಷೆ ಒಂದು ಸಂವಹನ ಮಾಧ್ಯಮ ಎನ್ನುವುದು ಪ್ರಾಥಮಿಕ ತಿಳಿವಳಿಕೆಯಷ್ಟೇ. ಕನ್ನಡ ಭೌತಿಕ ಸಂಗತಿಯಲ್ಲ, ಇದೊಂದು ಬದುಕು. ಸಾವಿರಾರು ವರ್ಷಗಳ ಪಯಣ ದೊಂದಿಗೆ ತಲೆಮಾರುಗಳ ಅರಿವನ್ನು ತುಂಬಿಕೊಂಡು ಬಂದಿದೆ. ಪುಸ್ತಕ, ಗ್ರಂಥ, ಓಲೆಗರಿಗಳ ಮೂಲಕವಷ್ಟೇ ಭಾಷೆ ಪಡೆ ಯಲು ಸಾಧ್ಯವಿಲ್ಲ. ವಿದ್ವತ್ತಿನ ಅಧ್ಯಯನದ ಜೊತೆಗೆ ಜನಮಾನಸದ ಎಲ್ಲಾ ದನಿಗಳೂ ದಾಖಲಾಗಬೇಕು. ಯಾವ ಸಂದರ್ಭದಲ್ಲಿ, ಯಾವ ದನಿ, ಯಾವ ಅರ್ಥ ನೀಡುತ್ತದೆ? ಎನ್ನುವುದನ್ನು ದಾಖಲು ಮಾಡಬೇಕು. ಈ ನಿಟ್ಟಿನಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯ ಯನ ಕೇಂದ್ರ ಮುಂದಾಗಬೇಕು ಎಂದರು.

ವೃತ್ತಿಯಲ್ಲಿ ಕನ್ನಡ: ಹಳ್ಳಿಯಲ್ಲಿ ರೈತ, ಸೊಪ್ಪು-ತರಕಾರಿ ಮಾರುವವರು ಅವರ ಬದುಕಿಗೆ ಬೇಕಾದಷ್ಟು ಕನ್ನಡ ಕಟ್ಟಿಕೊಂಡಿ ದ್ದಾರೆ. ಅವರ ಭಾಷೆ ಸ್ಪಷ್ಟತೆಯೊಂದಿಗೆ ಸಾಕಷ್ಟು ವಿಸ್ತಾರವಾಗಿದೆ. ಇವರಂತೆ ಶಿಕ್ಷಣ ತಜ್ಞರು, ವೃತ್ತಿವಂತರು ತಮ್ಮ ವೃತ್ತಿಯಲ್ಲಿ ಕನ್ನಡ ಬೆಳೆಸಿದ್ದರೆ ಪ್ರಸ್ತುತ ಪ್ರಚುರಪಡಿ ಸುವ ಸ್ಥಿತಿ ಬರುತ್ತಿರಲಿಲ್ಲ. ಎಲ್ಲಾ ವಸ್ತುಗಳು, ಬಣ್ಣ ಹಾಗೂ ರುಚಿಗೆ ಹೆಸರಿಡಲು ಸಾಧ್ಯ ವಾಗಿಲ್ಲ. ಭೌತಿಕ ವಸ್ತುಗಳಿಗೆ ಹೆಸರಿಡಲಾಗದ ನಮ್ಮ ಭಾಷಾ ಪ್ರಪಂಚ ತುಂಬಾ ಚಿಕ್ಕದು, ಕೇವಲ 200 ಪದಗಳ ಕಲಿತು ಅದರಲ್ಲೇ ಆಟ ವಾಡುತ್ತೇವೆ ಎಂದು ಹಾಸ್ಯ ಧಾಟಿಯಲ್ಲೇ ವಾಸ್ತವತೆಯನ್ನು ಮನದಟ್ಟು ಮಾಡಿದರು.

ಬೇಂದ್ರೆ `ತತ್ವ’: ಕರ್ನಾಟಕ ಏಕೀಕರಣ ಹಿನ್ನೆಲೆಯಲ್ಲಿ 1956ರ ನವೆಂಬರ್ 1ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ `ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು…’ ಎಂದು ಹಾಡಿದ ಕಾಳಿಂಗ ರಾಯರು, ಕೊನೆಯಲ್ಲಿ `ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು’ ಎನ್ನುವ ಮೂಲಕ ಚಮತ್ಕಾರ ಮಾಡಿದರು. ನೆರೆದಿ ದ್ದವರು ರೋಮಾಂಚನಗೊಂಡು ಚಪ್ಪಾಳೆ ಮಳೆಗರೆದರು. ಈ ಬಗ್ಗೆ ಪ್ರತಿಕ್ರಿಯಿಸಿದ ದ.ರಾ.ಬೇಂದ್ರೆ ಅವರು `ಯಾವುದೇ ಪರಿಕಲ್ಪನೆಗೆ ಆದಿ-ಅಂತ್ಯ ಎಂಬುದಿಲ್ಲ, ನಾಡು ಕಟ್ಟುವುದು ನಿಲ್ಲುವ ಪ್ರಕ್ರಿಯೆಯಲ್ಲ. ಹಾಗಾಗಿ ಉದಯವಾಗಲಿ ಎಂಬ ಘೋಷ ನಿರಂತರವಾಗಿರಬೇಕು’ ಎನ್ನುವ ತತ್ವ ಸಾರಿದರೆಂದು ತಿಳಿಸಿದರು.

ಇದೇ ವೇಳೆ ಕಾರ್ಯಕ್ರಮ ಪ್ರಯುಕ್ತ ಸಂಸ್ಥೆಯ ಸಿಬ್ಬಂದಿ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ನಡೆಸಿದ ಭಾಷೆಗೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸ ಲಾಯಿತು. ಕೇಂದ್ರದ ಸಹಸಂಶೋಧಕರು ಗಾಯನ, ನೃತ್ಯ ಕಾರ್ಯಕ್ರಮ ನಡೆಸಿ ಕೊಟ್ಟರು. ಭಾರತೀಯ ಭಾಷಾ ಸಂಸ್ಥಾ ನದ ಉಪನಿರ್ದೇಶಕಿ ಡಾ.ಉಮಾರಾಣಿ ಪಪ್ಪುಸ್ವಾಮಿ, ಶಾಸ್ತ್ರೀಯ ಭಾಷೆಗಳು ವಿಭಾ ಗದ ಮುಖ್ಯಸ್ಥ ಪ್ರೊ.ಸಿ.ವಿ.ಶಿವರಾಮಕೃಷ್ಣ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ಶಿವರಾಮಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Translate »