ದೆಹಲಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಪ್ರದರ್ಶಿತ ಅದ್ಭುತ ‘ಕರ್ನಾಟಕ  ಕರಕುಶಲಗಳ ಬೀಡು’ ಸ್ತಬ್ಧಚಿತ್ರ ಕಲಾವಿದ ಮೈಸೂರಿನ ಅಕ್ಮಲ್ ಪಾಷಾ
News

ದೆಹಲಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಪ್ರದರ್ಶಿತ ಅದ್ಭುತ ‘ಕರ್ನಾಟಕ ಕರಕುಶಲಗಳ ಬೀಡು’ ಸ್ತಬ್ಧಚಿತ್ರ ಕಲಾವಿದ ಮೈಸೂರಿನ ಅಕ್ಮಲ್ ಪಾಷಾ

January 30, 2022

ಈ ಬಾರಿಯ ನವದೆಹಲಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ರಾಜ್ಯದ ಪರವಾಗಿ ಪ್ರದರ್ಶನಗೊಂಡ ‘ಕರ್ನಾಟಕ ಕರಕುಶಲಗಳ ಬೀಡು’ ಸ್ತಬ್ಧಚಿತ್ರದ ಕಲಾವಿದ ಅಕ್ಮಲ್ ಪಾಷಾ ನಮ್ಮ ಮೈಸೂರಿನವರು.

ಮೈಸೂರಿನ ರಾಜೀವ್‍ನಗರದ ನಿವಾಸಿಯಾಗಿರುವ ಅಕ್ಮಲ್ ಪಾಷಾ, ಮೈಸೂರಿನ ಬಿಇಎಂಎಲ್ ಸಂಸ್ಥೆಯ ನಿವೃತ್ತ ನೌಕರ. ಇವರು ಕಲಾ ನಿರ್ದೇಶಕ ಶಶಿಧರ ಅಡಪ ಅವರ ಮಾರ್ಗದರ್ಶನದಲ್ಲಿ ಹಲವಾರು ವರ್ಷ ಗಳಿಂದ ನಾನಾ ರೀತಿಯ ಸ್ತಬ್ಧಚಿತ್ರ ರೂಪಿಸುವ ಕೌಶಲ್ಯ ವನ್ನು ಬೆಳೆಸಿಕೊಂಡಿದ್ದಾರೆ. ಅವರು ಕಳೆದ 15 ವರ್ಷ ಗಳಿಂದ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋ ತ್ಸವ ಪರೇಡ್‍ಗೆ ಸುಂದರ ಸ್ತಬ್ಧಚಿತ್ರಗಳನ್ನು ನಿರ್ಮಿಸು ತ್ತಿದ್ದಾರೆ ಎಂಬುದು ವಿಶೇಷ. ಶಶಿಧರ ಅಡಪ ಅವರು ಸ್ತಬ್ಧಚಿತ್ರಕ್ಕೆ ನೀಲನಕ್ಷೆ ತಯಾರಿಸಿಕೊಟ್ಟರೆ, ಅವರ ಮಾರ್ಗದರ್ಶನದಲ್ಲೇ ಅಕ್ಮಲ್ ಪಾಷಾ ಸುಮಾರು 45 ಮಂದಿಯ ತಂಡವನ್ನು ಕಟ್ಟಿಕೊಂಡು ಆಕರ್ಷಕ ವಾದ ಸ್ತಬ್ಧಚಿತ್ರವನ್ನು ರೂಪಿಸುತ್ತಾ ಬಂದಿದ್ದಾರೆ.

ಹಾಸನದಲ್ಲಿ ಐಟಿಐ ಮುಗಿಸಿದ ಅಕ್ಮಲ್ ಪಾಷಾ ಅವರಿಗೆ ಕೆಜಿಎಫ್‍ನ ಚಿನ್ನದ ಗಣಿಯಲ್ಲಿ ಉದ್ಯೋಗ ದೊರೆತಿತ್ತು. ತನ ಉದ್ಯೋಗದ ಜೊತೆಗೆ ಅಲ್ಲಿ ‘ಕನ್ನಡ ಮಿತ್ರರ ನಾಟಕ ಸಂಘ’ದೊಂದಿಗೆ ಸೇರಿ ನಾಟಕ ಅಭಿನಯ ಹಾಗೂ ಬ್ಯಾಕ್ ಸ್ಟೇಜ್ ವರ್ಕ್‍ನಲ್ಲಿ ತೊಡಗಿಸಿಕೊಂಡು ಕಲೆಯನ್ನು ಮೈಗೂಡಿಸಿಕೊಂಡಿದ್ದರು. ನಂತರ ಅವರಿಗೆ ತವರೂರು ಮೈಸೂರಿನ ಬಿಎಂಇಎಲ್ ಸಂಸ್ಥೆಗೆ ವರ್ಗಾವಣೆಯಾಗಿದ್ದು, ಇಲ್ಲಿ ಅವರು ಕೆಲಸದ ಜೊತೆಗೆ ನಾಟಕ ಹಾಗೂ ಕಲಾ ನಿರ್ದೇಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

1991ರಿಂದ ಮೈಸೂರು ದಸರಾ ಜಂಬೂಸವಾರಿ ಯಲ್ಲ್ಲಿ ಸ್ತಬ್ಧಚಿತ್ರ ಹಾಗೂ ವಸ್ತು ಪ್ರದರ್ಶನದ ಆವರಣ ದಲ್ಲಿ ಸರ್ಕಾರಿ ಸ್ವಾಮ್ಯದ ಮಳಿಗೆ ಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. 10 ವರ್ಷ ವೈಯಕ್ತಿಕವಾಗಿ ಈ ಕಾರ್ಯ ನಡೆಸುತ್ತಿದ್ದ ಅವರು, ನಂತರ ಶಶಿ ಧರ್ ಅಡಪ ಅವರ ಒಡನಾಟ ದೊಂದಿಗೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕಲಾ ನಿರ್ದೇಶನ ಮಾಡಲು ಆರಂಭಿಸಿದರು. ಇವರ ಈ ಸೇವೆ ಗುರುತಿಸಿದ ಕರ್ನಾಟಕ ನಾಟಕ ಅಕಾಡೆಮಿಯು 2003ರ ಸಾಲಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ. ರಂಗ ಚೇತನ ಸಂಸ್ಥೆಯ 2015ನೇ ಸಾಲಿನ ‘ಸಿ.ಜಿ.ಕೆ.’ ಪ್ರಶಸ್ತಿಗೂ ಭಾಜರಾಗಿ ರುವ ಇವರನ್ನು ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿವೆ.

‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅಕ್ಮಲ್ ಪಾಷಾ, 2000 ಇಸವಿಯಲ್ಲಿ ಶಶಿಧರ್ ಅಡಪ ಅವರ ಮಾರ್ಗದರ್ಶನದಲ್ಲಿ ಗಣರಾಜ್ಯೋತ್ಸವದಲ್ಲಿ ಸ್ತಬ್ಧಚಿತ್ರ ಮೊದಲ ಬಾರಿ ದೆಹಲಿಗೆ ಭೇಟಿ ನೀಡಿದ್ದೆ. ಸತತ ಎರಡು ವರ್ಷ ನಮ್ಮ ತಂಡ ಸ್ತಬ್ಧಚಿತ್ರ ನಿರ್ಮಾಣ ಮಾಡಿತ್ತು. ನಂತರÀ ಐದು ವರ್ಷ ಬೇರೆ ತಂಡದವರು ಸ್ತಬ್ಧಚಿತ್ರ ನಿರ್ಮಾಣ ಮಾಡಿದರು. ತದನಂತರದ 13 ವರ್ಷಗಳು ಸುದೀರ್ಘ ಕಾಲ ಶಶಿಧರ್ ಅಡಪ ಮಾರ್ಗದರ್ಶನದಲ್ಲಿ ನವದೆಹಲಿ ಗಣರಾಜ್ಯೋತ್ಸವದ ಪರೇಡ್‍ಗೆ ಸ್ತಬ್ಧಚಿತ್ರಗಳ ನಿರ್ಮಾಣ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.

ಒಂದು ತಿಂಗಳು ದೆಹಲಿ ನೆಲೆ: ಗಣರಾಜ್ಯೋತ್ಸವಕ್ಕೆ ಒಂದು ತಿಂಗಳು ಮುನ್ನವೇ ಅಂದರೆ ಡಿಸೆಂಬರ್ 23ರಂದು ಮೈಸೂರಿನಿಂದ ಪ್ರಯಾಣ ಆರಂಭಿಸಿ, ದೆಹಲಿಯ ರಕ್ಷಣಾ ಕ್ಯಾಂಪ್ ತಲುಪಿದೆವು. ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೆ ಒಂದು ತಿಂಗಳ ಅವಧಿಯಲ್ಲಿ 45 ಮಂದಿ ಒಳಗೊಂಡ ನಮ್ಮ ತಂಡ ಸ್ತಬ್ಧಚಿತ್ರ ನಿರ್ಮಾಣ ಮಾಡಿತು. ಈ ಕೆಲಸಕ್ಕೆ ಬೆಂಗ ಳೂರು ಮತ್ತು ರಾಜಸ್ತಾನದ ಎಲೆಕ್ಟ್ರಿಷಿಯನ್ ಹಾಗೂ ಮರ ಗೆಲಸದವರ ಸಹಾಯ ಪಡೆಯಲಾಯಿತು. ಈ ಬಾರಿಯ ಸ್ತಬ್ಧಚಿತ್ರ ನಿರ್ಮಾಣಕ್ಕೆ ಫೈಬರ್, ಪೇಪರ್ ಮೆಷ್, ಪ್ಲೇವುಡ್ ಹಾಗೂ ವಿಶೇಷವಾಗಿ ಮಂಗಳೂರಿನಿಂದ ತಂದಿದ್ದ ತಡಿಕೆಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ನಮ್ಮ ಸಹಾಯಕ್ಕೆ ರಾಜ್ಯದಿಂದ ವಾರ್ತಾ ಇಲಾಖೆಯ ಒಬ್ಬ ಅಧಿಕಾರಿ ಸಹ ಬಂದಿ ದ್ದರು. ನಮ್ಮ ತಂಡಕ್ಕೆ ಕೇಂದ್ರ ಸರ್ಕಾರದಿಂದ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಡಲಾಗಿತ್ತು ಎಂದರು.

ಭದ್ರತೆಗೆ ಮಹತ್ವ: ಮೈಸೂರಿನಿಂದ ದೆಹಲಿಯ ಕ್ಯಾಂಪ್ ತಲುಪಿದ ತಕ್ಷಣ ಅಲ್ಲಿನ ಪೊಲೀಸರು ಸಂಪೂರ್ಣ ಭದ್ರತಾ ತಪಾಸಣೆ ಮಾಡಿದರು. ಅಲ್ಲಿಂದ ಕ್ಯಾಂಪ್‍ನ ಒಳಗೆ ತೆರಳಿದಾಗ ಅಲ್ಲಿನ ರಕ್ಷಣಾ ಪಡೆಯವರು ಎರಡು ಬಾರಿ ತಪಾಸಣೆ ನಡೆಸಿದರು. ಕ್ಯಾಂಪ್‍ನಿಂದ ಹೊರಗೆ ಬರುವಾಗ ಪ್ರತಿ ಸಲ ತಪಾಸಣೆ ಮಾಡುತ್ತಾರೆ. ಈ ಬಾರಿ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ ದಾಖಲಾತಿ ಹಾಗೂ ಎರಡು ಡೋಸ್ ಕೊರೊನಾ ಲಸಿಕೆಯ ಪ್ರಮಾಣ ಪತ್ರವನ್ನು ಸಹ ತಪಾ ಸಣೆ ನಡೆಸಿದರು. ಅಂತಿಮವಾಗಿ ಗಣರಾಜ್ಯೋತ್ಸವ ಪರೇಡ್ ದಿನ ಯಾರೂ ಮೊಬೈಲ್ ತೆಗೆದುಕೊಂಡು ಹೋಗು ವಂತಿರಲಿಲ್ಲ ಎಂದು ತಮ್ಮ ಅನುಭವ ಹಂಚಿಕೊಂಡರು.

ಪ್ರಶಸ್ತಿ ನಿರೀಕ್ಷೆಯಲ್ಲಿದ್ದೇವೆ : ಈ ಬಾರಿಯ ಕರ್ನಾಟಕ ರಾಜ್ಯದ ಸ್ತಬ್ಧಚಿತ್ರ ಅನೇಕರ ಪ್ರಶಂಸೆಗೆ ಪಾತ್ರವಾಗಿದೆ. ಹಲವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜ.31ರವರೆಗೂ ಆನ್‍ಲೈನ್ ಓಟಿಂಗ್ ನಡೆಯಲಿದ್ದು, ಪ್ರಶಸ್ತಿ ನಿರೀಕ್ಷೆ ಇದೆ ಎಂದು ಕಲಾವಿದ ಅಕ್ಮಲ್ ಪಾಷಾ ವಿಶ್ವಾಸ ವ್ಯಕ್ತಪಡಿಸಿದರು.

Translate »