ಮನೆಗಳ ಸುತ್ತ ನಿಂತಿರುವ ಕೊಳಚೆ ನೀರು ತೆರವುಗೊಳಿಸಲು  ಮುಡಾ ಇಂಜಿನಿಯರ್‍ಗಳಿಂದ ಸ್ಥಳ ಪರಿಶೀಲನೆ
ಮೈಸೂರು

ಮನೆಗಳ ಸುತ್ತ ನಿಂತಿರುವ ಕೊಳಚೆ ನೀರು ತೆರವುಗೊಳಿಸಲು ಮುಡಾ ಇಂಜಿನಿಯರ್‍ಗಳಿಂದ ಸ್ಥಳ ಪರಿಶೀಲನೆ

January 30, 2022

ಮೈಸೂರು, ಜ.29(ಎಂಕೆ)- ಮೈಸೂರಿನ ವಿಜಯನಗರ 4ನೇ ಹಂತದ 1ನೇ ಘಟ್ಟದಲ್ಲಿರುವ ಮನೆಗಳ ಸುತ್ತಲು ಕಳೆದ ಮೂರು ತಿಂಗಳಿಂದ ನಿಂತಿರುವ ಯುಜಿಡಿ ಕೊಳಚೆ ನೀರನ್ನು ತೆರವುಗೊಳಿಸಲು ಮುಡಾ ಇಂಜಿನಿಯರ್‍ಗಳು ಶನಿವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಮನೆಗಳ ಸುತ್ತಲು ಯುಜಿಡಿ ಕೊಳಚೆ ನೀರು ನಿಂತು ಕೆರೆ ಯಂತಾಗಿದ್ದು, ದುರ್ವಾಸನೆಗೆ ನಿವಾಸಿಗಳು ಪರದಾಡುತ್ತಿರುವ ಕುರಿತು ಜ.28ರ ‘ಮೈಸೂರು ಮಿತ್ರ’ ಸಂಚಿಕೆಯಲ್ಲಿ ‘ಪ್ರತಿಷ್ಠಿತ ಬಡಾವಣೆಯಲ್ಲೊಂದು ಕೊಳಚೆ ನೀರಿನ ಕೆರೆ ನಿರ್ಮಾಣ, ಹಾವು, ಚೇಳುಗಳ ಕಾಟ, ನಿವಾಸಿಗಳ ನರಳಾಟ’ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಮುಡಾ ಎಕ್ಸಿಕ್ಯೂಟಿವ್ ಇಂಜಿನಿ ಯರ್ ಸುನೀಲ್, ಅಸಿಸ್ಟೆಂಟ್ ಇಂಜಿನಿಯರ್ ನಂದೀಶ್ ಸ್ಥಳಕ್ಕೆ ಭೇಟಿ ನೀಡಿ, ನಿಂತಿರುವ ಯುಜಿಡಿ ಕೊಳಚೆ ನೀರನ್ನು 7ರಿಂದ 15 ದಿನಗಳೊಳಗೆ ತೆರವು ಮಾಡುವುದಾಗಿ ಭರವಸೆ ನೀಡಿದ್ದಾರೆ.

ಮೊದಲಿದ್ದ ಯುಜಿಡಿ ಪೈಪ್‍ಲೈನ್ ಹಾಳಾಗಿದ್ದರಿಂದ ಕೊಳಚೆ ನೀರು ಮನೆಗಳ ಸುತ್ತಲು ನಿಂತಿದೆ. ಈಗಾಗಲೇ ಹೊಸದಾಗಿ ಯುಜಿಡಿ ಪೈಪ್‍ಲೈನ್ ಕಾಮಗಾರಿ ಮಾಡಲಾಗಿದ್ದು, ಬೇರೆ ಎಲ್ಲಿಲ್ಲಿ ಕೊಳಚೆ ನೀರು ಹರಿದು ಬರುತ್ತಿದೆ ಎಂಬುದನ್ನು ಪರಿಶೀಲನೆ ಮಾಡಿದ್ದೇವೆ. ಒಂದು ವಾರ ಅಥವಾ ಹದಿನೈದು ದಿನಗಳಲ್ಲಿ ಸಮಸ್ಯೆ ಪರಿಹರಿಸಲಾಗುವುದು ಎಂದು ಮುಡಾ ಅಸಿಸ್ಟೆಂಟ್ ಇಂಜಿನಿಯರ್ ನಂದೀಶ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಇನ್ನೂ 15 ದಿನ ನರಳಾಡಬೇಕೆ?: ಅಧಿಕಾರಿಗಳು ಬಂದು ನೋಡಿ ಮುಂದಿನ 15 ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಮೂರು ತಿಂಗಳಿಂದ ದುರ್ವಾಸನೆಗೆ ನರಳಾಡಿದ್ದೇವೆ. ಇನ್ನೂ 15 ದಿನಗಳು ನರಳಾಡಬೇಕೆ?. ಮನೆಗಳ ಗೋಡೆಗಳು ಶಿಥಿಲಗೊಳ್ಳುತ್ತಿದ್ದು, ಯಾವಾಗ ಏನಾಗುತ್ತದೋ ಎಂಬ ಆತಂಕ ಎದುರಾಗಿದೆ ಎಂದು ಸ್ಥಳೀಯ ನಿವಾಸಿಗಳಾದ ಡಾ.ರಾಘವೇಂದ್ರ, ಚಿಕ್ಕಮಹದೇವಯ್ಯ, ಹರೀಶ್, ಮಂಜುನಾಥ್ ಮತ್ತಿತರರು ಬೇಸರ ವ್ಯಕ್ತಪಡಿಸಿದರು.

Translate »