ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿಗೆ 500 ಕೋಟಿ
ಮೈಸೂರು

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿಗೆ 500 ಕೋಟಿ

March 6, 2020

ಬೆಂಗಳೂರು,ಮಾ.5(ಕೆಎಂಶಿ)-ರಾಜ್ಯ ಪ್ರವಾಸೋದ್ಯಮದ ಸರ್ವತೋಮುಖ ಅಭಿವೃದ್ಧಿಗೆ 500 ಕೋಟಿ ರೂ.ಗಳ ಯೋಜನೆ ರೂಪಿಸಲಾಗುತ್ತಿದ್ದು, ದೇಶ-ವಿದೇಶಗಳ ಪ್ರವಾಸಿಗ ರನ್ನು ಆಕರ್ಷಿಸುವ ಸಲುವಾಗಿ ಜಾಹೀರಾತು ಮತ್ತು ಇತರೆ ಚಟುವಟಿಕೆಗಳಿಗೆ 100 ಕೋಟಿ ಖರ್ಚು ಮಾಡಲಾಗು ವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಭಾರತದ ವಿವಿಧ ಪುಣ್ಯಕ್ಷೇತ್ರಗಳಿಗೆ ರಾಜ್ಯದಿಂದ ಹೋಗುವ ಭಕ್ತರಿಗೆ ಸಹಾಯಕವಾಗುವ ದೃಷ್ಟಿಯಿಂದ ಅಲ್ಲಲ್ಲಿ ವಸತಿ ಗೃಹಗಳನ್ನು ನಡೆಸುತ್ತಿದ್ದು, ಶ್ರೀ ಕ್ಷೇತ್ರ ಮಂತ್ರಾಲಯ, ತುಳಜಾ ಪುರ, ಪಂಡರಾಪುರ, ವಾರಣಾಸಿ, ಉಜ್ಜಯಿನಿ, ಶ್ರೀಶೈಲ ದೇವಾಲಯಗಳ ಅತಿಥಿಗೃಹಗಳ ಮೂಲ ಸೌಲಭ್ಯಗಳ ಅಭಿ ವೃದ್ಧಿಗೆ 25 ಕೋಟಿ ರೂ. ಅನುದಾನ ನೀಡಲಾಗಿದೆ. 60 ವರ್ಷ ಮೀರಿದ ಬಡತನರೇಖೆಗಿಂತ ಕೆಳಗಿರುವವರು ದೇಶದ ಪ್ರಸಿದ್ಧ ತೀರ್ಥಕ್ಷೇತ್ರ ದರ್ಶಿಸಲು ಅನುಕೂಲವಾಗುವಂತೆ ಜೀವನ ಚೈತ್ರ ಯಾತ್ರೆ ಜಾರಿಗೆ ತರಲಾಗುತ್ತಿದ್ದು, ಅದಕ್ಕಾಗಿ 20 ಕೋಟಿ ಅನುದಾನ ನಿಗದಿಪಡಿಸಲಾಗುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ರೈಲ್ವೆ ಇಲಾಖೆ ಸಹಯೋಗದಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದರು. ರಾಜ್ಯದಲ್ಲಿರುವ 25ಸಾವಿರಕ್ಕೂ ಹೆಚ್ಚು ಐತಿಹಾಸಿಕ ಮಹತ್ವದ ದೇವಸ್ಥಾನಗಳು, ಪ್ರಾಚೀನ ಸ್ಥಳಗಳು, ಸ್ಮಾರಕಗಳನ್ನು ಹಂತಹಂತವಾಗಿ ಪುನರುಜ್ಜೀವನಗೊಳಿಸಿ ಸಂರಕ್ಷಿಸಲು ಸಂರಕ್ಷಣಾ ಯೋಜನೆ ಪ್ರಕಟಿಸಲಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಪ್ರವಾಸೋದ್ಯಮ ನೀತಿ ಈ ತಿಂಗಳಿಗೆ ಅಂತ್ಯಗೊಳ್ಳುತ್ತಿದ್ದು, 2020-21ನೇ ಸಾಲಿನಲ್ಲಿ ಹೊಸ ನೀತಿಯನ್ನು ರೂಪಿಸಲಾಗುತ್ತದೆ. ಆಂಜನೇಯನ ಜನ್ಮಸ್ಥಳವೆಂದೇ ಪ್ರಸಿದ್ಧವಾಗಿರುವ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇವಸ್ಥಾನ ಸಮಗ್ರ ಅಭಿವೃದ್ಧಿಗೆ 20 ಕೋಟಿ ಅನುದಾನ ಘೋಷಿಸಲಾಗಿದೆ. ಚಿತ್ರದುರ್ಗದ ವೀರ ಮದಕರಿ ನಾಯಕ ಹಾಗೂ ಒನಕೆ ಓಬವ್ವ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕ್ಷೇತ್ರವೂ ಆಗಿರುವ ಐತಿಹಾಸಿಕ ಪ್ರವಾಸಿ ತಾಣ ಬಾದಾಮಿಯ ಸಮಗ್ರ ಅಭಿವೃದ್ಧಿಗೆ 25 ಕೋಟಿ ಅನುದಾನ ಘೋಷಿಸಲಾಗಿದೆ ಎಂದರು. ಯುವಕರ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲು ಜಾಗತಿಕ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ತವರು ಜಿಲ್ಲೆ ಶಿವಮೊಗ್ಗದ ಜೋಗ ಜಲಪಾತ ಮತ್ತು ಇತರ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮೂಲ ಸೌಲಭ್ಯಗಳನ್ನು ಒದಗಿಸಲು ಟೂರಿಸಂ ಸಕ್ರ್ಯೂಟ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಕಟಿಸಿದ್ದಾರೆ.

Translate »