ಬೆಂಗಳೂರು,ಮಾ.5(ಕೆಎಂಶಿ)- ಕೇಂದ್ರ ಸರ್ಕಾರದಿಂದ ಆಗಿರುವ ಭಾರಿ ಅನುದಾನ ಕಡಿತ ಮತ್ತು ಆರ್ಥಿಕ ಸಂಕಷ್ಟದ ನಡುವೆಯು ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ, 2020-21ನೇ ಸಾಲಿನ ಮುಂಗಡ ಪತ್ರದಲ್ಲಿ ಯಾವುದೇ ಹೊಸ ಯೋಜನೆ ಪ್ರಕಟಿಸದೇ, ಸಂಪನ್ಮೂಲ ಕ್ರೋಢೀಕರಣಕ್ಕೆ ಪೆಟ್ರೋಲ್, ಡೀಸೆಲ್, ಮದ್ಯ ಹಾಗೂ ವಾಣಿಜ್ಯ ಸಾರಿಗೆ ಮೇಲೆ ತೆರಿಗೆ ಭಾರ ಹಾಕಿ ದ್ದಾರೆ. ಉಳಿದಂತೆ ಜನಸಾಮಾನ್ಯರ ಮೇಲೆ ಯಾವುದೇ ತೆರಿಗೆಯ ಭಾರವಿಲ್ಲದಿದ್ದರೂ, ಇರುವ ಸಂಪನ್ಮೂಲದಲ್ಲೇ ಭಾಗ್ಯಲಕ್ಷ್ಮೀ, ಸೈಕಲ್ ಸೇರಿದಂತೆ ಕೆಲವು ಜನಪ್ರಿಯ ಯೋಜನೆಗಳನ್ನು ಮುಂದುವರೆಸಿದ್ದಾರೆ.
ಬಹುತೇಕ ಇಲಾಖೆಗಳ ಅನುದಾನ ವನ್ನು ಕಡಿತ ಮಾಡಿ ಕೃಷಿಗೆ ಅಗ್ರಮನ್ನಣೆ ನೀಡುವ, 2.37 ಲಕ್ಷ ಕೋಟಿ ರೂಪಾಯಿ ಗಾತ್ರದ ಆಯವ್ಯಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆ ಯಲ್ಲಿ ಗುರುವಾರ ಮಂಡಿಸಿದರು.
ಆರ್ಥಿಕ ಸಂಕಷ್ಟದಿಂದ ಪಾರಾಗಲು ಇದೇ ಮೊದಲ ಬಾರಿಗೆ ಇಲಾಖೆಗಳಿಗೆ ಪ್ರತ್ಯೇಕವಾಗಿ ಹಣ ಮೀಸಲಿರಿಸಿಲ್ಲ, ಅದರ ಬದಲು ಜಾಣ್ಮೆಯಿಂದ ಆರು ವಲಯ ಗಳನ್ನಾಗಿ ವಿಂಗಡಿಸಿ, ಒಂದೊಂದು ವಲ ಯಕ್ಕೂ ಇಂತಿಷ್ಟೇ ಪ್ರಮಾಣದ ಹಣ ವೆಂದು ಹಂಚಿದ್ದಾರೆ. ಕೃಷಿ ಮತ್ತು ಪೂರಕ ಚಟುವಟಿಕೆ, ಸರ್ವೋದಯ ಮತ್ತು ಕ್ಷೇಮ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿಗೆ ಪ್ರೋತ್ಸಾಹ, ಬೆಂಗಳೂರು ಸಮಗ್ರ ಅಭಿವೃದ್ಧಿ, ಸಂಸ್ಕøತಿ, ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲ ಗಳ ಸಂರಕ್ಷಣೆ ಮತ್ತು ಆಡಳಿತ ಸುಧಾ ರಣೆ ಹಾಗೂ ಸಾರ್ವಜನಿಕ ಸೇವೆಗಳು ಎಂದು ವಲಯಗಳನ್ನಾಗಿ ವಿಂಗಡಿಸಿ, ಈ ವಲಯ ಗಳಿಗೆ ಇಂತಿಷ್ಟೇ ಪ್ರಮಾಣದ ಹಣವೆಂದು ನಿಗದಿಪಡಿಸಿರುವುದರಿಂದ ಪ್ರತ್ಯೇಕವಾಗಿ ಇಲಾಖೆಗಳಿಗೆ ಹಣವಿಲ್ಲ. ಐಷಾರಾಮಿ ವಲಯದ ಮೇಲೆ ತೆರಿಗೆ ಹೇರಿದ ನಂತರವೂ ಕೊರತೆ ನೀಗಿಸಲು ಸಂಪನ್ಮೂಲ ಸಂಗ್ರಹಕ್ಕಾಗಿ 52 ಸಾವಿರ ಕೋಟಿ ಸಾಲದ ಮೊರೆ ಹೋಗಿದ್ದಾರೆ. ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ದರವನ್ನು 1.60 ರೂ., ಪ್ರತಿ ಲೀಟರ್ ಡೀಸೆಲ್ ಮೇಲೆ 1.59 ರೂ.ಗಳಷ್ಟು ತೆರಿಗೆ ಹೆಚ್ಚಳ ಮಾಡಿರುವ ಮುಖ್ಯಮಂತ್ರಿಯವರು ಎಲ್ಲಾ ತೆರನಾದ ಮದ್ಯದ ಮೇಲಿನ ದರಗಳನ್ನು ಶೇಕಡಾ 6 ರಷ್ಟು ಹೆಚ್ಚಳ ಮಾಡಿದ್ದಾರೆ. ಎಣ್ಣೆ ಪ್ರಿಯರಿಗೂ ಬಿಸಿ ಮುಟ್ಟಿಸಿರುವ ಮುಖ್ಯಮಂತ್ರಿ ಅವರು ಮದ್ಯದ ಎಲ್ಲ 18 ಘೋಷಿತ ಸ್ಲ್ಯಾಬ್‍ಗಳ ಮೇಲಿನ ಅಬಕಾರಿ ಸುಂಕದ ದರ ಹೆಚ್ಚಿದೆ. ಒಂದು ಲೀಟರ್‍ನ ಬಲ್ಕ್‍ಗೆ 144 ರೂ. ಇದ್ದರೆ ನಾಳೆಯಿಂದ ಅದು 153 ರೂ.ಗೆ ಹೆಚ್ಚಳವಾಗಲಿದೆ. ಸಾರಿಗೆ ವ್ಯವಸ್ಥೆಯ ಮೇಲೂ ತೆರಿಗೆಯ ಹೊರೆ ಬಿದ್ದಿದ್ದು ಹನ್ನೆರಡು ಸೀಟುಗಳಿಗಿಂತ ಹೆಚ್ಚು, ಇಪ್ಪತ್ತು ಸೀಟುಗಳಿಗಿಂತ ಕಡಿಮೆ ಸಾಮಥ್ರ್ಯದ ವಾಹನಗಳು ಪ್ರತಿ ಸೀಟಿಗೆ ಮೂರು ತಿಂಗಳಿಗೊಮ್ಮೆ ತಲಾ ಏಳು ನೂರು ರೂಪಾಯಿ ಕೊಡಬೇಕು ಎಂದು ಸ್ಪಷ್ಟ ಪಡಿಸಿದೆ.
ಈ ಮಧ್ಯೆ ಜನರ ಸೂರಿನ ಕನಸು ನನಸಾಗಲು ಪೂರಕವಾಗಿ ಇಪ್ಪತ್ತು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಬೆಲೆಯ ಅಪಾರ್ಟ್‍ಮೆಂಟುಗಳ ಮೇಲಿನ ಮುದ್ರಾಂಕ ಶುಲ್ಕವನ್ನು ಶೇ.5ರಿಂದ ಶೇ.3ಕ್ಕೆ ಇಳಿಸಲಾಗಿದೆ. ಆದರೆ ಹೀಗೆ ವಿವಿಧ ವಸ್ತುಗಳ ಮೇಲೆ ತೆರಿಗೆ ಭಾರ ಹೇರಿದರೂ ನಿರೀಕ್ಷಿತ ಪ್ರಮಾಣದ ಆದಾಯ ಸಂಗ್ರಹವಾಗದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ಸಾಲ ಎತ್ತಲು ನಿರ್ಧರಿಸಲಾಗಿದ್ದು ಇತಿಹಾಸದಲ್ಲೇ ಮೊದಲ ಬಾರಿಗೆ ಸಾಲದ ಪ್ರಮಾಣ ಐವತ್ತು ಸಾವಿರ ಕೋಟಿ ರೂಪಾಯಿ ಮೀರಲಿದೆ ಎಂದು ಮುಖ್ಯಮಂತ್ರಿಯವರೇ ಬಹಿರಂಗಪಡಿಸಿದ್ದಾರೆ. ಕೇಂದ್ರ ಸರ್ಕಾರದ ಕೆಲವು ಜನಪ್ರಿಯ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಅದಕ್ಕೆ ತತ್ಸಮನಾದ ಸಂಪನ್ಮೂಲ ಒದಗಿಸುವ ಉದ್ದೇಶದಿಂದ ಕೆಲವು ಯೋಜನೆಗಳಿಗಾಗಿ ವಿಶ್ವಬ್ಯಾಂಕ್,ಏಷಿಯನ್ ಮೂಲಸೌಕರ್ಯ ಅಭಿವೃದ್ಧಿ ಬ್ಯಾಂಕ್,ಎಲ್.ಐ.ಸಿ ಸೇರಿದಂತೆ ವಿವಿಧ ಮೂಲಗಳಿಂದ ಸಾಲ ಪಡೆಯುವುದಾಗಿ ತಿಳಿಸಿದ್ದಾರೆ. ಸಾಲ ಏತಕ್ಕೆ ಪಡೆಯು ತ್ತಿದ್ದೇನೆ ಮತ್ತು ಸಂಪನ್ಮೂಲದ ಕೊರತೆ ಎಲ್ಲಿ ಆಗಿದೆ ಎಂದು ಮುಖ್ಯಮಂತ್ರಿಯವರು ಮುಂಗಡ ಪತ್ರದಲ್ಲೇ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಕಳೆದ ಸಾಲಿನಲ್ಲಿ ಕೇಂದ್ರದಿಂದ ಬರಬೇಕಿದ್ದ ಅನುದಾನದಲ್ಲಿ ರಾಜ್ಯದ ಪಾಲು ಕಡಿಮೆಯಾಗಿದ್ದು ಇದರಿಂದಾಗಿ 8887 ಕೋಟಿ ರೂಪಾಯಿ ಕಡಿತವಾಗಿದೆ.ಜಿ.ಎಸ್.ಟಿಗೆ ಪೂರಕವಾದ ಸೆಸ್ ಸಂಗ್ರಹಣೆ ಯಲ್ಲಿ ಕುಸಿತವಾಗಿರುವುದರಿಂದ ರಾಜ್ಯಕ್ಕೆ 3000 ಕೋಟಿ ರೂಪಾಯಿ ನಷ್ಟವಾಗಿದೆ.
ಇದರಿಂದಾಗಿ ಕಳೆದ ವರ್ಷದ ಆಯವ್ಯಯದ ಗುರಿಯನ್ನು ತಲುಪಲು ಕಷ್ಟವಾಗಿದ್ದು ಇದೇ ಕಾರಣಕ್ಕಾಗಿ ಈ ವರ್ಷ ಸರ್ಕಾರದ ವಿವಿಧ ಇಲಾಖೆಗಳ ಮೇಲಿನ ಅನು ದಾನವನ್ನು ಕಡಿತ ಮಾಡಲಾಗಿದೆ. ಹಾಗೆಯೇ ಹದಿನೈದನೇ ಹಣಕಾಸು ಆಯೋಗವು ಸಲ್ಲಿಸಿದ ವರದಿಯ ಪ್ರಕಾರ 2020-21ನೇ ಸಾಲಿಗೆ ನಿಗದಿಪಡಿಸಿದ ತೆರಿಗೆಯ ಪಾಲಿನಲ್ಲಿ ಶೇ.3.64ರಷ್ಟು ಕುಸಿತವಾಗಿದ್ದು ಈ ಕಾರಣದಿಂದ ರಾಜ್ಯಕ್ಕೆ 11,215 ಕೋಟಿ ರೂಪಾಯಿ ಕಡಿತವಾಗಲಿದೆ. ಹೀಗಾಗಿ 2020-21 ನೇ ವರ್ಷದ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ನಷ್ಟವನ್ನು ಸರಿಪಡಿಸಲು ಮತ್ತು 2025-26 ನೇ ಸಾಲಿನವರೆಗೆ ನಿಗದಿ ಮಾಡಿದ ಅನುದಾನದ ಹಂಚಿಕೆ ಪ್ರಮಾಣವನ್ನು ಹೆಚ್ಚಳ ಮಾಡಲು ಆಯೋಗಕ್ಕೆ ಪರಿಷ್ಕøತ ಜ್ಞಾಪನಾ ಪತ್ರವನ್ನು ಸಲ್ಲಿಸಲಾಗುವುದು ಎಂದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸರ್ಕಾರಿ ನೌಕರರ ವೇತನ, ಪಿಂಚಣಿ,ಸರ್ಕಾರದ ಸಾಲದ ಮೇಲಿನ ಬಡ್ಡಿ ಮೊತ್ತದ ಪ್ರಮಾಣ 10000 ಕೋಟಿ ರೂಗಳಷ್ಟು ಹೆಚ್ಚಳವಾಗಿದೆ.
ರಾಜ್ಯ ಹಿಂದೆಂದೂ ಈ ಪ್ರಮಾಣದ ಆರ್ಥಿಕ ಸಂಕಷ್ಟವನ್ನು ಎದುರಿಸಿಲ್ಲ ಎಂದಿರುವ ಮುಖ್ಯಮಂತ್ರಿಗಳು, ಇದೇ ಕಾರಣಕ್ಕಾಗಿ ಸ್ವಂತ ತೆರಿಗೆಯ ಸಂಗ್ರಹ ಪ್ರಮಾಣದ ಹೆಚ್ಚಳ ಅನಿವಾರ್ಯ ಎಂದಿದ್ದಾರೆ. ವಾಣಿಜ್ಯ ತೆರಿಗೆ ಸಂಗ್ರಹದ ಪ್ರಮಾಣವನ್ನು 82,443 ಕೋಟಿ ರೂಪಾಯಿಗಳಿಗೆ ನಿಗದಿ ಮಾಡಿರುವ ಸರ್ಕಾರ ಈ ಬಾಬ್ತಿನಿಂದ ತಪ್ಪಿಸಿಕೊಳ್ಳುತ್ತಿರುವ ವರ್ತಕರ ಮೇಲೆ ಇಲಾಖೆ ಮುಗಿ ಬೀಳಲಿದೆ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಸ್ವಂತದ ತೆರಿಗೆಗಳ ಮೂಲಕ 1,28,107 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಗುರಿ ಹೊಂದಿರುವ ಸರ್ಕಾರ,ತೆರಿಗೆಯೇತರ ರಾಜಸ್ವದ ಮೂಲಕ 7767 ಕೋಟಿ ರೂಪಾಯಿ ಸಂಗ್ರಹವಾಗುವ ನಿರೀಕ್ಷೆ ಹೊಂದಿದೆ. ಕುಡಿಯುವ ನೀರು, ಶಿಕ್ಷಣ, ಮಕ್ಕಳ ಅಭಿವೃದ್ಧಿಗೆ ವಿವಿಧ ಇಲಾಖೆಗಳಲ್ಲಿ ಹರಿದು ಹಂಚಿ ಹೋಗಿದ್ದ ಹಣವನ್ನು ಒಂದೇ ಸೂರಿನಡಿಗೆ ತಂದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಬಹುತೇಕ ಇದಕ್ಕಾಗಿ ಹೊಸ ಸಚಿವಾಲಯದ ಸೃಷ್ಟಿಯು ಹಾಗೂ ಸುಳಿವು ನೀಡಿದ್ದಾರೆ. ಅಲ್ಲದೆ, ಪರಿಶಿಷ್ಟ ಜಾತಿ,ಪಂಗಡಗಳಿಗೆ ಮೀಸಲಿಡಬೇಕಾದ ಹಣದ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದರು.
ಕೃಷಿಗೆ ಅಗ್ರಸ್ಥಾನ ನೀಡಲಾಗಿದ್ದು ಹಿಂದಿನ ಸರ್ಕಾರಗಳ ಹಲವು ಯೋಜನೆಗಳನ್ನು ಯಥಾವತ್ತಾಗಿ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ. ಸಾಮಾಜಿಕ ನ್ಯಾಯದೊಂದಿಗೆ ಸರ್ವರಿಗೂ ಸಮಬಾಳು ಮತ್ತು ಸಮಪಾಲು ನೀಡುವ ಧ್ಯೇಯ ನಮ್ಮ ದಾರಿ. ಸರ್ವೋದಯದ ಗಮ್ಯದತ್ತ ಅಂತ್ಯೋದಯದ ಹಾದಿಯಲ್ಲಿ ನಮ್ಮ ಸರ್ಕಾರ ಸಾಗಿದೆ. ಎಲ್ಲರನ್ನು ಒಳಗೊಂಡ ಪ್ರಗತಿ ಮಾಡುವುದೇ ಗುರಿ ಎಂದಿದ್ದಾರೆ. ಅನ್ನದಾತ ಎದುರಿಸುತ್ತಿರುವ ಅನಿಶ್ಚಿತತೆಗಳಿಗೆ ಅಂತ್ಯ ಹಾಡುವ ದುಡಿಯುವ ವರ್ಗಗಳ ಬದುಕಿಗೆ ನೆಮ್ಮದಿ ತರುವ ಉದ್ಯೋಗ ಸೃಜನೆ ಮತ್ತು ಉದ್ಯಮಿಗಳ ವಿಕಾಸಕ್ಕೆ ಇಂಬುಕೊಡುವ ಮುಂಗಡ ಪತ್ರ ಇದಾಗಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಇಂದು ಮಂಡಿಸಿರುವ ಮುಂಗಡ ಪತ್ರವು ನಮ್ಮ ಸರ್ಕಾರದ ಅಭಿವೃದ್ಧಿಯ ಮುನ್ನೋಟವನ್ನು ಪ್ರಸ್ತುತಪಡಿಸಿದೆ. ಸಮೃದ್ಧ ಕರ್ನಾ ಟಕ ನಿರ್ಮಾಣಕ್ಕೆ ಕಾರ್ಯಸೂಚಿಯನ್ನು ಸ್ಪಷ್ಟಪಡಿಸಿರುವುದಲ್ಲದೆ, ಯೋಜನೆಗಳ ಅನುಷ್ಠಾನಕ್ಕೆ ಸದನ ಅನುಮತಿ ನೀಡಬೇಕೆಂದು ಮನವಿ ಮಾಡಿದರು. ಎಲ್ಲ ಸಮಸ್ಯೆಗಳ ನಡುವೆಯೂ ಸಮರ್ಪಕ ಪ್ರಮಾಣದಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಹೀಗಾಗಿ ಮುಂದಿನ ಅಂದರೆ 2021ನೇ ಮಾರ್ಚ್ 31 ರವರೆಗಿನ ಪೂರ್ಣ ಬಜೆಟ್‍ಗೆ ಅಂಗೀಕಾರ ನೀಡಬೇಕು ಎಂದು ವಿಧಾನಮಂಡಲವನ್ನು ಕೋರಿದ್ದಾರೆ.