ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ
ಮೈಸೂರು

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

October 26, 2018
  •  `ಶುದ್ಧಿ’ ಮೊದಲನೇ ಅತ್ಯುತ್ತಮ ಚಿತ್ರ, ವಿಶೃತ್ ನಾಯಕ ಅತ್ಯುತ್ತಮ ನಟ, ತಾರಾ ಅನುರಾಧ ಅತ್ಯುತ್ತಮ ನಟಿ
  • `ಹೆಬ್ಬೆಟ್ ರಾಮಕ್ಕ’, `ಹೆಬ್ಬುಲಿ’ಗೆ ತಲಾ ಮೂರು ಪ್ರಶಸ್ತಿ
  • `ರಾಜಕುಮಾರ’, `ಮಾರ್ಚ್ 22’ಕ್ಕೆ ತಲಾ ಎರಡು ಪ್ರಶಸ್ತಿ

ಬೆಂಗಳೂರು: 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಮಾದೇಶ್ ಟಿ.ಭಾಸ್ಕರ್ ನಿರ್ಮಾಣದಲ್ಲಿ ಆದರ್ಶ್ ಹೆಚ್.ಈಶ್ವರಪ್ಪ ನಿರ್ದೇಶಿಸಿರುವ `ಶುದ್ಧಿ’ ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಕೂಡ್ಲೂರು ರಾಮಕೃಷ್ಣ ನಿರ್ದೇಶನದಲ್ಲಿ ಹರೀಶ್ ಶೇರ್‍ಗಾರ್ ನಿರ್ಮಿಸಿರುವ `ಮಾರ್ಚ್ 22’ ಎರಡನೇ ಅತ್ಯುತ್ತಮ ಚಿತ್ರ ಹಾಗೂ ಅಭಯ ಸಿಂಹ ನಿರ್ದೇಶನದಲ್ಲಿ ನಿತ್ಯಾನಂದ ಪೈ ನಿರ್ಮಿಸಿರುವ `ಪಡ್ಡಾಯಿ’ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ಎನ್.ಆರ್. ನಂಜುಂಡೇಗೌಡ ನಿರ್ದೇಶನದಲ್ಲಿ ಮೆ|| ಸವಿರಾಜ್ ಸಿನಿಮಾಸ್ ನಿರ್ಮಿಸಿರುವ ತಾರಾ ಅನುರಾಧ ಅಭಿನಯದ `ಹೆಬ್ಬೆಟ್ ರಾಮಕ್ಕ’ ಚಿತ್ರಕ್ಕೆ ಮೂರು ಪ್ರಶಸ್ತಿಗಳು ಲಭಿಸಿವೆ. ಈ ಚಿತ್ರವು ವಿಶೇಷ ಸಾಮಾ ಜಿಕ ಕಾಳಜಿಯ ಚಿತ್ರ ಪ್ರಶಸ್ತಿಯೊಂದಿಗೆ ಈ ಚಿತ್ರದ ನಟಿ ತಾರಾ ಅನುರಾಧ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಪ್ರೊ. ಎಸ್.ಜಿ.ಸಿದ್ದರಾಮಯ್ಯ ಅವರಿಗೆ ಅತ್ಯುತ್ತಮ ಸಂಭಾಷಣೆಕಾರ ಪ್ರಶಸ್ತಿಯನ್ನು ತಂದು ಕೊಟ್ಟಿದೆ. ಸಂತೋಷ್ ಆನಂದರಾವ್ ನಿರ್ದೇಶನದ ಪುನೀತ್ ರಾಜ್‍ಕುಮಾರ್ ಅಭಿನಯದ `ರಾಜಕುಮಾರ’ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿಯೊಂದಿಗೆ, ವಿ.ಹರಿಕೃಷ್ಣ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ತಂದು ಕೊಟ್ಟಿದೆ. ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ `ಎಳೆಯರು ನಾವು ಗೆಳೆಯರು’, ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ `ಅಯನ’, ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿಗೆ `ಸೋಫಿಯಾ’ (ಕೊಂಕಣಿ) ಆಯ್ಕೆಯಾಗಿದೆ.

ಮಂಜರಿ ಚಿತ್ರದ ನಾಯಕ ವಿಶೃತ್ ನಾಯಕ ಅತ್ಯುತ್ತಮ ನಟ, ಹೆಬ್ಬೆಟ್ ರಾಮಕ್ಕ ಚಿತ್ರಕ್ಕೆ ತಾರಾ ಅನುರಾಧ ಅವರಿಗೆ ಅತ್ಯುತ್ತಮ ನಟಿ, `ಲಕ್ಷ್ಮೀನಾರಾಯಣರ ಪ್ರಪಂಚನೇ ಬೇರೆ’ ಚಿತ್ರದ ಮಂಜುನಾಥ ಹೆಗಡೆ ಅತ್ಯುತ್ತಮ ಪೋಷಕ ನಟ, `ಮೂಕನಾಯಕ’ ಚಿತ್ರದ ರೇಖಾ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

`ಕೆಂಗುಲಾಬಿ’ ಮತ್ತು `ನೀರು ತಂದವರು’ ಚಿತ್ರಗಳಿಗೆ ಅತ್ಯುತ್ತಮ ಕಥೆ ಪ್ರಶಸ್ತಿ, `ಕೆಂಪಿರ್ವೆ’ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಕಥೆ ಪ್ರಶಸ್ತಿ, `ಚಮಕ್’ ಚಿತ್ರದ ಸಂತೋಷ್ ರೈ ಪಾತಾಜಿ ಅವರಿಗೆ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ, `ಮಫ್ತಿ’ ಚಿತ್ರಕ್ಕೆ ಹರೀಶ್ ಕೊಮ್ಮೆ ಅವರಿಗೆ ಅತ್ಯುತ್ತಮ ಸಂಕಲನ, `ರಾಮ ರಾಜ್ಯ’ ಚಿತ್ರಕ್ಕೆ ಮಾಸ್ಟರ್ ಕಾರ್ತೀಕ್ ಅವರಿಗೆ ಅತ್ಯುತ್ತಮ ಬಾಲನಟ, `ಕಟಕ’ ಚಿತ್ರಕ್ಕೆ ಶ್ಲಘ ಸಾಲಿಗ್ರಾಮ ಅವರಿಗೆ ಅತ್ಯುತ್ತಮ ಬಾಲನಟಿ, `ಹೆಬ್ಬುಲಿ ಚಿತ್ರಕ್ಕೆ ರವಿ ಎಸ್.ಎ. ಅವರಿಗೆ ಅತ್ಯುತ್ತಮ ಕಲಾ ನಿರ್ದೇಶನ, `ಮಾರ್ಚ್ 22’ ಚಿತ್ರದ `ಮುತ್ತು ರತ್ನದ ಪ್ಯಾಟೆ’ ಹಾಡಿಗೆ ಜೆ.ಎಂ.ಪ್ರಹ್ಲಾದ್ ಅವರಿಗೆ ಅತ್ಯುತ್ತಮ ಗೀತ ರಚನೆ, `ಹುಲಿರಾಯ’ ಚಿತ್ರದ `ವಲಸೆ ಬಂದವರೆ’ ಹಾಡಿಗೆ ತೇಜಸ್ವಿ ಹರಿದಾಸ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ, `ದಯವಿಟ್ಟು ಗಮನಿಸಿ’ ಚಿತ್ರದ `ಅಸಾದುಲ್ಲಾ ದಾಡಿ ಬಿಟ್ಟ’ ಹಾಡಿಗೆ ಅಪೂರ್ವ ಶ್ರೀಧರ್ ಅವರಿಗೆ ಅತ್ಯುತ್ತಮ ಗಾಯಕಿ ಪ್ರಶಸ್ತಿ ಲಭಿಸಿದೆ. ತೀರ್ಪುಗಾರರ ವಿಶೇಷ ಪ್ರಶಸ್ತಿಗೆ `ಮಹಾಕಾವ್ಯ’ ಮತ್ತು `ರಾಗ’ ಚಿತ್ರಗಳು ಆಯ್ಕೆಯಾಗಿವೆ. ಹೆಬ್ಬುಲಿ ಚಿತ್ರದ ಸುರೇಶ್ ಕೆ. ಅವರು ಅತ್ಯುತ್ತಮ ನಿರ್ಮಾಣ ನಿರ್ವಾಹಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಎನ್.ಎಸ್.ಶಂಕರ್ ನೇತೃತ್ವದಲ್ಲಿ ಸದಾಶಿವ ಶೆಣೈ, ರಾಜಪ್ಪ ದಳವಾಯಿ, ಇಂದೂ ವಿಶ್ವನಾಥ್, ಎ.ಎನ್.ಜಯರಾಮಯ್ಯ, ಬಿ.ಆರ್.ವಿಶ್ವನಾಥ್, ಎ.ಸಿ.ಎನ್.ಮೋಹನ್, ಶಶಧರ ಅಡಪ ಸದಸ್ಯರಾಗಿರುವ ಸಮಿತಿಯು ಈ ಚಿತ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

Translate »