ಭಕ್ತಿ ಭಾವದ ಯಶಸ್ವಿ ಚಾಮುಂಡೇಶ್ವರಿ ತೆಪ್ಪೋತ್ಸವ
ಮೈಸೂರು

ಭಕ್ತಿ ಭಾವದ ಯಶಸ್ವಿ ಚಾಮುಂಡೇಶ್ವರಿ ತೆಪ್ಪೋತ್ಸವ

October 26, 2018

ಮೈಸೂರು: ಚಾಮುಂಡಿಬೆಟ್ಟದ ದೇವಿ ಕೆರೆಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ಅಮ್ಮನವರ ತೆಪ್ಪೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ನೆರವೇರಿತು. ಬೆಳಿಗ್ಗೆ ಅಮ್ಮನವರ ಪಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ಹೊರಟು ರಥದ ಬೀದಿಯ ಮೂಲಕ ಸಾಗಿ ದೇವೀಕೆರೆ ಅಂಗಳಕ್ಕೆ ಮೆರವಣಿಗೆ ಮೂಲಕ ತಲುಪಿತು. ಮೆರವಣಿಗೆ ವೇಳೆ ಭಕ್ತರು ಪೂಜೆ ಸಲ್ಲಿಸಿ, ಧನ್ಯತೆ ಮೆರೆದರು.

ದೇವಿಕೆರೆ ಅಂಗಳದಲ್ಲಿ ಸಂಜೆಯವರೆಗೂ ವಿವಿಧ ಪೂಜೆ-ಪುರಸ್ಕಾರ, ಹೋಮ-ಹವನಗಳು ನಡೆದವು. ನಂತರ 7 ಗಂಟೆ ವೇಳೆಗೆ ಬಣ್ಣ-ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತ ಗೊಂಡು ಕಂಗೊಳಿಸುತ್ತಿದ್ದ ತೆಪ್ಪದಲ್ಲಿ ಅಮ್ಮನವರ ಮೂರ್ತಿಯನ್ನಿ ರಿಸಿ, 7.30ರವರೆಗೆ ದೇವಿಕೆರೆಯಲ್ಲಿ 3 ಸುತ್ತು ಪ್ರದಕ್ಷಿಣೆ ಹಾಕಿಸಲಾಯಿತು.

ಈ ವೇಳೆ ಆಮ್ಮನವರ ದರ್ಶನ ಪಡೆಯಲು ಆಗಮಿಸಿದ್ದ ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೆಲವರು ಅಮ್ಮನವರ ಮೂರ್ತಿ ಯನ್ನು ಮೊಬೈಲ್‍ಗಳ ಮೂಲಕ ಸೆರೆಹಿಡಿಯುತ್ತಿದ್ದರೆ, ಮತ್ತೊಂದೆಡೆ ಪೊಲೀಸ್ ಬ್ಯಾಂಡ್‍ನಿಂದ ಹೊರಹೊಮ್ಮಿದ ಸಂಗೀತ ಕಂಪು ನೆರೆದಿದ್ದ ಭಕ್ತರಿಗೆ ಮುದ ನೀಡಿತು. ದೇವಿಕೆರೆಯನ್ನು 3 ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಅಮ್ಮನವರ ಮೂರ್ತಿಯನ್ನು ತೆಪ್ಪದಿಂದ ತಂದು 7.40ರ ವೇಳೆಗೆ ಚಿನ್ನದ ಪಲ್ಲಕ್ಕಿಯಲ್ಲಿರಿಸಿ, ಪೂಜೆ ನೆರವೇರಿಸಲಾಯಿತು. ಅಲ್ಲಿಂದ ಅಮ್ಮನವರ ಚಿನ್ನದ ಪಲ್ಲಕ್ಕಿ ಉತ್ಸವ ವಿವಿಧ ಮಂತ್ರ ಘೋಷಗಳೊಂದಿಗೆ ದೇವಿಕೆರೆ ಅಂಗಳದಿಂದ ಮೆರವಣಿಗೆ ಹೊರಟು ಸ್ವಸ್ಥಾನ ತಲುಪಿತು.

ಪೊಲೀಸ್ ಬಂದೋಬಸ್ತ್: ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಅಗ್ನಿ ಶಾಮಕ ದಳ ಎಚ್ಚರವಹಿಸಲಾಗಿತ್ತು.

Translate »