ಬೃಹತ್ ಅಕ್ವೇರಿಯಂ ಕಾಮಗಾರಿಗೆ ಜಾಗತಿಕ ಟೆಂಡರ್ ಕರೆಯಲು ಮೈಸೂರು ಮೃಗಾಲಯ ನಿರ್ಧಾರ
ಮೈಸೂರು

ಬೃಹತ್ ಅಕ್ವೇರಿಯಂ ಕಾಮಗಾರಿಗೆ ಜಾಗತಿಕ ಟೆಂಡರ್ ಕರೆಯಲು ಮೈಸೂರು ಮೃಗಾಲಯ ನಿರ್ಧಾರ

October 26, 2018

ಮೈಸೂರು:  ಮೈಸೂರು ನಗರ ಪಾಲಿಕೆಯಿಂದ ಹಸ್ತಾಂತರಗೊಂಡ ಬೃಹತ್ ಅಕ್ವೇರಿಯಂ ಕಟ್ಟಡಕ್ಕೆ ಕಾಯಕಲ್ಪ ನೀಡಲು ಮುಂದಾಗಿರುವ ಮೃಗಾಲಯ ಪ್ರಾಧಿಕಾರವು ಜಾಗತಿಕ (ಗ್ಲೋಬಲ್) ಟೆಂಡರ್ ಪ್ರಕ್ರಿಯೆಗೆ ಮುಂದಾಗಿದೆ.

ಮೈಸೂರಿನ ಕಾರಂಜಿಕೆರೆ ಹಾಗೂ ಮೃಗಾಲಯದ ನಡುವೆ ಬೃಹತ್ ಅಕ್ವೇರಿಯಂ ಸ್ಥಾಪನೆಗೆ ಮುಂದಾ ಗಿದ್ದ ಮೈಸೂರು ನಗರ ಪಾಲಿಕೆ 4.26 ಕೋಟಿ ರೂ. ಅನುದಾನದಲ್ಲಿ ಅಕ್ವೇರಿಯಂ ಕಟ್ಟಡ ನಿರ್ಮಾ ಣಕ್ಕೆ ನಿರ್ಧರಿಸಿತ್ತು. ನಂತರ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಕಳೆದ 5 ವರ್ಷದಿಂದ ಪಾಳು ಬಿದ್ದಿದ್ದ ಅಕ್ವೇರಿಯಂ ಕಟ್ಟಡವನ್ನು 2018ರ ಜು.14ರಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಸೂಚನೆ ಮೇರೆಗೆ ಮೈಸೂರು ನಗರ ಪಾಲಿಕೆ, ಚಾಮರಾಜೇಂದ್ರ ಮೃಗಾಲಯದ ಸುಪರ್ದಿಗೆ ಒಪ್ಪಿಸಿತ್ತು. ತನ್ನ ವಶಕ್ಕೆ ಅಕ್ವೇರಿಯಂ ಕಟ್ಟಡವನ್ನು ಪಡೆದಿದ್ದ ಮೃಗಾಲಯ ಕಟ್ಟಡದಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ತೆರವುಗೊಳಿಸಿದೆ. ಅಲ್ಲದೆ ಕಟ್ಟಡಕ್ಕೆ ಬಿಳಿ ಬಣ್ಣ ಬಳಿದು ಕಟ್ಟಡದ ಸೌಂದರ್ಯ ಕಾಪಾಡಿತ್ತು.

ಗ್ಲೋಬಲ್ ಟೆಂಡರ್: ಆರು ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಈ ಅಕ್ವೇರಿಯಂ ಕಟ್ಟಡ ನಿರ್ಮಿಸಲಾಗಿದೆ. ಅಕ್ವೇರಿಯಂ ಸ್ಥಾಪಿಸಲು ಇನ್ನು 25 ಕೋಟಿ ರೂಗಳ ಅನುದಾನದ ಅವಶ್ಯಕತೆ ಯಿದೆ. ಮೃಗಾಲಯ ಪ್ರಾಧಿಕಾರದ ವತಿಯಿಂದ ಕಾಮಗಾರಿ ಪೂರ್ಣಗೊಳಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ಇದೀಗ ವಿದೇಶಿ ಕಂಪನಿಗಳ ಮೂಲಕ ಕಾಮಗಾರಿ ನಡೆಸುವ ಆಲೋಚನೆ ಪ್ರಾಧಿಕಾರದ ಮುಂದಿದೆ. ಈಗಾಗಲೇ ದೇಶ-ವಿದೇಶಗಳಲ್ಲಿ ಅಕ್ವೇರಿಯಂ ಸ್ಥಾಪಿಸಿರುವ ವಿವಿಧ ಕಂಪನಿಗಳನ್ನು ಆಹ್ವಾನಿಸಲಾಗಿದೆ. ಕಳೆದ ಒಂದು ತಿಂಗಳಿಂದ ನಾಲ್ಕು ಸಂಸ್ಥೆಗಳು ಅಕ್ವೇರಿಯಂ ಕಟ್ಟಡವನ್ನು ಪರಿಶೀಲಿಸಿವೆ. ಅಂದಾಜು ವೆಚ್ಚ ಹಾಗೂ ನೀಲನಕ್ಷೆಯನ್ನು ಮೃಗಾಲಯದ ಅಧಿಕಾರಿಗಳಿಗೆ ನೀಡಿವೆ. ಗ್ಲೋಬಲ್ ಟೆಂಡರ್ ಕರೆದು ಅಂತರಾಷ್ಟ್ರೀಯ ಗುಣಮಟ್ಟದ ಅಕ್ವೇರಿಯಂ ಅನ್ನು ಮೈಸೂರಿನ ಜನರಿಗೆ ಕೊಡುಗೆಯಾಗಿ ನೀಡ ಬೇಕೆಂದು ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳು ನಿರ್ಧರಿಸಿದ್ದಾರೆ.

ವರ್ಷವಾಗಬಹುದು: ಅಕ್ವೇರಿಯಂ ಯೋಜನೆ ಕುರಿತಂತೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಅವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಇದು ಬೃಹತ್ ಯೋಜನೆಯಾಗಿದೆ. ಮೈಸೂರಿಗೆ ಬರುವ ಪ್ರವಾಸಿಗರಿಗೆ ಅಕ್ವೇರಿಯಂ ವೀಕ್ಷಿಸಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಗ್ಲೋಬಲ್ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭಿಸಲು ಒಂದು ವರ್ಷ ಬೇಕಾಗಬಹುದು. ಆದಷ್ಟು ಶೀಘ್ರದಲ್ಲೇ ಅಕ್ವೇರಿಯಂ ಕಟ್ಟಡವನ್ನು ಪೂರ್ಣಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದರು.

ಕನೆಕ್ಟಿಂಗ್ ಪಾತ್: ಮೃಗಾಲಯಕ್ಕೆ ಬರುವ ಪ್ರವಾಸಿಗರು ಕಾರಂಜಿಕೆರೆಗೆ ಹೋಗುವುದಕ್ಕೆ ಅಕ್ವೇರಿಯಂ ಕಟ್ಟಡದ ಕಾರಿಡಾರ್ ಮೂಲಕ ಕನೆಕ್ಟಿಂಗ್ ಪಾತ್ ನಿರ್ಮಿಸಲಾಗಿದೆ. 10 ರೂ ರಿಯಾಯಿತಿ ದರದಲ್ಲಿ ಕಾಂಬೋ ಟಿಕೆಟ್ ಪಡೆದ ಪ್ರವಾಸಿಗರು ಮೃಗಾಲಯವನ್ನು ವೀಕ್ಷಿಸಿ, ಅಕ್ವೇರಿಯಂ ಕಟ್ಟಡದ ಮೂಲಕ ಕಾರಂಜಿಕೆರೆಗೆ ಪ್ರವೇಶಿಸಬಹುದಾಗಿದೆ. ಕಾಂಬೋ ಟಿಕೆಟ್ ಪಡೆದವರ ಕೈಗೆ ಬ್ಯಾಂಡ್ ಕಟ್ಟಲಾಗುತ್ತದೆ. ಕನೆಕ್ಟಿಂಗ್ ಪಾತ್‍ಗೆ ಹೋಗುವ ದಾರಿ ಯಲ್ಲಿ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.

ಆದಾಯ ಹಂಚಿಕೆ: ಅಕ್ವೇರಿಯಂ ಸ್ಥಾಪನೆಯಾದ ನಂತರ ಮೃಗಾಲಯ ಹಾಗೂ ನಗರ ಪಾಲಿಕೆಗೆ ಆದಾಯ ಹಂಚಿಕೆ ಮಾಡುವ ಸೂತ್ರ ರೂಪಿಸಲಾಗುತ್ತದೆ. ಆದರೆ ಇದೀಗ ಅಕ್ವೇರಿಯಂ ಕಾಮಗಾರಿ ಪೂರ್ಣಗೊಳಿಸುವತ್ತ ಗಮನಹರಿಸಲಾಗುತ್ತಿದೆ.

ಪ್ರಾಥಮಿಕ ಕಾಮಗಾರಿ: ಅಕ್ವೇರಿಯಂ ಕಟ್ಟಡದ ಕೆಲ ಗೋಡೆ ಗಳು ಅಪೂರ್ಣಗೊಂಡಿದ್ದು, ಈ ಕಾಮಗಾರಿಯನ್ನು ಪೂರ್ಣಗೊಳಿ ಸಲಾಗುತ್ತಿದೆ. ಕೆಲವೆಡೆ ಕಬ್ಬಿಣದ ರಾಡುಗಳು ಕಟ್ಟಡದ ಗೋಡೆ ಗಳಿಂದ ಹೊರಗೆ ಚಾಚಿಕೊಂಡಿದ್ದು, ಅವುಗಳನ್ನು ಮೊಟಕುಗೊಳಿಸಿ ಕಟ್ಟಡದ ಪಿಲ್ಲರ್‍ಗಳಿಗೆ ಕಾಂಕ್ರಿಟ್ ಹಾಕಲಾಗುತ್ತಿದೆ. ಅಲ್ಲದೆ, ಗ್ರಿಲ್‍ಗಳಿಗೆ ಬಣ್ಣ ಬಳಿದು ಅಕ್ರಮವಾಗಿ ಕಟ್ಟಡದೊಳಕ್ಕೆ ಪ್ರವೇಶಿ ಸುವವರಿಗೆ ಕಡಿವಾಣ ಹಾಕುವ ಕಾರ್ಯ ನಡೆಯುತ್ತಿದೆ.

Translate »