ವಾಣಿಜ್ಯ ಮಂಡಳಿ ಸಂಧಾನ ವಿಫಲ
ಮೈಸೂರು

ವಾಣಿಜ್ಯ ಮಂಡಳಿ ಸಂಧಾನ ವಿಫಲ

October 26, 2018

ಬೆಂಗಳೂರು: ಚಿತ್ರರಂಗದ ಯಾವುದೇ ಸಮಸ್ಯೆಯಾದರೂ ಇತ್ಯರ್ಥಪಡಿಸುತ್ತಿದ್ದ ಚಲನಚಿತ್ರ ವಾಣಿಜ್ಯ ಮಂಡಳಿಗೆ ಶ್ರುತಿ ಹರಿಹರನ್ ಅವರ `ಮೀ ಟೂ’ ಅಭಿಯಾನ ಕಗ್ಗಂಟಾಗಿ ಪರಿಣಮಿಸಿದ್ದು, ವಾಣಿಜ್ಯ ಮಂಡಳಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಧಾನ ವಿಫಲವಾಗಿ, ಪ್ರಕರಣ ಕೋರ್ಟ್ ಮೆಟ್ಟಿಲು ಹತ್ತಿದೆ.

ಶ್ರುತಿ ಹರಿಹರನ್ ಅವರು ನಾಯಕ ನಟ ಅರ್ಜುನ್ ಸರ್ಜಾ ವಿರುದ್ಧ ‘ಮೀ ಟೂ’ ಅಭಿಯಾನದಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯ ನಟ ಅಂಬರೀಷ್ ನೇತೃತ್ವದಲ್ಲಿ ಇಂದು ಸಂಜೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಂಧಾನ ಸಭೆ ಏರ್ಪಡಿಸಲಾಗಿತ್ತು. ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಇಬ್ಬರೂ ಸಂಧಾನಕ್ಕೆ ಒಪ್ಪದ ಕಾರಣ ಸಭೆ ವಿಫಲವಾಯಿತು.

ಈ ಸಭೆ ಆರಂಭಕ್ಕೂ ಮುನ್ನವೇ ಶ್ರುತಿ ಹರಿಹರನ್ ಅವರನ್ನು ಬೆಂಬಲಿಸುತ್ತಿರುವ ನಟ ಚೇತನ್, ಈ ಪ್ರಕರಣದಲ್ಲಿ ಯಾರೂ ಪಂಚಾಯ್ತಿ ಮಾಡಲು ಸಾಧ್ಯವಿಲ್ಲ. ಅದು ನ್ಯಾಯಾಲಯದಲ್ಲಿ ಇತ್ಯರ್ಥ ವಾಗಬೇಕು ಎಂದು ಹೇಳಿಕೆ ನೀಡಿದ್ದರೆ, ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ಅವರು ಚಲನ ಚಿತ್ರ ವಾಣಿಜ್ಯ ಮಂಡಳಿ ಮುಂಭಾಗದಲ್ಲೇ ಸುದ್ದಿಗಾರರಿಗೆ ಶ್ರುತಿ ಹರಿಹರನ್ ವಿರುದ್ಧ ಎರಡು ಕೇಸ್ ಹಾಕಿರುವ ಬಗ್ಗೆ ವಿವರಗಳನ್ನು ಒದಗಿಸಿದ್ದಲ್ಲದೇ, ಎಫ್‍ಐಆರ್ ಪ್ರತಿಗಳನ್ನು ಹಂಚುವ ಮೂಲಕ ಸಂಧಾನ ಸಭೆ ವಿಫಲವಾಗುತ್ತದೆ ಎಂಬ ಮುನ್ಸೂಚನೆ ನೀಡಿದ್ದರು.

ಹಿರಿಯ ನಟ ಅಂಬರೀಷ್ ನೇತೃತ್ವದಲ್ಲಿ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ಸಾ.ರಾ. ಗೋವಿಂದು, ಮುನಿರತ್ನ, ರಾಕ್‍ಲೈನ್ ವೆಂಕಟೇಶ್, ಭಾಮಾ ಹರೀಶ್, ಕವಿತಾ ಲಂಕೇಶ್, ದೊಡ್ಡಣ್ಣ ಮುಂತಾದವರು ಸಂಧಾನ ಸಭೆ ನಡೆಸಿದರು. ಈ ಸಭೆಯಲ್ಲಿ ಅಂಬರೀಷ್ ಅವರು ಎಷ್ಟೇ ಬುದ್ಧಿವಾದ ಹೇಳಿದರೂ ಅರ್ಜುನ್ ಸರ್ಜಾ, ಶ್ರುತಿ ಹರಿಹರನ್ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ತಾವು ಸಂಧಾನಕ್ಕೆ ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದರು. ಅದೇ ವೇಳೆ ಶ್ರುತಿ ಹರಿಹರನ್ ಕೂಡ ತೊಂದರೆ ಆಗಿರುವುದು ನನಗೆ. ನಾನ್ಯಾಕೆ ಕ್ಷಮೆ ಕೇಳಬೇಕು? ಅರ್ಜುನ್ ಸರ್ಜಾ ಅವರೇ ನನ್ನ ಬಳಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ಅದೇ ವೇಳೆ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿರುವ ವಿಷಯವನ್ನೂ ಸಹ ಸಭೆಗೆ ತಿಳಿಸಲಾಯಿತು.

ಇವರಿಬ್ಬರ ಹಠಮಾರಿತನದಿಂದಾಗಿ ಸಂಧಾನ ವಿಫಲವಾಗುತ್ತದೆ ಎಂಬ ವಾತಾವರಣ ಸೃಷ್ಟಿಯಾದಾಗ ಅಂಬರೀಷ್ ಅವರು, ಇಬ್ಬರೂ ತಮ್ಮ ಕುಟುಂಬದವರೊಡನೆ ಚರ್ಚಿಸಿ ನಾಳೆ (ಅ.26) ತಮ್ಮ ನಿರ್ಧಾರವನ್ನು ತಿಳಿಸಿ ಎಂದರಲ್ಲದೇ, ಪೊಲೀಸ್ ಠಾಣೆ, ಕೋರ್ಟ್ ಮುಂತಾದ ಕಡೆ ಹೋಗುವುದು ಸರಿಯಲ್ಲ, ಸಮಸ್ಯೆಯನ್ನು ಪರಸ್ಪರ ಮಾತುಕತೆಯಲ್ಲಿ ಇತ್ಯರ್ಥ ಮಾಡಿಕೊಳ್ಳುವುದು ಒಳ್ಳೆಯದು ಎಂದು ಬುದ್ಧಿವಾದ ಹೇಳಿ ಕಳುಹಿಸಿದರು. ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಅಂಬರೀಷ್, ಈವರೆವಿಗೂ ಚಿತ್ರರಂಗದ ಎಲ್ಲಾ ಸಮಸ್ಯೆಗಳನ್ನೂ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇತ್ಯರ್ಥ ಮಾಡುತ್ತಿದ್ದೆವು. ಇದೇ ಮೊದಲ ಬಾರಿಗೆ ಈ ಪ್ರಕರಣ ನ್ಯಾಯಾಲಯಕ್ಕೆ ಹೋಗಿದೆ. ಯಾವುದೇ ಪ್ರಕರಣ ನ್ಯಾಯಾಲಯದ ಮಟ್ಟದಲ್ಲಿರುವಾಗ ನಾವು ಮಧ್ಯ ಪ್ರವೇಶಿಸುವುದು ಸರಿಯಲ್ಲ. ಎಲ್ಲವನ್ನೂ ಕೋರ್ಟ್ ನಿರ್ಧಾರ ಮಾಡುತ್ತದೆ ಎಂದರು.

ಇದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರ್ಜುನ್ ಸರ್ಜಾ, ತಮ್ಮ ಮೇಲಿನ ಆರೋಪದಿಂದಾಗಿ ಮನಸ್ಸಿಗೆ ತುಂಬಾ ನೋವಾಗಿದೆ. ನನ್ನ ಕುಟುಂಬದವರು, ಹಿತೈಷಿಗಳು, ಅಭಿಮಾನಿಗಳು ಎಲ್ಲರಿಗೂ ನೋವಾಗಿದೆ. ನನ್ನ ತೇಜೋವಧೆ ಪ್ರಯತ್ನ ಯಾಕೆ ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಎಲ್ಲವೂ ಬಯಲಾಗಲಿದೆ. ಈ ಪ್ರಕರಣದಲ್ಲಿ ಸಂಧಾನ ಎಂಬ ಪದಕ್ಕೆ ಆಸ್ಪದವೇ ಇಲ್ಲ. ಪ್ರಕರಣ ನ್ಯಾಯಾಲಯಕ್ಕೆ ಹೋಗಿದೆ. ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ. ಇದರ ಹಿಂದೆ ಯಾರ್ಯಾರು ಇದ್ದಾರೆ ಎಂಬುದು ಗೊತ್ತಾಗಲಿದೆ. `ಮೀ ಟೂ’ ಅಭಿಯಾನ ಒಳ್ಳೆಯದು. ಆದರೆ ಇದಕ್ಕೆ ಅಮಾಯಕರು ಬಲಿಯಾಗಬಾರದು. ಸಿನಿಮಾದಲ್ಲಿ ಕೈ ಹಿಡಿದರು, ಊಟಕ್ಕೆ ಕರೆದರು, ಎಂದೆಲ್ಲಾ ಹೇಳಿಕೊಂಡು ಹೋದರೆ ಅಭಿಯಾನಕ್ಕೆ ಅರ್ಥವಿರುವುದಿಲ್ಲ ಎಂದರು.

ಶ್ರುತಿ ಹರಿಹರನ್ ಮಾತನಾಡಿ, ಅಂಬರೀಷ್ ಅವರು ನಾಳೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಆನಂತರ ನನ್ನ ನಿರ್ಧಾರ ತಿಳಿಸುತ್ತೇನೆ. ತೊಂದರೆಯಾಗಿರುವುದು ನನಗೆ. ಆದ್ದರಿಂದ ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನಮ್ಮ ಸಮಾಜ ತೊಂದರೆಗೊಳಗಾದ ಹೆಣ್ಣು ಮಕ್ಕಳ ಮೇಲೆಯೇ ತಪ್ಪು ಹೊರಿಸುವ ಕೆಲಸ ಮಾಡುತ್ತಿದೆ. ಅರ್ಜುನ್ ಸರ್ಜಾ ಅವರು ನನ್ನ ಮೇಲೆ ಎರಡು ಕೇಸ್ ಹಾಕಿರುವುದು ಗೊತ್ತಾಗಿದೆ. ಎಲ್ಲವನ್ನೂ ನ್ಯಾಯಾಲಯದಲ್ಲಿ ಎದುರಿಸುತ್ತೇನೆ ಎಂದರು.

Translate »