ಶ್ರುತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಮಾನನಷ್ಟ ಮೊಕದ್ದಮೆ
ಮೈಸೂರು

ಶ್ರುತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಮಾನನಷ್ಟ ಮೊಕದ್ದಮೆ

October 26, 2018

ಬೆಂಗಳೂರು: ತಮ್ಮ ವಿರುದ್ಧ `ಮೀ ಟೂ’ ಅಭಿಯಾನದಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ವಿರುದ್ಧ ಬಹು ಭಾಷಾ ನಟ, ಕನ್ನಡಿಗ ಅರ್ಜುನ್ ಸರ್ಜಾ ಅವರು ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಶ್ರುತಿ ಹರಿಹರನ್ ಮಾಡಿರುವ ಆರೋಪದಿಂದ ತನಗೆ ಹಾಗೂ ತನ್ನ ಕುಟುಂಬದವರಿಗೆ ನೋವುಂಟಾಗಿದೆ ಎಂಬ ಕಾರಣಕ್ಕಾಗಿ 5 ಕೋಟಿ ರೂ.ಗಳ ಮಾನ ನಷ್ಟ ಮೊಕದ್ದಮೆಯನ್ನು ಅರ್ಜುನ್ ಸರ್ಜಾ ಹೂಡಿದ್ದಾರೆ. ಅಲ್ಲದೇ ಶ್ರುತಿ ಹರಿಹರನ್ ವಿರುದ್ಧ ಅವರು ಕ್ರಿಮಿನಲ್ ಪ್ರಕರಣವನ್ನೂ ಕೂಡ ದಾಖಲಿಸಿದ್ದು, ಅದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ಆಗಿದೆ.

ಈ ಸಂಬಂಧ ಇಂದು ಸಂಜೆ ಸುದ್ದಿಗಾರರಿಗೆ ವಿವರಗಳನ್ನು ನೀಡಿದ ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ಅವರು, `ಮೀ ಟೂ’ ಅಭಿಯಾನವನ್ನು ದುರ್ಬಳಕೆ ಮಾಡಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅರ್ಜುನ್ ಸರ್ಜಾ ಅವರ ತೇಜೋವಧೆ ಮಾಡುತ್ತಿರುವುದಲ್ಲದೇ, ಹಿಂದೂ ಭಾವನೆಗಳಿಗೆ ಧಕ್ಕೆಯುಂಟು ಮಾಡ ಲಾಗುತ್ತಿದೆ ಎಂದು ಆರೋಪಿಸಿದರು. ಹಣ ನೀಡಿ ಸಾಮಾಜಿಕ ಜಾಲ ತಾಣಗಳಲ್ಲಿ ಅರ್ಜುನ್ ಸರ್ಜಾ ಮತ್ತು ಅವರ ಕುಟುಂಬದವರನ್ನು ತೇಜೋವಧೆ ಮಾಡಲಾಗುತ್ತಿದ್ದು, ಇದರ ಹಿಂದೆ ಕನ್ನಡ ಚಿತ್ರರಂಗದ ಇಬ್ಬರು ಪ್ರಭಾವಿ ಹಿರಿಯ ನಟರು ಇದ್ದಾರೆ ಎಂಬುದು ದಾಖಲೆಗಳ ಸಮೇತ ಗೊತ್ತಾಗಿದ್ದು, ಎಲ್ಲಾ ದಾಖಲೆಗಳನ್ನು ಪೊಲೀಸರಿಗೆ ನೀಡಲಾಗಿದೆ ಎಂದರು. ಅರ್ಜುನ್ ಸರ್ಜಾ ಅವರು ಚೆನ್ನೈನಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಹನುಮಾನ್ ಮಂದಿರ ನಿರ್ಮಾಣ ಮಾಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಹಿಂದೂ ವಿರೋಧಿ ಗುಂಪು ಅವರ ವಿರುದ್ಧ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಈ ಕೃತ್ಯಕ್ಕೆ ವಿದೇಶಿ ಹಣ ಬಳಕೆಯಾಗಿದೆ. ಅಲ್ಲದೇ ವಿದೇಶದಿಂದಲೂ ಅರ್ಜುನ್ ಸರ್ಜಾ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಮಾಹಿತಿಗಳು ಅಪ್‍ಲೋಡ್ ಮಾಡಲಾಗಿದೆ ಎಂದು ಹೇಳಿದ ಅವರು, ಅ.20ರಂದು ಬೆಳಿಗ್ಗೆ 9 ಗಂಟೆಗೆ ಶ್ರುತಿ ಹರಿಹರನ್ ಸಾಮಾಜಿಕ ಜಾಲ ತಾಣದ ಅಕೌಂಟ್ ಬೆಂಗಳೂರಿನಲ್ಲಿ ಲಾಗ್-ಇನ್ ಆಗಿ ಮಾಹಿತಿ ಅಪ್‍ಲೋಡ್ ಮಾಡಲಾಗಿದೆ. ಅದೇ ದಿನ ರಾತ್ರಿ 12 ಗಂಟೆ ವೇಳೆಯಲ್ಲಿ ವಾಷಿಂಗ್ಟನ್‍ನಲ್ಲಿ ಶ್ರುತಿ ಹರಿಹರನ್ ಅವರ ಅದೇ ಅಕೌಂಟ್ ಲಾಗ್-ಇನ್ ಆಗಿ ಮಾಹಿತಿ ಅಪ್‍ಲೋಡ್ ಮಾಡಲಾಗಿದೆ.

ಅಂದರೆ ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅವರನ್ನು ತೇಜೋ ವಧೆ ಮಾಡುವ ಉದ್ದೇಶದಿಂದ ವಾಷಿಂಗ್ಟನ್‍ನಿಂದಲೂ ಸಾಮಾಜಿಕ ಜಾಲ ತಾಣದಲ್ಲಿ ಮಾಹಿತಿ ಹರಿಯುವಂತೆ ಮಾಡಿದ್ದಾರೆ ಎಂಬುದು ಖಚಿತವಾಗುತ್ತದೆ ಎಂದು ಅವರು ಹೇಳಿದರು. ಇದಕ್ಕೆ ಸಂಬಂಧಪಟ್ಟಂತೆ ಸ್ಕ್ರೀನ್ ಶಾಟ್ ಮತ್ತು ಮಾಹಿತಿ ಅಪ್‍ಲೋಡ್ ಆದ ಐಪಿ ಅಡ್ರೆಸ್‍ಗಳನ್ನೂ ಪತ್ತೆ ಹಚ್ಚಲಾಗಿದೆ ಎಂದರು. ಈ ಕೃತ್ಯಕ್ಕಾಗಿ ಎಷ್ಟು ಹಣ ನೀಡಲಾಗಿದೆ? ಯಾವ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿದೆ? ಅದರಲ್ಲಿ ಕನ್ನಡ ಚಿತ್ರರಂಗದ ಇಬ್ಬರು ಹಿರಿಯ ನಟರು ಭಾಗಿಯಾಗಿದ್ದಾರೆ ಎಂಬುದಕ್ಕೆಲ್ಲಾ ನಮಗೆ ದಾಖಲೆಗಳು ದೊರೆತಿವೆ ಎಂದರು.

Translate »