ಬೆಂಗಳೂರು: ಪ್ರಸ್ತುತ ಯಾವುದೇ ವಿದ್ಯುತ್ ಸರಬರಾಜು ಕಂಪನಿಯು ಲೋಡ್ ಶೆಡ್ಡಿಂಗ್ ಜಾರಿಗೆ ತಂದಿಲ್ಲ. ಹೀಗಾಗಿ ಇನ್ನು ಮುಂದೆಯೂ ಲೋಡ್ ಶೆಡ್ಡಿಂಗ್ ಮಾಡಬಾರದೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂಧನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದ ವಿದ್ಯುತ್ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಲು ಇಂದು ಮುಖ್ಯಮಂತ್ರಿ ಗಳು ಇಂಧನ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕೆಪಿಸಿಎಲ್, ಕೆಪಿಟಿಸಿಎಲ್ ಹಾಗೂ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರು ಭಾಗವಹಿಸಿದ್ದರು.
ಈ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಒಪ್ಪಂದದಂತೆ ನಮಗೆ ಕಲ್ಲಿದ್ದಲು ಪೂರೈಕೆಯಾಗಿಲ್ಲ. ಈ ಬಗ್ಗೆ ಕೇಂದ್ರ ಸಚಿವರಿಗೆ ಪತ್ರ ಬರೆಯಲಾಗಿದೆ. ಕೇಂದ್ರ ಕಲ್ಲಿದ್ದಲು ಸಚಿವಾಲಯದೊಂದಿಗೆ ಮುಖ್ಯ ಕಾರ್ಯ ದರ್ಶಿಗಳು ಸಂಪರ್ಕದಲ್ಲಿದ್ದಾರೆ. ಆದಷ್ಟು ಬೇಗ ರಾಜ್ಯಕ್ಕೆ ಕಲ್ಲಿದ್ದಲು ದೊರಕುವ ಭರವಸೆಯೂ ದೊರೆತಿದೆ ಎಂದು ಅವರು ತಿಳಿಸಿದರು.
ಸಮರ್ಪಕವಾಗಿ ಕಲ್ಲಿದ್ದಲು ಸಾಗಾಣಿಕೆ ಆಗುವುದನ್ನು ಖಾತರಿಪಡಿಸಲು ಮತ್ತೊಮ್ಮೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗುವುದು. ಕಲ್ಲಿದ್ದಲು ಪೂರೈಕೆ ಹಾಗೂ ಸಾಗಾಣಿಕೆ ಸಕಾಲದಲ್ಲಿ ಆಗುವುದನ್ನು ಖಾತರಿಪಡಿಸಲು ಕಲ್ಲಿದ್ದಲು ಸಚಿವಾಲಯ, ರೈಲ್ವೆ ಕೇಂದ್ರ ಕಚೇರಿಯಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ರಾಜ್ಯದಲ್ಲಿ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿದೆ. ಅಲ್ಲದೇ ಪರ್ಯಾಯ ಮೂಲಗಳಿಂದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಸೌರ ವಿದ್ಯುತ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿರುವುದರಿಂದ ಹಾಗೂ ಜಲ ವಿದ್ಯುತ್ ಮೂಲದಿಂದ ನಷ್ಟವನ್ನು ಸರಿದೂಗಿಸಲಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಎಚ್ಚರ ವಹಿಸಬೇಕೆಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.