ಮೈಸೂರು: ಬಗೆ ಬಗೆಯ ತಿಂಡಿ-ತಿನಿಸುಗಳಿಂದ ಘಮ ಘಮಿಸುತ್ತಿದ್ದ ಆ ಸ್ಥಳವೀಗ ದುರ್ವಾಸನೆಗೆ ಸಾಕ್ಷಿಯಾಗಿದೆ. ಹೌದು, ದಸರಾ ಮಹೋ ತ್ಸವದ ಅಂಗವಾಗಿ ಆಹಾರ ಮೇಳ ನಡೆದ ಲಲಿತ ಮಹಲ್ ಹೆಲಿಪ್ಯಾಡ್‍ನ ಮುಡಾ ಮೈದಾನದ ದುಸ್ಥಿತಿ ಇದು.
ಮೈದಾನದಲ್ಲಿ ಪ್ಲಾಸ್ಟಿಕ್‍ನ ಚಮಚ, ತಟ್ಟೆ, ಲೋಟ, ಚೀಲ ಹೀಗೆ ಹತ್ತು-ಹಲವು ಬಗೆಯ ತ್ಯಾಜ್ಯಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮೈದಾನಕ್ಕೆ ಹೊಂದಿಕೊಂಡಿರುವ ಇಂದಿರಾ ಕ್ಯಾಂಟೀನ್ ಹಿಂಭಾಗದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಶೌಚಾಲಯಗಳನ್ನು ತೆರವು ಮಾಡಿದ್ದರೂ ಹೊಂಡಗಳನ್ನು ಮುಚ್ಚದೇ ಹಾಗೇ ಬಿಡಲಾಗಿದೆ. ಪರಿಣಾಮ ಹೊಂಡಗಳಲ್ಲಿ ಶೇಖರಣೆಗೊಂಡ ಮಲ-ಮೂತ್ರದ ದುರ್ವಾ ಸನೆ ಬೀರುತ್ತಿದ್ದು, ಸೊಳ್ಳೆ-ನೊಣಗಳ ಆಶ್ರಯ ತಾಣವಾಗಿ ಪರಿಣಮಿಸಿದೆ.
9 ದಿನಗಳ ಕಾಲ ನಡೆದ ಆಹಾರ ಮೇಳಕ್ಕೆ ಅ.19ಕ್ಕೆ ತೆರೆ ಬಿದ್ದಿದ್ದು, ಇಷ್ಟು ದಿನಗಳಾದರೂ ಮೇಳದಿಂದ ಉಂಟಾದ ತ್ಯಾಜ್ಯಗಳನ್ನು ತೆರವುಗೊಳಿಸಿ ಶುಚಿಯಾಗಿಡಲು ಸಂಬಂಧಿ ಸಿದವರು ಮುಂದಾಗಿಲ್ಲ. ಕಳೆದ ಬಾರಿಯಂತೆ ಮೈಸೂರಿನ ಡಿಸಿ ಕಚೇರಿ ಸಮೀಪದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಮಾತ್ರವಲ್ಲದೆ, ಲಲಿತ ಮಹಲ್ ಬಳಿಯ ಮುಡಾ ಮೈದಾನದಲ್ಲೂ ಆಹಾರ ಮೇಳ ಆಯೋಜನೆ ಮಾಡಲಾಗಿತ್ತು. ಈ ಎರಡೂ ಪ್ರತ್ಯೇಕ ಮೇಳಕ್ಕೂ ಅ.10ರಂದು ಏಕಕಾಲದಲ್ಲಿ ಚಾಲನೆ ನೀಡಲಾಗಿತ್ತು. ಮೈಸೂರಿನ ಹೃದಯ ಭಾಗದಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ದಲ್ಲಿ ಅ.18ರವರೆಗೆ ಹಾಗೂ ಲಲಿತ ಮಹಲ್ ಹೆಲಿಪ್ಯಾಡ್‍ನ ಮುಡಾ ಮೈದಾನದಲ್ಲಿ ಅ.19 ರವರೆಗೆ ಆಹಾರ ಮೇಳ ನಡೆದು ತರಾ ವರಿ ಆಹಾರ ಪದಾರ್ಥ, ತಿಂಡಿ-ತಿನಿಸುಗಳ ತಯಾರಿಕೆಯ ತಾಣವಾಗಿತ್ತು. ಇದು ಆಹಾರ ಪ್ರಿಯರ ಬಾಯಲ್ಲಿ ನೀರೂರಿಸುವಂತೆಯೂ ಮಾಡಿತ್ತು. ಮೇಳಕ್ಕೆ ತೆರೆ ಬೀಳುತ್ತಿದ್ದಂತೆ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಮಳಿಗೆ ಗಳ ತೆರವು ಸೇರಿದಂತೆ ತ್ಯಾಜ್ಯಗಳ ತೆರವು ಗೊಳಿಸಿ ಶುಚಿ ಮಾಡಿದ್ದು, ಇಲ್ಲಿ ಬಹುತೇಕ ಎಲ್ಲವನ್ನು ತೆರವು ಮಾಡಲಾಗಿದೆ. ಆದರೆ ಮುಡಾ ಮೈದಾನದಲ್ಲಿ ಮಾತ್ರ ಅದೇಕೋ ತ್ವರಿತ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಇದರ ಪರಿ ಣಾಮ ಮೈದಾನದಲ್ಲಿ ಅಲ್ಲಲ್ಲಿ ಕಸದ ರಾಶಿ ಗುಡ್ಡೆ ಹಿಡಿದಿದ್ದರೆ, ಕೆಲವೊಮ್ಮೆ ಗಾಳಿ ಯಲ್ಲಿ ತ್ಯಾಜ್ಯಗಳು ರಸ್ತೆ ಸೇರಿದಂತೆ ಮರ ಗಳ ಬುಡಗಳನ್ನು ಸೇರುವಂತಾಗಿದೆ.
ಮೈದಾನದಿಂದ ಹಾರಿ ಬರುವ ತ್ಯಾಜ್ಯದಿಂದ ಪಕ್ಕದ ಮುಖ್ಯ ರಸ್ತೆಯಲ್ಲಿ (ಲಲಿತ ಮಹಲ್ ರಸ್ತೆ) ಫಾಸ್ಟ್‍ಫುಡ್ ವ್ಯಾಪಾರ ನಡೆಸುವವರು ವಹಿವಾಟು ಗ್ರಾಹಕರ ಕೊರತೆಯಿಂದ ಹೆಣಗಾಡುವ ಪರಿಸ್ಥಿತಿ ಉಂಟಾಗಿದೆ. ಮೈದಾನದಲ್ಲಿನ ತ್ಯಾಜ್ಯದ ದುರ್ನಾತ ಗಾಳಿ ಬೀಸುತ್ತಿದ್ದಂತೆ ರಸ್ತೆಯತ್ತಲೂ ಸೂಸು ವಂತಾಗಿದೆ. ಆಹಾರ ಮೇಳದಿಂದ ಕೆಲದಿನ ಮಾತ್ರ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆ, ಬಳಿಕ ಎಲ್ಲವೂ ಸಹಜ ಸ್ಥಿತಿಗೆ ಬರುತ್ತದೆ ಎಂದು ಕೊಂಡಿದ್ದ ಇಲ್ಲಿನ ರಸ್ತೆಬದಿ ಫಾಸ್ಟ್ ಫುಡ್ ವ್ಯಾಪಾರಸ್ಥರಿಗೆ ಈ ಅನೈರ್ಮಲ್ಯ ವಾತಾ ವರಣ ತಲೆಬಿಸಿ ತಂದಿದೆ. ಕಾರಣ ಗ್ರಾಹಕರು ಇತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ.
ವಾಯು ವಿಹಾರಕ್ಕೂ ಸಮಸ್ಯೆ: ಮೇಳ ಮುಗಿದ ಬಳಿಕ ಈ ಹಿಂದಿನಂತೆ ಮೈದಾನ ಸಹಜ ಸ್ಥಿತಿಯಲ್ಲಿ ಇಲ್ಲದೇ ಅನೈರ್ಮಲ್ಯದ ವಾತಾವರಣ ಉಂಟಾಗಿರುವುದು ವಾಯು ವಿಹಾರಕ್ಕೂ ಕಿರಿಕಿರಿ ಉಂಟು ಮಾಡಿದೆ. ಮೈದಾನದ ಸುತ್ತಮುತ್ತಲ ಜನವಸತಿ ಸ್ಥಳ ಗಳಿಂದ ದಿನನಿತ್ಯ ಬೆಳಿಗ್ಗೆ ವಾಯು ವಿಹಾರ ಕ್ಕೆಂದು ಮೈದಾನಕ್ಕೆ ಬರುತ್ತಿದ್ದವರು ಇದೀಗ ಕಿರಿಕಿರಿ ಅನುಭವಿಸುವುದು ಬೇಡವೆಂದು ಇತ್ತ ಬರುವುದನ್ನೇ ಕೈಬಿಟ್ಟಿದ್ದಾರೆ.
ಬೀದಿ ನಾಯಿಗಳ ದಂಡು: ಆಹಾರ ತ್ಯಾಜ್ಯ ಗಳು ಅಲ್ಲಲ್ಲಿ ಗುಡ್ಡೆ ಹಿಡಿದಿರುವ ಹಿನ್ನೆಲೆಯಲ್ಲಿ ವಾಸನೆ ಹಿಡಿದು ಬೀದಿ ನಾಯಿಗಳ ದಂಡು ಮೈದಾನಕ್ಕೆ ಲಗ್ಗೆಯಿಟ್ಟಿವೆ. ತಿನ್ನಲು ಏನಾ ದರೂ ಸಿಗಬಹುದೆಂದು ನಾಯಿಗಳ ದಂಡು ತ್ಯಾಜ್ಯದ ರಾಶಿಗಳಲ್ಲಿ ಹುಡುಕಾಡುತ್ತ, ಪರಸ್ಪರ ಕಚ್ಚಾಡುತ್ತ ತ್ಯಾಜ್ಯಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡುವಂತೆ ಮಾಡುತ್ತಿರುವ ಸನ್ನಿವೇಶ ನಿರ್ಮಾಣವಾಗಿದೆ.
ಇನ್ನು ಮುಚ್ಚದೇ ಬಿಟ್ಟಿರುವ ತಾತ್ಕಾಲಿಕ ಶೌಚಾಲಯದ ತೆರೆದ ಹೊಂಡಗಳಿಗೂ ಈ ಬೀದಿ ನಾಯಿಗಳು ಬಿದ್ದು ಮತ್ತಷ್ಟು ಅನೈರ್ಮಲ್ಯದ ವಾತಾವರಣಕ್ಕೆ ಎಡೆ ಮಾಡಲೂ ಬಹುದಾಗಿದೆ. ಆಹಾರ ಮೇಳದ ಹಿನ್ನೆಲೆಯಲ್ಲಿ ನಿರ್ಮಿಸಿದ್ದ ಮಳಿಗೆಗಳನ್ನು ಸಂಪೂರ್ಣವಾಗಿ ತೆರವು ಮಾಡಿದ್ದರೂ ನೆಲಹಾಸುಗಳನ್ನು ಅಲ್ಲೇ ಮುದುರಿ ಇಡಲಾಗಿದೆ. ಜೊತೆಗೆ ವೇದಿಕೆ ನಿರ್ಮಾಣಕ್ಕೆ ಬಳಸಿದ್ದ ಕಬ್ಬಿಣದ ಕಂಬಗಳನ್ನು ಇದ್ದ ಹಾಗೆಯೇ ಬಿಡಲಾಗಿದೆ. ಇಂತಹ ಕಬ್ಬಿಣದ ಕಂಬಗಳು ತೆರವು ಮಾಡಲು ಆಮೆಗತಿ ವೇಗ ತಾಳಿ, ಕಳ್ಳಕಾಕರು ಕಳವು ಮಾಡಿದ ಬಳಿಕ ಚಿಂತೆಗೀಡಾಗುವುದು ಎಷ್ಟು ಸರಿ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.