ದಸರಾ ಆಹಾರ ಮೇಳಕ್ಕೆ ಚಾಲನೆ ಕಾದು ಕುಳಿತಿದ್ದ ಭೋಜನ ಪ್ರಿಯರಿಗೆ ಸುಗ್ಗಿ
ಮೈಸೂರು, ಮೈಸೂರು ದಸರಾ

ದಸರಾ ಆಹಾರ ಮೇಳಕ್ಕೆ ಚಾಲನೆ ಕಾದು ಕುಳಿತಿದ್ದ ಭೋಜನ ಪ್ರಿಯರಿಗೆ ಸುಗ್ಗಿ

October 11, 2018

ಮೈಸೂರು,: ದಸರಾ ಮಹೋತ್ಸವದಲ್ಲಿ ಆಹಾರ ಪ್ರಿಯರ ಆಕರ್ಷಕ ತಾಣವಾಗುವ ಆಹಾರ ಮೇಳ ಬುಧವಾರ ಚಾಲನೆ ಪಡೆದುಕೊಂಡಿತು. ರಾಜ್ಯದ ನಾನಾ ಭಾಗ ಹಾಗೂ ವಿವಿಧ ರಾಜ್ಯಗಳ ವೈವಿಧ್ಯಮಯ ಆಹಾರಗಳ ಜೊತೆಗೆ ಈ ಬಾರಿ ವಿದೇಶಗಳ ಆಹಾರ ಶೈಲಿಯೂ ಘಮಘಮಿಸಲಿದೆ.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಮೀಪದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್ ಹೆಲಿಪ್ಯಾಡ್‍ನ ಮುಡಾ ಮೈದಾನದಲ್ಲಿ ಇಂದಿನಿಂದ ಆಹಾರ ಮೇಳ ಚಾಲನೆ ಪಡೆದುಕೊಂಡಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಅ.18ರವರೆಗೆ ಹಾಗೂ ಲಲಿತ ಮಹಲ್ ಹೆಲಿಪ್ಯಾಡ್‍ನ ಮುಡಾ ಮೈದಾನದಲ್ಲಿ ಅ.19ರವರೆಗೆ ಆಹಾರ ಮೇಳ ನಡೆಯಲಿದೆ. ಇಂದು ಮಧ್ಯಾಹ್ನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಬಿ.ಜ್ಹೆಡ್.ಜಮೀರ್ ಅಹಮದ್ ಖಾನ್ ದಸರಾ ಆಹಾರ ಮೇಳಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇಲ್ಲಿ 98 ಮಳಿಗೆಗಳು ಹಾಗೂ ಲಲಿತ ಮಹಲ್ ಪ್ಯಾಲೇಸ್ ಮೈದಾನದ ಬಳಿಯ ಮೈದಾನದಲ್ಲಿ 75 ಮಳಿಗೆಗಳನ್ನು ಆಹಾರ ಮೇಳದಲ್ಲಿ ತೆರೆಯಲಾಗಿದ್ದು, ಹೋಟೆಲ್‍ಗಳಲ್ಲಿ ನಿಗದಿಪಡಿಸಿರುವ ದರಕ್ಕಿಂತ ಶೇ.30ರಷ್ಟು ಕಡಿಮೆ ದರದಲ್ಲಿ ಆಹಾರ ಪದಾರ್ಥಗಳು ಲಭ್ಯವಿವೆ. ಅಂತಾರಾಷ್ಟ್ರೀಯ ಆಹಾರ ಮಳಿಗೆ ಈ ಬಾರಿಯ ವಿಶೇಷ ಎಂದು ನುಡಿದರು.

ಮೈಸೂರು ದಸರಾ ಜಾತ್ಯಾತೀತ, ಸಾಮರಸ್ಯದ ಸಂಕೇತ. ನಾನು ಚಿಕ್ಕವನಾಗಿದ್ದಾಗ ಮೈಸೂರಿನಲ್ಲಿರುವ ನಮ್ಮ ಚಿಕ್ಕಪ್ಪ ಅವರ ಮನೆಗೆ ಕುಟುಂಬ ಸದಸ್ಯರೆಲ್ಲಾ ದಸರಾ ಹಬ್ಬಕ್ಕಾಗಿ ಬರುತ್ತಿದ್ದೆವು. ದೇಶದ ಯಾವ ಭಾಗದಲ್ಲೂ ಇಷ್ಟು ವಿಜೃಂಭಣೆಯಿಂದ ಉತ್ಸವ ನಡೆಯುತ್ತಿಲ್ಲ. ಮೈಸೂರು ದಸರಾವನ್ನು ಅತ್ಯಂತ ವೈಭವದಿಂದ ಆಚರಿಸಿಕೊಂಡು ಬರಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವಿದೇಶಿ ಆಹಾರ ಮಳಿಗೆ: ದೇಶ-ವಿದೇಶಗಳಲ್ಲಿ ಖ್ಯಾತಿಗೊಂಡಿರುವ ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ವಿದೇಶಿಗರ ದಂಡು ಕೂಡ ಹರಿದು ಬರುತ್ತದೆ. ಆಹಾರ ಮೇಳದಲ್ಲಿ ಹಲವರಿಗೆ ತಮ್ಮದೇ ನೆಲದ ಆಹಾರದ ರುಚಿ ಸವಿಯಲು ಅವಕಾಶ ಈ ಬಾರಿ ಲಭ್ಯವಾಗಿದೆ. ಮೈಸೂರು ವಿಶ್ವ ವಿದ್ಯಾಲಯ ಅಂತಾರಾಷ್ಟ್ರೀಯ ವಿದೇಶಿ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ಅಂತಾ ರಾಷ್ಟ್ರೀಯ ಕೇಂದ್ರದ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ನಡೆಯುವ ಆಹಾರ ಮೇಳದ ಪ್ರವೇಶ ದ್ವಾರದ ಎಡ ಭಾಗದಲ್ಲಿ ವಿದೇಶಿ ಆಹಾರ ಮಳಿಗೆ ನಿರ್ಮಿಸಲಾಗಿದೆ. 12 ದೇಶಗಳ ವಿದ್ಯಾರ್ಥಿಗಳ ತಂಡವು ಪ್ರತಿನಿತ್ಯ ಒಂದೊಂದು ದೇಶದ ಆಹಾರ ಪದಾರ್ಥ ಗಳನ್ನು ಮಾರಾಟ ಮಾಡಲಿದ್ದಾರೆ.

ತೀತರ್ ಫ್ರೈ ಸವಿ ರುಚಿ: ಕರ್ನಾಟಕ ಬುಡಕಟ್ಟು ಪರಿಷತ್‍ನಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದ ಎಡಬದಿಯಲ್ಲಿ ತಮ್ಮ ಮಳಿಗೆ ಆರಂಭಿಸಿದೆ. ಇಲ್ಲಿ ಈ ಬಾರಿಯ ವಿಶೇಷ ತಿನಿಸು ತೀತರ್ ಫ್ರೈ (ಗೌಜಲಕ್ಕಿ ಫ್ರೈ) ಮಾಂಸಾಹಾರ ಪ್ರಿಯರ ಬಾಯಿಯಲ್ಲಿ ನೀರೂರಿಸಲಿದೆ.

ಪಿರಿಯಾಪಟ್ಟಣ ತಾಲೂಕಿನ ಬುಡಕಟ್ಟು ಜನಾಂಗದವರು ತಮ್ಮ ಫಾರಂನಲ್ಲಿ ಸಾಕಿರುವ ಗೌಜಲಕ್ಕಿಗಳನ್ನು ತೀತರ್ ಫ್ರೈ ತಯಾರಿಕೆಗೆ ಬಳಸಲಾಗುತ್ತಿದೆ. ಒಂದು ತೀತರ್ ಫ್ರೈಗೆ 100 ರೂ. ನಿಗದಿಪಡಿಸಲಾಗಿದೆ. ಇದರೊಂದಿಗೆ ನಳ್ಳಿ ಸಾಂಬಾರು-ಮುದ್ದೆ ಊಟವೂ ಇಲ್ಲಿ ಲಭ್ಯವಿರುವುದು ವಿಶೇಷ. ಒಂದು ಮುದ್ದೆ ಯೊಂದಿಗೆ ಎರಡು ನಳ್ಳಿ ಇರುವ ಪ್ಲೇಟ್ ವೊಂದಕ್ಕೆ 100 ರೂ. ದರ ನಿಗದಿ ಮಾಡಲಾಗಿದೆ.

ಪಾಲಿಕೆ ಸದಸ್ಯ ಎನ್.ಧ್ರುವರಾಜ್, ಸಮೀ ಉಲ್ಲಾ, ಆಹಾರ, ನಾಗರಿಕ ಸರಬ ರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತ ಕುಮಾರ್, ಜಂಟಿ ನಿರ್ದೇಶಕ ಪಿ.ಶಿವಣ್ಣ, ಕಾಂಗ್ರೆಸ್ ಮುಖಂಡರಾದ ಹಿನಕಲ್ ಪ್ರಕಾಶ್, ಶಕೀಲ್ ಅಹಮದ್ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

Translate »