ಮೈಸೂರು: ಮೈಸೂರು-ಹುಣಸೂರು ರಸ್ತೆಯಲ್ಲಿ ಅಳವಡಿಸಿದ್ದ ಆಕ್ಷೇಪಾರ್ಹ ಜಾಹೀರಾತು ಹೋರ್ಡಿಂಗ್ ತೆರವಾಗಿದೆ. ಹಲವು ಅಡೆತಡೆಗಳ ನಡುವೆಯೂ ಸಂಸದ ಪ್ರತಾಪ್ ಸಿಂಹ ಅವರ ಮುತು ವರ್ಜಿಯಿಂದ ಇತ್ತೀಚೆಗಷ್ಟೇ ಕಲಾ ಮಂದಿರದಿಂದ ವಾಲ್ಮೀಕಿ ರಸ್ತೆ ಜಂಕ್ಷನ್‍ವರೆಗೆ ಅಭಿವೃದ್ಧಿ ಗೊಂಡಿರುವ ಮೈಸೂರು-ಹುಣಸೂರು ಹೆದ್ದಾರಿಯಲ್ಲಿ, ಅರೆನಗ್ನ ಪುರುಷ ಹಾಗೂ ಸ್ತ್ರೀ ರೂಪದರ್ಶಿಗಳಿರುವ ಒಳ ಉಡುಪು ಜಾಹೀರಾತು ಹೋರ್ಡಿಂಗ್ ಅಳವಡಿಸಲಾಗಿತ್ತು. ಈ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದ್ದ ಹಿನ್ನೆಲೆ ಯಲ್ಲಿ `ಮೈಸೂರು ಮಿತ್ರ’ನ ಅ.24ರ ಸಂಚಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ಪರಿಣಾಮ ಸಂಸದ ಪ್ರತಾಪ್‍ಸಿಂಹ ಅವರು, ಕೂಡಲೇ ಅಶ್ಲೀಲ ಜಾಹೀರಾತು ಹೋರ್ಡಿಂಗ್ ತೆರವುಗೊಳಿಸುವಂತೆ ನಗರ ಪಾಲಿಕೆಗೆ ತಾಕೀತು ಮಾಡಿದ್ದರು. ಹಾಗಾಗಿ ಇಂದು ಸಾರ್ವಜನಿಕರಿಗೆ ಮುಜುಗರ ಉಂಟು ಮಾಡುತ್ತಿದ್ದ ಆಕ್ಷೇಪಾರ್ಹ ಜಾಹೀರಾತನ್ನು ತೆರವುಗೊಳಿಸಿ, ಇತರೆ ವಾಣಿಜ್ಯ ಜಾಹೀರಾತು ಅಳವಡಿಸಲು ಅನುವು ಮಾಡಲಾಗಿದೆ. ಕಲಾಮಂದಿರ ಹಾಗೂ ವಾಲ್ಮೀಕಿ ರಸ್ತೆ ಜಂಕ್ಷನ್ ನಡುವಿನ ತಿರುವಿನಲ್ಲಿ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ರಸ್ತೆಯನ್ನು ನೇರಗೊಳಿಸಿ, ಅಭಿವೃದ್ಧಿಗೊಳಿಸುವ ಕಾಮಗಾರಿಯನ್ನು ಕೇಂದ್ರದ ಅನುದಾನದಲ್ಲಿ ಕೈಗೆತ್ತಿಕೊಂಡು, ಅನೇಕ ಅಡೆತಡೆಗಳ ನಡುವೆಯೂ ಪೂರ್ಣಗೊಳಿಸಲಾಗಿದೆ.
ಸಂಪೂರ್ಣವಾಗಿ ರಸ್ತೆ ನೇರಗೊಳಿಸುವ ಉದ್ದೇಶ ಸಾಕಾರವಾಗದಿದ್ದರೂ, ಅಪಾಯಕಾರಿಯಾಗಿದ್ದ ತಿರುವನ್ನು ಆದಷ್ಟು ನೇರಗೊಳಿಸಲಾಗಿದೆ. ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ಇರುವ ಜಾಗದಲ್ಲೇ ಫುಟ್‍ಪಾತ್ ನಿರ್ಮಿಸಲಾಗಿದೆ. ಪರಿಣಾಮ ಈವರೆಗೂ ಅಲ್ಲಿ ಅಪ ಘಾತ ಸಂಭವಿಸಿಲ್ಲ. ಆದರೆ ಅಭಿವೃದ್ಧಿಗೊಳಿಸಿರುವ ಈ ರಸ್ತೆಯಲ್ಲಿ ಜಲದರ್ಶಿನಿ ಅತಿಥಿ ಗೃಹ ಸಮೀಪದ ರಂಗಾ ಯಣ ಸಿಬ್ಬಂದಿ ವಸತಿ ಗೃಹದ ಬಳಿಯಿರುವ ದೊಡ್ಡ ಹೋರ್ಡಿಂಗ್‍ನಲ್ಲಿ ಅಶ್ಲೀಲ ಜಾಹೀರಾತು ಅಳವಡಿಸಲಾಗಿತ್ತು. ಇದರಿಂದ ಕೆಲ ವಾಹನ ಸವಾರರ ಗಮನ ಬೇರೆಡೆ ಸೆಳೆದು ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ನಾಗರಿಕರು, ತೆರವಿಗೆ ಆಗ್ರಹಿಸಿದ್ದರು.