ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಪ್ರತಿಭಟನಾ ಮೆರವಣಿಗೆ
ಮೈಸೂರು

ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಪ್ರತಿಭಟನಾ ಮೆರವಣಿಗೆ

October 26, 2018

ಮೈಸೂರು: ಗುತ್ತಿಗೆ ನೌಕರರಿಗೆ ಸಮಾನವೇತನ ಹಾಗೂ ಸೇವಾ ಭದ್ರತೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ವೇದಿಕೆ ಆಶ್ರಯದಲ್ಲಿ ನೂರಾರು ಗುತ್ತಿಗೆ ನೌಕರರು ಗುರುವಾರ ಮೈಸೂರಿನಲ್ಲಿ ಪ್ರತಿ ಭಟನಾ ಮೆರವಣಿಗೆ ನಡೆಸಿದರು.

ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಜಮಾಯಿಸಿದ ಅವರು ಸಾರ್ವಜನಿಕ ಆರೋಗ್ಯ ಇಲಾಖೆ ಬಲಗೊಳ್ಳಬೇಕು, ಗುತ್ತಿಗೆ ನೌಕರರಿಗೆ ಸಮಾನ ವೇತನ, ಸೇವಾ ಭದ್ರತೆ ಸಿಗ ಬೇಕು ಎಂಬಿತ್ಯಾದಿ ಘೋಷಣೆಗಳುಳ್ಳ ಭಿತ್ತಿಪತ್ರಗಳನ್ನು ಹಿಡಿದು ಅಲ್ಲಿಂದ ದೊಡ್ಡ ಗಡಿಯಾರ, ಗಾಂಧಿ ವೃತ್ತ, ವಿನೋಬಾ ರಸ್ತೆ, ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಅಲ್ಲಿ ಕೆಲ ಹೊತ್ತು ಧರಣಿ ನಡೆಸಿದ ಪ್ರತಿಭಟನಾ ಕಾರರು, ಸರ್ಕಾರದ ಗುತ್ತಿಗೆ ನೌಕರ ವಿರೋಧಿ ಕ್ರಮವನ್ನು ಖಂಡಿಸಿದರು.

ಗುತ್ತಿಗೆ ನೌಕರರಿಗೂ ಸಮಾನ ಸವ ಲತ್ತುಗಳನ್ನು ನೀಡಬೇಕೆಂದು ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶವನ್ನು ಸರ್ಕಾರ ಅನುಷ್ಠಾನಗೊಳಿಸಿಲ್ಲ. ಯಾವ ಸಮಯದಲ್ಲಿ ತಮ್ಮನ್ನು ಸೇವೆಯಿಂದ ಹೊರ ಹಾಕುತ್ತಾರೆಯೋ ಎಂಬಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂದು ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರ ಸಂಖ್ಯೆ, ಖಾಯಂ ನೌಕರರಿಗಿಂತ ಹೆಚ್ಚಿದೆ. ವಿವಿಧ ರೀತಿಯ ಅಪಾಯಗಳಿಗೆ ತಮ್ಮನ್ನು ಒಡ್ಡಿಕೊಂಡು ಕೆಲಸ ಮಾಡುವ ಎಲ್ಲಾ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಹಾಗೂ ಕೆಲಸದ ಸ್ಥಳದಲ್ಲಿ ಘನತೆಯನ್ನು ಖಾತರಿ ಪಡಿಸಬೇಕು ಎಂದು ಆಗ್ರಹಿಸಿದರು.

ಸುಪ್ರಿಂಕೋರ್ಟ್ 2016ರ ಅಕ್ಟೋಬರ್ ನಲ್ಲಿ ಸಮಾನ ವೇತನ ಕಡ್ಡಾಯಗೊಳಿಸಿ ದ್ದರೂ ಜಾರಿ ಮಾಡಿಲ್ಲ. ಹೀಗೆ ತಾರತಮ್ಯದಿಂದ ಕೂಡಿದ, ಘನತೆಯಿಲ್ಲದ, ಭದ್ರತೆಯಿಲ್ಲದ ಉದ್ಯೋಗ ಮಾಡುತ್ತಿರುವವರಿಂದ, ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ನೀಡುವು ದಾದರೂ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ತುರ್ತು ಆರೋಗ್ಯ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುವ ನೌಕರರನ್ನು ಹೊರತು ಪಡಿಸಿ, ಗುತ್ತಿಗೆ ವೈದ್ಯಾಧಿಕಾರಿಗಳು, ನೇತ್ರ ಪರೀಕ್ಷಕರು, ಲ್ಯಾಬ್ ತಂತ್ರಜ್ಞರು, ಸ್ಟಾಫ್ ನರ್ಸ್‍ಗಳು, ಆಂಬ್ಯುಲೆನ್ಸ್ ಚಾಲಕರು, ಗ್ರೂಪ್ `ಡಿ’ ನೌಕರರು, ಕ್ಷಯರೋಗ ಮೇಲ್ವಿ ಚಾರಕರು ಮತ್ತು ಸಿಬ್ಬಂದಿ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗ ವಹಿಸಿದ್ದರು. ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ವೇದಿಕೆಯ ಮೈಸೂರು ಜಿಲ್ಲಾಧ್ಯಕ್ಷ ಡಾ. ಅರಸು, ಉಪಾಧ್ಯಕ್ಷ ರಾಜೇಶ್, ಕಾರ್ಯದರ್ಶಿ ಶಶಿಧರ, ಪದಾಧಿಕಾರಿಗಳಾದ ಹರೀಶ್, ಶಿವಕುಮಾರ್, ಡಾ.ಶ್ರೀವತ್ಸ ಇನ್ನಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Translate »