ಮೈಸೂರು: ಆಹಾರ ಉಪ ಸಮಿತಿ ವತಿಯಿಂದ ಆಯೋಜಿಸಿದ್ದ ನಾಟಿ ಕೋಳಿ ಸಾರು-ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣದ ಕೌಶಿಕ್ ಪ್ರಥಮ ಬಹುಮಾನ ಪಡೆದುಕೊಂಡರು.
ನಗರದ ಸ್ಕೌಟ್ಸ್ ಹಾಗೂ ಗೈಡ್ಸ್ ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ ಶುಕ್ರವಾರ ಪುರುಷರಿಗಾಗಿ ಆಯೋಜಿಸಿದ್ದ ನಾಟಿಕೋಳಿ ಸಾರು-ಮುದ್ದೆ ಉಣ್ಣುವ ಸ್ಪರ್ಧೆ ನಡೆಯಿತು. ಪ್ರತಿ ಸ್ಪರ್ಧಿಗಳಿಗೆ ಒಂದೂವರೆ ಕೆ.ಜಿ ತೂಕದ 4 ಮುದ್ದೆಗಳನ್ನು ನೀಡಲಾಗಿತ್ತು. ಸ್ಪರ್ಧೆ ಆರಂಭವಾಗುತ್ತಿದ್ದಂತೆ ತಮ್ಮ ಮುಂದಿಟ್ಟಿದ್ದ ಮುದ್ದೆಗಳನ್ನು ಬಿರುಸಾಗಿ ನುಂಗಲು ಕೆಲವರು ಪರದಾಡಿದರೆ, ಮತ್ತೆ ಕೆಲವರು ಸರಾಗವಾಗಿ ತಿಂದು ಮುಗಿಸಿದರು.
ಈ ಸ್ಫರ್ಧೆಯಲ್ಲಿ 10 ಮಂದಿ ಪುರುಷರು ಭಾಗವಹಿಸಿದ್ದು, ಮಂಡ್ಯ ಸರ್ಕಾರಿ ಕಾಲೇಜಿನಲ್ಲಿ ಎಂಕಾಂ ವಿದ್ಯಾಭ್ಯಾಸ ಮಾಡುತ್ತಿರುವ ಶ್ರೀರಂಗ ಪಟ್ಟಣದ ಕೌಶಿಕ್ 4 ರಾಗಿ ಮುದ್ದೆಗಳನ್ನು ಎಲ್ಲರಿಗಿಂತ ಮೊದಲು ಉಂಡು ಮುಗಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, ಶಿವಾನಂದ್ ದ್ವಿತೀಯ ಹಾಗೂ ಕ್ರಮವಾಗಿ ಜಂಗ್ಲಿ ಹೊಸೂರು, ಲಕ್ಷ್ಮಣ್ ಹಾಗೂ ದೇವರಾಜು ತೃತೀಯ ಸ್ಥಾನ ಪಡೆದರು.
ಈ ವೇಳೆ ಆಹಾರ ಮೇಳ ಉಪಸಮಿತಿ ಕಾರ್ಯಾಧ್ಯಕ್ಷ ಪಿ.ಶಿವಣ್ಣ ಇದ್ದರು.