ಮೈಸೂರು: `ನಾಜೂಕಿನ ನಾರಿ ಜನಜಂಗುಳಿ ಇರುವಲ್ಲಿ ಮೈ ತೋರಿ… ಗಾಳಿಗೂ ಎದುರಿ ತುಳುಕುವಳು ಮಾದ ಕತೆಯ ಬೀರಿ…’ ಈ ರೀತಿ ತಮ್ಮದೇ ಕವನವನ್ನು ವಾಚಿಸುವ ಮೂಲಕ ಹಿರಿಯ ಸಾಹಿತಿ ನಾಡೋಜ ಡಾ.ಹಂಪ ನಾಗರಾಜಯ್ಯ ಸಭಿಕ ರನ್ನು ನಗೆಗಡಲಲ್ಲಿ ತೇಲಿಸಿ ಚಂದುಳ್ಳಿ ಚೆಲುವೆಯೂ ಸಭಾಂ ಗಣದಲ್ಲಿ ಸುಳಿದಾಡುವಂತೆ ಮಾಡಿ ಪುಳಕವಿಟ್ಟರು.
ಮೈಸೂರಿನ ಮಾನಸ ಗಂಗೋತ್ರಿಯ ಮೈಸೂರು ವಿವಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶುಕ್ರವಾರ ದಸರಾ ಕವಿಗೋಷ್ಠಿ ಉಪ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮೂರು ದಿನಗಳ ಕಾಲ ನಡೆಯುವ ದಸರಾ ಕವಿಗೋಷ್ಠಿ ಉದ್ಘಾಟಿಸಿ ಈ ರೀತಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಸಭಿಕರ ಎದೆಗೆ ಲಗ್ಗೆಯಿಟ್ಟರು.
ಮಾದಕ ಚೆಲುವೆ ವೈಯ್ಯಾರವನ್ನು ಬಣ್ಣಿಸಿದ ಹಂಪನಾ ಅವರು, ವ್ಯಕ್ತಿಯೊಬ್ಬ ಬದುಕ್ಕಿದ್ದಾಗ ನೀಡುವ ಕೊಡುಗೆಗೆ ಆಗಲೇ ಶ್ರೇಯಸ್ಸು ದಕ್ಕಬೇಕೆಂಬ ಸಂದೇಶ ಹೊಂದಿರುವ ತಮ್ಮದೇ ಮತ್ತೊಂದು ಕವನ ವಾಚಿಸಿ ಸಭಿಕರನ್ನು ಚಿಂತನೆಗೂ ಹಚ್ಚಿದರು. ವ್ಯಕ್ತಿ ಜೀವಿತವಿದ್ದಾಗ ಪುರಸ್ಕಾರ ನೀಡುವುದಿಲ್ಲ. ಆದರೆ ಸಾವನ್ನಪ್ಪಿದ ಮೇಲೆ ಅದ್ಧೂರಿ ಆಚರಣೆಗಳಿಂದೇನು ಪ್ರಯೋಜನ ಎಂಬ ಸಾರಾಂಶ ಹೊಂದಿ ರುವ `ಸತ್ತ ಮೇಲೆ ಸುರಿಯುವ ಬಂಡಿಗಟ್ಟಲೆ ಹೂ ರಾಶಿಗಿಂತ ಬದುಕಿದ್ದಾಗ ಕೈಕುಲುಕಿ ಕೊಡುವ ಒಂದು ಹೂವು ಮಿಗಿಲು…’ ಕವನ ವಾಚಿಸಿ ವ್ಯಕ್ತಿಯೊಬ್ಬರ ಕೊಡುಗೆಗೆ ಅವರು ಬದುಕಿದ್ದಾಗ ಅದರ ಶ್ರೇಯಸ್ಸು ಸಲ್ಲಬೇಕು ಎಂದು ಪ್ರತಿಪಾದಿಸಿದರು.
ಇಂಗ್ಲಿಷ್‍ನಲ್ಲಿ ಇಲ್ಲ: ಕವಿಗಳಿಗೆ ಪ್ರೀತಿಪಾತ್ರರು ಎಂದರೆ ಕೇಳುವ ಕವಿಗಳು. ಅಂದರೆ ಸಹೃದಯ ಹೊಂದಿರುವವರು. `ಸಹೃದಯ’ ಪದಕ್ಕೆ ಇಂಗ್ಲಿಷ್‍ನಲ್ಲಿ ಸಮನಾದ ಶಬ್ಧವಿಲ್ಲ. ಕನ್ನಡ ಓದುಗ ಪದಕ್ಕೆ ಸಮನಾದ `ರೀಡರ್’ ಎಂಬುದನ್ನೇ ಈ ಸನ್ನಿವೇಶಕ್ಕೆ ಬಳಸಿಕೊಳ್ಳ ಲಾಗುತ್ತದೆ. ಶಬ್ಧ ಮೀರಿದ ಅರ್ಥ ಹಾಗೂ ಭಾವವನ್ನು ಕವಿ ಕಟ್ಟಿ ಕೊಡಬಲ್ಲ. ಕವಿಯಾದವನು ಭಾವಲೋಕದಲ್ಲಿ ವಿಹರಿಸಿ ಆನಂ ದಿಸುತ್ತಾನೆ. ಕವಿಗೋಷ್ಠಿ ಪರಂಪರೆ ಸಾವಿರಾರು ವರ್ಷಗಳಿಂದ ನಮ್ಮ ಸಮಾಜದಲ್ಲಿ ನಡೆದುಕೊಂಡು ಬಂದಿದೆ. ಸಮಾಜದ ಸತ್ವ ಕಾವ್ಯದ ಪ್ರತಿಬಿಂಬ ಆಗಬೇಕು ಎಂದು ನುಡಿದರು.
ಹೆಣ್ಣಲ್ಲಾ ಮಾಯೆ, ಈ ಮೈಕು!: ಹೆಣ್ಣು ಮಾಯೆ ಎನ್ನುತ್ತಾರೆ. ಆದರೆ ನಿಜವಾದ ಮಾಯೆ ಹೆಣ್ಣಾಲ್ಲ, ಈ ಮೈಕು ಎಂದು ಹೇಳುವ ಮೂಲಕ ಸಭಿಕರಿಗೆ ಹಂಪನಾ ಕಚಗುಳಿ ಇಟ್ಟರು. ಇದು ವೇಗದ ಜೀವನ ಶೈಲಿಯ ಕಾಲ. ಎಲ್ಲವೂ ಚೀಟಿಕೆ ಹೊಡೆಯುವಷ್ಟು ಸಮಯದಲ್ಲಿ ಮಾಡಿ ಮುಗಿಸಬೇಕೆನ್ನುವ ಮನೋಭಾವದ ಕಾಲ. ಆದರೆ ಅನೇಕರಿಗೆ ಮೈಕಿನ ವ್ಯಾಮೋಹ ಬಿಡುವುದಿಲ್ಲ. ಎಷ್ಟು ಮಾತನಾಡಿದರೂ ಮಾತ ನಾಡುವ ತವಕ ಇರುತ್ತದೆ. ಅಂದರೆ ಈ ಮೈಕು ಒಂದು ಮಾಯೆ ಎಂದು ನಕ್ಕುನಗಿಸಿದರು. ಬಳಿಕ ನಡೆದ ಚಿಗುರು ಕವಿಗೋಷ್ಠಿಯಲ್ಲಿ 30 ಮಂದಿ ವಿದ್ಯಾರ್ಥಿಗಳು ಕವನಗಳನ್ನು ವಾಚಿಸಿದರು. ಇವರ ಕವನಗಳಲ್ಲಿ ಸಾಮಾಜಿಕ ಸಮಸ್ಯೆಗಳು, ಜಾತಿ ಪದ್ಧತಿಯ ಕ್ರೌರ್ಯ, ವೇಶ್ಯೆಯ ಪರಿಪಾಟಲು, ನೆರೆ ಹಾವಳಿ, ಅಮ್ಮನ ಪ್ರೀತಿ ಸೇರಿದಂತೆ ಇನ್ನಿತರ ವಸ್ತುವಿಷಯಗಳನ್ನು ಒಳಗೊಂಡ ಕವಿತೆಗಳು ಅನಾವರಣ ಗೊಂಡವು. ಅತಿಥಿಯಾಗಿ ವಿದ್ವಾಂಸ ಪ್ರೊ.ಎಂ.ಕೃಷ್ಣೇಗೌಡ ಪಾಲ್ಗೊಂಡಿ ದ್ದರು. ಮೈಸೂರು ವಿವಿ ಕುಲಸಚಿವ ಹಾಗೂ ದಸರಾ ಕವಿಗೋಷ್ಠಿ ಉಪಸಮಿತಿ ವಿಶೇಷಾಧಿಕಾರಿ ಪ್ರೊ.ಆರ್.ರಾಜಣ್ಣ, ಕವಿಗಳಾದ ಚಿಂತಾಮಣಿ ಕೂಡ್ಲೆಕೆರೆ, ಡಾ.ಟಿ.ಯಲ್ಲಪ್ಪ, ದಸರಾ ಕವಿಗೋಷ್ಠಿ ಉಪಸಮಿತಿ ಕಾರ್ಯಾಧ್ಯಕ್ಷ ಪ್ರೊ.ಎಂ.ಜಿ.ಮಂಜುನಾಥ್, ಕಾರ್ಯ ದರ್ಶಿ ಎಂ.ಎಸ್.ಮರಿಸ್ವಾಮಿಗೌಡ ಮತ್ತಿತರರು ಹಾಜರಿದ್ದರು.