ಕಾಂಗ್ರೆಸ್ ವರಿಷ್ಠರಿಗೆ ಮಾಜಿ ಪ್ರಧಾನಿ ದೇವೇಗೌಡರ ಎಚ್ಚರಿಕೆ ಸಂದೇಶ
ಮೈಸೂರು

ಕಾಂಗ್ರೆಸ್ ವರಿಷ್ಠರಿಗೆ ಮಾಜಿ ಪ್ರಧಾನಿ ದೇವೇಗೌಡರ ಎಚ್ಚರಿಕೆ ಸಂದೇಶ

October 13, 2018

ಬೆಂಗಳೂರು: ಮೈತ್ರಿ ಧರ್ಮ ಪಾಲಿಸದಿದ್ದಲ್ಲಿ ತಾವು ರಾಜ್ಯದಲ್ಲಿ ಪರ್ಯಾಯ ಸರ್ಕಾರಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಕಾಂಗ್ರೆಸ್ ವರಿಷ್ಠರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಉಪಚುನಾವಣೆಯಲ್ಲಿ ಜೆಡಿಎಸ್‍ಗೆ ಬಿಟ್ಟುಕೊಟ್ಟಿರುವ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಕಾಂಗ್ರೆಸ್ ಮುಖಂಡರು ಬಹಿರಂಗವಾಗಿಯೇ ಬಂಡಾಯ ಸಾರಿರುವ ಬೆನ್ನಲ್ಲೇ ದೇವೇಗೌಡರು ಕಾಂಗ್ರೆಸ್ ವರಿಷ್ಠರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಉಪ ಚುನಾವಣೆ, ಸಂಪುಟ ಪುನರ್ ರಚನೆ ಹಾಗೂ ಅಧಿಕಾರ ಹಂಚಿಕೆ ಸೇರಿದಂತೆ ಹಲವು ವಿಷಯಗಳನ್ನು ಉಭಯ ಪಕ್ಷಗಳ ನಡುವೆ ಹೊಂದಾಣಿಕೆ ಇಲ್ಲದಿದ್ದಲ್ಲಿ ಮೈತ್ರಿ ಸರ್ಕಾರ ಮುಂದುವರೆಯುವುದು ಕಷ್ಟಸಾಧ್ಯವಾಗುತ್ತದೆ.

ಅಂತಹ ಪರಿಸ್ಥಿತಿಯಲ್ಲಿ ತಾವು ಪರ್ಯಾಯ ರಾಜಕೀಯ ಚಿಂತನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ದೇವೇಗೌಡರು ಕಾಂಗ್ರೆಸ್ ವರಿಷ್ಠರಿಗೆ ತಿಳಿಸಿದ್ದಾರೆನ್ನಲಾಗಿದೆ. ದೇವೇಗೌಡರ ಎಚ್ಚರಿಕೆ ಹಿನ್ನಲೆಯಲ್ಲಿಯೇ ಇಂದು ರಾಮನಗರಕ್ಕೆ ತೆರಳಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಉಪ ಚುನಾವಣೆಯಲ್ಲಿ ದೇಶದ ಹಿತದೃಷ್ಟಿಯಿಂದ ತ್ಯಾಗ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿಕೆ ನೀಡಿರುವುದಲ್ಲದೇ ಅತೃಪ್ತರನ್ನು ಸಮಾಧಾನಪಡಿಸುವ ಕೆಲಸಕ್ಕೆ ಕೈಹಾಕಿದರು. ಅದುಮಾತ್ರವಲ್ಲದೇ ಬಂಡಾಯ ಸಾರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಸಹ ಹೇಳಿಕೆ ನೀಡಿದರು ಎಂದು ಹೇಳಲಾಗಿದೆ.

Translate »