ಮೈತ್ರಿ ಸರ್ಕಾರ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ…
ಮೈಸೂರು

ಮೈತ್ರಿ ಸರ್ಕಾರ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ…

June 22, 2019

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ ಎಂದಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ವಿಧಾನಸಭೆಗೆ ಮಧ್ಯಂತರ ಚುನಾವಣೆ ನಿಶ್ಚಿತ ಎಂಬ ಸ್ಪಷ್ಟ ಸುಳಿವು ನೀಡಿದ್ದಾರೆ.

ಮಧ್ಯಂತರ ಚುನಾವಣೆ ಕುರಿತು ನಿನ್ನೆಯಷ್ಟೇ ಸ್ಪಷ್ಟೀ ಕರಣ ನೀಡಿದ್ದ ಗೌಡರು, ಇಂದು ಬೆಳ್ಳಂಬೆಳಿಗ್ಗೆ ಸುದ್ದಿ ಗಾರರಿಗೆ ಈ ವಿಷಯ ತಿಳಿಸಿರುವುದಲ್ಲದೆ, ಪರೋಕ್ಷ ವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ದೇವೇಗೌಡರ ಹೇಳಿಕೆ ಹೊರಬೀಳುತ್ತಿದ್ದಂತೆ, ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರಲ್ಲಿ ಸಂಚಲನ ಮೂಡಿಸಿದ್ದು, ಸಿದ್ದ ರಾಮಯ್ಯ ಹೊರತುಪಡಿಸಿ ಉಳಿದ ನಾಯಕರು, ಗೌಡ ರನ್ನು ಸಮಾಧಾನಪಡಿಸುವ ಹಾಗೂ ಮೈತ್ರಿ ಸರ್ಕಾರ ಉಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ಮಧ್ಯೆ ಪ್ರವಾಸ ದಲ್ಲಿರುವ ಮುಖ್ಯಮಂತ್ರಿ ಅವರು, ಗೌಡರ ಹೇಳಿಕೆಯನ್ನು ಮಾಧ್ಯಮದವರು ತಿರುಚಿದ್ದಾರೆ. ಅವರು ನಿನ್ನೆಯೇ ಮಧ್ಯಂತರ ಚುನಾವಣೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.

ಮೈತ್ರಿ ಸರ್ಕಾರ ಜನಪರವಾಗಿ ಕೆಲಸ ಮಾಡಿಕೊಂಡು ಹೋಗುತ್ತಿದೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಉಳಿದ ನಾಲ್ಕು ವರ್ಷದ ಆಡಳಿತಾವಧಿ ಪೂರೈಸುತ್ತೇವೆ. ಮಧ್ಯಂತರ ಚುನಾವಣೆಯ ಮಾತೇ ಇಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಭೇಟಿ, ಮಾಧ್ಯಮದಲ್ಲಿ ಬಂದಿರುವ ವರದಿ ಹಾಗೂ ತಮಗೆ ಆಂತರಿಕವಾಗಿ ದೊರೆತಿರುವ ಮಾಹಿತಿ ಹಿನ್ನೆಲೆಯಲ್ಲಿ ಗೌಡರು, ಸಿಎಲ್‍ಪಿ ನಾಯಕರ ವಿರುದ್ಧ ಕಿಡಿಕಾರಲು ಆರಂಭಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಕಾಂಗ್ರೆಸ್ ನಾಯಕರು ಯಾವುದೇ ಷರತ್ತಿಲ್ಲದೆ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಮುಂದೆ ಬಂದರು. ನಾನು, ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದೆ, ಆದರೆ ದೆಹಲಿ ನಾಯಕರು, ಕುಮಾರಸ್ವಾಮಿ ನಾಯಕತ್ವದಲ್ಲೇ ಸರ್ಕಾರ ರಚನೆಯಾಗಲಿ ಎಂದರು. ಅಂದು ಯಾವುದೇ ಷರತ್ತು ಇರಲಿಲ್ಲ, ನಂತರ ಅಧಿಕಾರದಲ್ಲಿ ಮೂರನೇ ಒಂದು ಭಾಗ ಎಂದರು. ಈಗ ಮೈತ್ರಿ ಪಕ್ಷಕ್ಕೆ ಅದೂ ಇಲ್ಲ. ನಮ್ಮ ಪಾಲಿನ ಒಂದು ಸಚಿವ ಸ್ಥಾನವನ್ನೂ ಕಿತ್ತುಕೊಂಡರು. ಎಲ್ಲವನ್ನೂ ಸಹಿಸಿಕೊಂಡು ಹೋಗುತ್ತಿದ್ದೇನೆ. ನಾನೇನಾದರೂ ಇದುವರೆಗೆ ಮಾತನಾಡಿದ್ದೇನೆಯೇ? ಎಂದು ಪ್ರಶ್ನಿಸಿದ್ದಾರೆ. ಲೋಕಸಭಾ ಚುನಾವಣಾ ಸೋಲಿಗೆ ಮೈತ್ರಿಯೇ ಕಾರಣ ಎನ್ನುತ್ತಿದ್ದಾರೆ, ಈ ಸರ್ಕಾರ ಉಳಿಯುವುದು, ಉರುಳುವುದು ದೆಹಲಿ ನಾಯಕರ ಕೈಯಲ್ಲಿದೆ. ಹಾಲಿ ಸಂಸದರಿರುವ ಕ್ಷೇತ್ರ ನಮಗೆ ಬೇಡ ಎಂದಿದ್ದೆ. ತುಮಕೂರು ಕ್ಷೇತ್ರವನ್ನು ನಾವು ಕೇಳಿರಲೇ ಇಲ್ಲ. ಕಾಂಗ್ರೆಸ್ ಸೋತಿದ್ದ ಕ್ಷೇತ್ರವನ್ನೇ ಕೊಡಿ ಎಂದಿದ್ದೆವು. ಮೈಸೂರು ಕ್ಷೇತ್ರಕ್ಕೋಸ್ಕರ ತುಮಕೂರು ನೀಡಿದರು. ಚುನಾವಣಾ ಸೋಲಿಗೆ ನಾವೇ ಕಾರಣ ಎಂದಾದರೆ, ಬಹಿರಂಗವಾಗಿ ಹೇಳಿಕೆ ನೀಡಲಿ. ಈ ವಿಷಯವಾಗಿ ಸಿದ್ದರಾಮಯ್ಯ ಸೇರಿದಂತೆ ದೆಹಲಿಗೆ ತೆರಳಿದ್ದ ರಾಜ್ಯ ಕಾಂಗ್ರೆಸ್ ನಾಯಕರು ಚರ್ಚೆ ಮಾಡಿ ಬಂದರೋ, ಹಾಗೆಯೇ ಬಂದರೋ ಗೊತ್ತಿಲ್ಲ. ಕಾಂಗ್ರೆಸ್‍ಗೆ ಸರ್ಕಾರ ನಡೆಸುವ ಮನಸ್ಸು ಇದೆಯೋ, ಇಲ್ಲವೋ ತಿಳಿದಿಲ್ಲ ಎಂದು ಮಾರ್ಮಿಕವಾಗಿ ನುಡಿದು, ತಕ್ಷಣವೇ ಯೋಗಾಭ್ಯಾಸ ಮತ್ತು ವ್ಯಾಯಾಮ ವಿಷಯದ ಕಡೆ ಹೊರಳಿದರು.

ಈ ಮಧ್ಯೆ, ಗೌಡರ ಹೇಳಿಕೆಗೆ ಪ್ರಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಆಸಕ್ತಿ ವಹಿಸಿ ಈ ಸರ್ಕಾರ ರಚನೆ ಮಾಡಿದ್ದಾರೆ. ನಮ್ಮಲ್ಲಿ ಸಣ್ಣ-ಪುಟ್ಟ ವ್ಯತ್ಯಾಸ ಇದೆ. ಆದರೆ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ, ದೇವೇಗೌಡರು ಅನುಭವಸ್ಥರು, ಹಿರಿಯರು, ಅವರು ನೀಡುವ ಹೇಳಿಕೆಗಳೆಲ್ಲಾ ಯೋಚನೆ ಮಾಡಿಯೇ ನೀಡಿರುತ್ತಾರೆ ಎಂದಿದ್ದಾರೆ.

ಉಲ್ಟಾ ಹೊಡೆದ ಮಾಜಿ ಪ್ರಧಾನಿ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ ರಾಜ್ಯದಲ್ಲಿ ಮಧ್ಯಂತರ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಈಗ ಉಲ್ಟಾ ಹೊಡೆ ದಿದ್ದು, ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಶುಕ್ರವಾರ ಆರೋಪಿಸಿದ್ದಾರೆ. ದೇವೇಗೌಡರ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿವೆ. ಅವರು ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಹೇಳಿಲ್ಲ. ಮುಂದಿನ ವರ್ಷ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾ ವಣೆಗೆ ಸಿದ್ಧರಾಗಿ ಎಂದು ದೇವೇಗೌಡರು ಹೇಳಿರುವು ದಾಗಿ ಜೆಡಿಎಸ್ ಮಾಧ್ಯಮ ಕಾರ್ಯದರ್ಶಿ ಕೆ.ಗುರುಪ್ರಸಾದ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಇಂದು ಬೆಳಗ್ಗೆಯಷ್ಟೇ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ದೇವೇಗೌಡ ಅವರು, ರಾಜ್ಯದ ದೋಸ್ತಿ ಸರ್ಕಾರ ಹೆಚ್ಚು ದಿನ ಬಾಳಿಕೆ ಬರುವಂತೆ ತೋರುತ್ತಿಲ್ಲ. ದೋಸ್ತಿ ಸರ್ಕಾರದ ಭವಿಷ್ಯ ಕಾಂಗ್ರೆಸ್ ಮುಖಂಡರ ಕೈಯ್ಯಲ್ಲಿದೆ. ಹೀಗೆ ಮುಂದುವರಿದರೆ ಮಧ್ಯಂತರ ಚುನಾವಣೆ ನಡೆಯೋ ಬಗ್ಗೆ ಸಂಶಯವೇ ಇಲ್ಲ ಎಂದಿದ್ದರು. ದೇವೇಗೌಡರ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟು ಮಾಡಿತ್ತು. ಈ ಮಧ್ಯೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ, ಕುಮಾರಸ್ವಾಮಿ ಅವರು ಮುಂದಿನ ನಾಲ್ಕು ವರ್ಷಗಳು ಪೂರೈಸು ತ್ತಾರೆ. ದೇವೇಗೌಡ ಇನ್ನು ನಾಲ್ಕು ವರ್ಷ ಕೆಲಸ ಮಾಡುವುದಕ್ಕೆ ಆಗುತ್ತಾ ಎಂದು ಭಾವಿಸಬೇಡಿ. ಜೆಡಿಎಸ್‍ನಲ್ಲಿ ಏನು ಗೊಂದಲ ಇಲ್ಲ. ಬಿಜೆಪಿಯವರಿಗೂ ಛಲ ಇದೆ. ಮೂರು ದಿನಕ್ಕೆ ಸಿಎಂ ಆದವರನ್ನು ತೆಗೆದರಲ್ಲ ಎನ್ನುವ ಭಾವನೆ ಇದೆ. ಹೀಗೆ ಆದಾಗ ಯಾರಾದರೂ ಸುಮ್ಮನೆ ಇರುತ್ತಾರಾ? ಪ್ರಯತ್ನ ಮಾಡುತ್ತಲೇ ಇರುತ್ತಾರೆ ಎಂದರು. ಪಕ್ಷ ಬಿಟ್ಟು ಹೋಗುತ್ತಾರೆ ಎಂದವರೆಲ್ಲ ನಮ್ಮ ಜತೆಯೇ ಇದ್ದಾರೆ. ಕಾಂಗ್ರೆಸ್‍ನಲ್ಲೂ ಸಿದ್ದರಾಮಯ್ಯ ಅವರ ಜತೆನೇ ಇದ್ದಾರೆ. ಕಾಂಗ್ರೆಸ್‍ನಿಂದ 5 ಜೆಡಿಎಸ್‍ನಿಂದ ಇಬ್ಬರು ಬಿಜೆಪಿಗೆ ಬರ್ತಾರೆ ಎಂದು ಹೇಳುತ್ತಲೆ ಇದ್ದಾರೆ. ನಾವು ಸೋತಿರುವ ಬಗ್ಗೆ ರಾಹುಲ್ ಗಾಂಧಿ ಜತೆ ಮಾತನಾಡಲೇ ಇಲ್ಲ. ಆದರೆ ಈ ಪ್ರಾದೇಶಿಕ ಪಕ್ಷವನ್ನು ಉಳಿಸಲೇಬೇಕಿದೆ. ಎರಡು ಪಕ್ಷದವರು ಸೇರಿ ಕೆಲಸ ಮಾಡಿದ್ದಾರೆ. ಈ ಸಾಧನೆ ಕುಮಾರಸ್ವಾಮಿ ಸಾಧನೆಯಲ್ಲ. ಮೈತ್ರಿ ಸರ್ಕಾರದ ಸಾಧನೆ ಎಂದರು.

 

Translate »