ಮೈಸೂರು, ಜ.6(ಆರ್‍ಕೆಬಿ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಯಾರಿಗೂ ಮಂಜೂರಾಗದೆ ಇರುವ 208 ಮನೆಗಳ ಪೈಕಿ ವಾಸವಾಗಿರುವ 185 ಬಡ ಫಲಾನುಭವಿಗಳಿಗೆ ಅಕ್ರಮ-ಸಕ್ರಮ ಯೋಜನೆಯಡಿ ಮಂಜೂರಾತಿ ಪತ್ರ ನೀಡ ಬೇಕು ಎಂದು ಆಗ್ರಹಿಸಿ ಜ.12ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಿರುವುದಾಗಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಅಧ್ಯಕ್ಷೆ ವಿ.ಪಿ.ಸುಶೀಲ ತಿಳಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 1985ರಲ್ಲಿ ಹುಡ್ಕೋ ಮನೆಗಳು, ಓವೈಎಚ್‍ಎಸ್ ಮನೆಗಳು, ಬ್ಯಾಂಕ್ ನೆರವಿನ ಯೋಜನೆಯಡಿ 12,145 ಮನೆಗಳ ನಿರ್ಮಾಣ ಮಾಡಿತ್ತು. 2018ರ ಮಾ.13ರಂದು ಮುಡಾ ಸಾಮಾನ್ಯ ಸಭೆ ನಡಾವಳಿ ಪುಸ್ತಕದ 74 ಮತ್ತು 75ನೇ ಪುಟದಲ್ಲಿರುವಂತೆ ಯಾರಿಗೂ ಮಂಜೂ ರಾಗದಿರುವ 208 ಮನೆಗಳ ಪೈಕಿ 185 ಮನೆಗಳಲ್ಲಿ ಕೂಲಿ ಕಾರ್ಮಿಕರು, ಹಿಂದುಳಿದ ವರ್ಗದವರು, ಬಡ ವರು ವಾಸವಾಗಿದ್ದಾರೆ. ಅಲ್ಲಿ ವಾಸಿಸುತ್ತಿರುವವರಿಗೆ ಅಕ್ರಮ ಸಕ್ರಮ ಯೋಜನೆಯಡಿ ಮಂಜೂರಾತಿ ಪತ್ರ ನೀಡಬೇಕು ಎಂದು ಆಗ್ರಹಿಸಿದರು. ಹಾಲಿ ವಾಸಿಸುತ್ತಿರು ವವರು ವಿದ್ಯುತ್ ಮತ್ತು ನೀರಿನ ಬಿಲ್, ಗ್ಯಾಸ್ ಬಿಲ್ ಪಾವತಿಸುತ್ತಿದ್ದಾರೆ. ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೂ ವಾಸಿಸುತ್ತಿರುವ ವಿಳಾಸವನ್ನೇ ನೀಡಿದ್ದಾರೆ. ಹಾಗಾಗಿ ಈ ಮನೆಗಳಲ್ಲಿ ಸ್ವಾಧೀನದಲ್ಲಿ ರುವವರಿಗೆ ಕರ್ನಾಟಕ ರಾಜ್ಯ ಪತ್ರ ಅಧಿಸೂಚನೆ ಸಂಖ್ಯೆ: ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಸಚಿವಾಲಯದ ಸದರಿ ಆದೇಶದಂತೆ 1985ನೇ ಸಾಲಿನಲ್ಲಿ ಸದರಿ ಮನೆಗಳಿಗೆ ಇದ್ದ ಬೆಲೆಯನ್ನು ಕಟ್ಟಿಸಿಕೊಂಡು ಮಂಜೂ ರಾತಿ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಸುಳ್ಳು ದಾಖಲೆ ಸೃಷ್ಟಿಸಿರುವವರ ವಿರುದ್ಧ ದೂರು ದಾಖಲಿಸಿ, ಕ್ರಮ ಕೈಗೊಳ್ಳಲು ನಮಗೆ ಅಭ್ಯಂತರವಿಲ್ಲ. ಆದರೆ ಸದರಿ ವಾಸ ವಿರುವವರಿಗೆ ಬೇರೆಡೆ ಮನೆ ಇಲ್ಲ. ಆದ್ದರಿಂದ ಇವರಿಗೆ ಮಂಜೂ ರಾತಿ ಪತ್ರ ನೀಡುವಂತೆ ಮನವಿ ಮಾಡಿದರು. ಗೋಷ್ಠಿಯಲ್ಲಿ ರಾಷ್ಟ್ರಕ್ರಾಂತಿ ಫೌಂಡೇಷನ್ ಅಧ್ಯಕ್ಷ ಜಿ.ಎಂ.ಮಹದೇವ, ಸಮಾಜ ಸೇವಕ ಶ್ರೀನಿವಾಸ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಪುಟ್ಟರಾಜು, ನಿರ್ದೇಶಕಿ ಭಾಗ್ಯಮ್ಮ ಉಪಸ್ಥಿತರಿದ್ದರು.