ವಿರಾಜಪೇಟೆ ಬೇಕರಿಗಳಿಗೆ ಕೇರಳ ತಿನಿಸು ರವಾನೆ ಅಧಿಕಾರಿಗಳ ಪರಿಶೀಲನೆ: ತಿನಿಸುಗಳ ವಶ
ಕೊಡಗು

ವಿರಾಜಪೇಟೆ ಬೇಕರಿಗಳಿಗೆ ಕೇರಳ ತಿನಿಸು ರವಾನೆ ಅಧಿಕಾರಿಗಳ ಪರಿಶೀಲನೆ: ತಿನಿಸುಗಳ ವಶ

April 21, 2020

ಮಡಿಕೇರಿ, ಏ.20- ಕೇರಳದ ಗಡಿ ಭಾಗವಾದ ಇರಟ್ಟಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೇಕರಿ ತಿನಿಸುಗಳು ವಿರಾಜ ಪೇಟೆ ನಗರದ ಆನೇಕ ಬೇಕರಿಗಳಲ್ಲಿ ಮಾರಾಟವಾಗುತ್ತಿದೆ ಎಂದು ಪಪಂ ಮುಖ್ಯಾಧಿಕಾರಿಗಳಿಗೆ ಅನಾಮಧೇಯ ದೂರವಾಣಿ ಕರೆ ಬಂದ ಹಿನ್ನೆಲೆಯಲ್ಲಿ ಪಪಂ ಆರೋಗ್ಯ ಅಧಿಕಾರಿ ಮತ್ತು ಸಿಬ್ಬಂದಿ ಇಂದು ವಿವಿಧ ಬೇಕರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೇರಳ ರಾಜ್ಯಕ್ಕೆ ಸೇರಿದ ಮಾಲೀಕರ 6 ಬೇಕರಿಗಳನ್ನು ಪರಿಶೀಲನೆ ಮಾಡಿದ ಸಂದರ್ಭ ಇತ್ತೀಚಿನ ದಿನಗಳಲ್ಲಿ ತಯಾರಿಸಿದ ಬೇಕರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಪಟ್ಟಣ ಪಂಚಾಯತಿ ಅಧಿಕಾರಿಗಳು ಖಾರ ಮತ್ತು ತಿಂಡಿ ಪದಾರ್ಥಗಳನ್ನು ವಶಪಡಿಸಿಕೊಂಡು ಬೇಕರಿ ಮಾಲೀಕರಿಗೆ ದಂಡ ವಿಧಿಸಿದರು. ಬೇಟೋಳಿ ಗ್ರಾಮದಲ್ಲಿ ಇವುಗಳನ್ನು ಶೇಖರಣೆ ಮಾಡುವ ಗೋಡೌನ್‍ನಲ್ಲಿ 5 ಲಕ್ಷ ರೂ. ಮೌಲ್ಯದ ತಿನಿಸುಗಳನ್ನು ದಾಸ್ತಾನು ಮಾಡಿರುವುದನ್ನು ಪತ್ತೆ ಹಚ್ಚಿದ ಅಲ್ಲಿನ ಪಿಡಿಒ ಮಣಿ, ಬಳಿಕ ಅದನ್ನು ವಶಪಡಿಸಿಕೊಂಡಿದ್ದಾರೆ.

ಕೇರಳ ರಾಜ್ಯದ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದ್ದರೂ ಕೂಡ ಈ ತಿಂಡಿಗಳು ವಿರಾಜಪೇಟೆಗೆ ಹೇಗೆ ಬಂತು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕೇರಳದ ಬೇಕರಿ ವ್ಯಾಪಾರಿಗಳು ತಿಂಡಿ ಪದಾರ್ಥಗಳನ್ನು ಸರಬರಾಜು ಮಾಡಲು ಅನ್ಯ ಮಾರ್ಗ ವನ್ನು ಕಂಡು ಹಿಡಿದಿರಬಹುದು ಎಂದು ಸಾರ್ವಜನಿಕರು ಶಂಕಿಸಿದ್ದಾರೆ. ತಕ್ಷಣವೇ ಈ ಕಳ್ಳ ರಸ್ತೆಯನ್ನು ಕೂಡ ಕಂಡು ಹಿಡಿಯಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

Translate »