ಒದೆ ಬಿದ್ದರೂ ನಮ್ಮ ಕೆಲಸ  ನಾವು ಮಾಡುತ್ತಲೇ ಇದ್ದೇವೆ
ಮೈಸೂರು

ಒದೆ ಬಿದ್ದರೂ ನಮ್ಮ ಕೆಲಸ ನಾವು ಮಾಡುತ್ತಲೇ ಇದ್ದೇವೆ

June 15, 2021

ಮೈಸೂರು, ಜೂ.14(ಎಂಕೆ)- ಎರಡ್ಮೂರು ಬಾರೀ ಸೋಂಕಿತರ ಸಂಬಂಧಿಕರಿಂದ ಒದೆ ಬಿದ್ದಿವೆ. ಆದರೂ ವೈದ್ಯರ ಪ್ರೋತ್ಸಾಹದ ಜೊತೆಗೆ ಜೀವ ಉಳಿಸುವುದು ಪುಣ್ಯದ ಕೆಲಸವೆಂದು ಸೇವೆ ಮಾಡುತ್ತಿದ್ದೇನೆ ಎಂಬುದು ಕೆಆರ್ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ವಿಭಾಗದಲ್ಲಿನ ಟ್ರಯಾಜ್ ಕೇಂದ್ರದ(ಸೋಂಕಿತರ ದಾಖಲಾತಿ ಮತ್ತು ಸಲಹೆ) ನಿರ್ವಹಣೆ ಜೊತೆಗೆ ಆಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿರುವ ಯು.ಸಂದೇಶ್ ಮಾನವೀಯ ನುಡಿಗಳಿವು.

ಕಳೆದ ಎರಡು ವರ್ಷಗಳಿಂದ ಕೆಆರ್ ಆಸ್ಪತ್ರೆಯಲ್ಲಿ ಸೇವೆ ಮಾಡು ತ್ತಿದ್ದು, ಸಂದರ್ಭಕ್ಕನುಸಾರ ವೈದ್ಯರು ಹೇಳುವ ಎಲ್ಲಾ ಬಗೆಯ ಕೆಲಸಗಳನ್ನು ಮಾಡುತ್ತಿದ್ದೇನೆ. ಮೊದಲು ಆಂಬುಲೆನ್ಸ್ ಡ್ರೈವರ್ ಆಗಿ ಕೆಲಸ ಆರಂಭಿಸಿ ದರೂ ಸದ್ಯಕ್ಕೆ ಟ್ರಯಾಜ್ ಕೇಂದ್ರದಲ್ಲಿ ಆಸ್ಪತ್ರೆಗೆ ಸೇರಲು ಬರುವ ಸೋಂಕಿತರಿಗೆ ಸಲಹೆ ನೀಡಿ, ದಾಖಲು ಮಾಡಿಕೊಳ್ಳುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. ಸೋಂಕಿತರ ಸಂಬಂಧಿಕರು ಗಲಾಟೆ ಮಾಡಿ ಏಟನ್ನು ಕೊಟ್ಟಿದ್ದಾರೆ ಎಂದು ‘ಮೈಸೂರು ಮಿತ್ರ’ನೊಂದಿಗೆ ಕೋವಿಡ್ ನಿರ್ವಹಣೆಯ ಅನುಭವ ಹಂಚಿಕೊಂಡರು.

ಆಸ್ಪತ್ರೆಗೆ ದಾಖಲಾಗುವ ವೇಳೆ ಕೊರೊನಾ ಸೋಂಕಿತರ ಸಹಾಯಕ್ಕಾಗಿ ಒಬ್ಬರು ಬಂದರೆ ಸಾಕು. ಐದಾರು ಮಂದಿ ಬರುವ ಅಗತ್ಯವಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕುತ್ತದೆಯೇ ಹೊರತು ಸೋಂಕು ನಿಯಂತ್ರಣ ಆಗುವುದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಮಾಸ್ಕ್, ಸ್ಯಾನಿಟೈಸರ್ ತಪ್ಪದೆ ಬಳಸಿದರೆ ಬಹುತೇಕ ಸೋಂಕು ಹರಡುವಿಕೆಯನ್ನು ತಡೆದಂತೆ ಎಂದು ಸಲಹೆ ನೀಡಿದರು.

ಆಸ್ಪತ್ರೆಗೆ ಬರುತ್ತಲೇ ಸೋಂಕಿತರು ಗಂಭೀರ ಸ್ಥಿತಿಯಲ್ಲಿದ್ದಾಗ ದಾಖಲು ಮಾಡಿ ಕೊಳ್ಳುವ ಮುನ್ನ ಮುಂದಾಗುವ ಸಾಧ್ಯತೆಗಳನ್ನು ತಿಳಿ ಹೇಳಿದರು ಕೆಲವರು ಕೇಳಿಸಿ ಕೊಳ್ಳುವುದಿಲ್ಲ. ಏಕಾಏಕಿ ಕೂಗಾಡುತ್ತಾರೆ. ಕೋವಿಡ್ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಿಗಿಂತಲೂ ಉತ್ತಮ ಚಿಕಿತ್ಸೆಯನ್ನು ಕೆಆರ್ ಆಸ್ಪತ್ರೆಯಲ್ಲಿ ನೀಡುತ್ತಿದ್ದೇವೆ. ಬೆಳಗ್ಗೆಯಿಂದ ಸಂಜೆವರೆಗೆ ಜೀವ ಉಳಿಸುವ ಪ್ರಯತ್ನ. ಕೆಲಸ ಮಾಡುವಾಗ ಅಡ್ಡಿಪಡಿಸ ಬಾರದು ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.

Translate »